ನವದೆಹಲಿ: ಐಪಿಎಲ್‌ನ ಮಂದಿನ 5 ವರ್ಷಗಳ ನೇರ ಪ್ರಸಾರದ ಹಕ್ಕುಗಳ ಹರಾಜಿನಲ್ಲಿ ಸ್ಟಾರ್ ಇಂಡಿಯಾ ಮತ್ತು ವಯಾಕಾಮ್18 ಸಿಂಹಪಾಲನ್ನು ಗೆದ್ದುಕೊಂಡಿವೆ. ಟೈಮ್ಸ್ ಇಂಟರ್‌ನೆಟ್ ಕೂಡ ಕೆಲ ಹಕ್ಕನ್ನು ಗಳಿಸಿದೆ.
ಕ್ರೀಡಾ ಇತಿಹಾಸದಲ್ಲಿಯೇ ಅತಿ ದೊಡ್ಡ ನೇರ ಪ್ರಸಾರದ ಡೀಲ್‌ಗಳಲ್ಲಿ ಇದೂ ಒಂದು ಎಂದು ಬಿಸಿಸಿಐ ಹೇಳಿಕೊಂಡಿದೆ. 2023-2027ರ ತನಕದ ಅವಧಿಯನ್ನು ಇದು ಹೊಂದಿದೆ. ಬಿಸಿಸಿಐಗೆ 48,390 ಕೋಟಿ ರೂ.ಗಳ ಭರ್ಜರಿ ಆದಾಯ ಲಭಿಸಿದೆ. ಇದರೊಂದಿಗೆ ಇಂಗ್ಲೆಂಡಿನ ದುಬಾರಿ ಫುಟ್ಬಾಲ್ ಪಂದ್ಯಾವಳಿಗಳ ನೇರ ಪ್ರಸಾರದ ಹಕ್ಕುಗಳಿಗಿಂತಲೂ ಹೆಚ್ಚಿನ ದರದಲ್ಲಿ ಐಪಿಎಲ್ ಹಕ್ಕುಗಳು ಮಾರಾಟವಾಗಿ ಹೊಸ ದಾಖಲೆ ಸೃಷ್ಟಿಸಿವೆ.
ಟಿವಿ ನೇರ ಪ್ರಸಾರದ ಹಕ್ಕು ಸ್ಟಾರ್ ಇಂಡಿಯಾ ತೆಕ್ಕೆಗೆ
ಡಿಸ್ನಿ ಸ್ಟಾರ್ ಅಧೀನದ ಸ್ಟಾರ್ ಇಂಡಿಯಾ ವಾಹಿನಿ ಭಾರತ ಉಪಖಂಡದಲ್ಲಿ ಟಿ.ವಿ ನೇರ ಪ್ರಸಾರದ ಹಕ್ಕುಗಳನ್ನು ಗೆದ್ದುಕೊಂಡು ತನ್ನಲ್ಲೇ ಉಳಿಸಿಕೊಂಡಿದೆ. ಅದು ಪ್ರತಿ ಪಂದ್ಯಕ್ಕೆ 57.5 ಕೋಟಿ ರೂ.ಗಳ ಲೆಕ್ಕದಲ್ಲಿ ಒಟ್ಟು 23,575 ಕೋಟಿ ರೂ.ಗೆ ಹಕ್ಕನ್ನು ತನ್ನದಾಗಿಸಿದೆ.
ಡಿಜಿಟಲ್ ನೇರ ಪ್ರಸಾರದ ಹಕ್ಕು ವಯಾಕಾಮ್18 ಪಾಲು
ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ವಯಾಕಾಮ್18 ವಾಹಿನಿ ಡಿಜಿಟಲ್ ನೇರ ಪ್ರಸಾರದ ಹಕ್ಕುಗಳನ್ನು 20,500 ಕೋಟಿ ರೂ.ಗೆ ಗೆದ್ದುಕೊಂಡಿದೆ. ಅದು 2,991 ಕೋಟಿ ರೂ.ಗೆ ಪ್ಯಾಕೇಜ್-ಸಿಯನ್ನು ಗೆದ್ದಿದೆ. ಸಾಗರೋತ್ತರ ಟಿವಿ ಮತ್ತು ಡಿಜಿಟಲ್ ಪ್ರಸಾರದ ಹಕ್ಕುಗಳನ್ನು ವಯಾಕಾಮ್ 18 ಮತ್ತು ಟೈಮ್ಸ್ ಇಂಟರ್‌ನೆಟ್ 1324 ಕೋಟಿ ರೂ.ಗೆ ತಮ್ಮದಾಗಿಸಿವೆ.
” ಐಪಿಎಲ್ ನೇರ ಪ್ರಸಾರದ ಹಕ್ಕುಗಳಿಂದ ಬರುವ ಹಣವನ್ನು ದೇಶೀಯ ಕ್ರಿಕೆಟ್ ಅನ್ನು ತಳಮಟ್ಟದಿಂದ ಬಲಪಡಿಸಲು ಬಳಸಲಾಗುವುದುʼʼ ಎಂದು ಬಿಸಿಸಿಐ ಕಾರ್ಯದರ್ಶಿ ಜೇ ಶಾ ತಿಳಿಸಿದ್ದಾರೆ. ಮಾಜಿ ಕ್ರಿಕೆಟಿಗರಿಗೆ ಮಾಸಿಕ ಪಿಂಚಣಿ ಏರಿಕೆಯನ್ನೂ ಅವರು ಘೋಷಿಸಿದ್ದಾರೆ.
ಈ ಭಾರಿ ಯಶಸ್ಸಿನ ಪರಿಣಾಮ ಐಪಿಎಲ್ ಇದೀಗ ಅಮೆರಿಕದ ನ್ಯಾಶನಲ್ ಫುಟ್ಬಾಲ್ ಲೀಗ್, ನ್ಯಾಶನಲ್ ಬಾಸ್ಕೆಟ್ ಬಾಲ್ ಅಸೋಸಿಯೇಶನ್, ಇಂಗ್ಲೆಂಡ್‌ನ ಇಂಗ್ಲಿಷ್ ಪ್ರೀಮಿಯರ್ ಲೀಗ್ ಮಾದರಿಯಲ್ಲಿ ಮಹತ್ವದ ಕ್ರೀಡಾ ಲೀಗ್ ಆಗಿ ಹೊರಹೊಮ್ಮಿದೆ.
ಇದನ್ನೂ ಓದಿ:ವಿಸ್ತಾರ Explainer : IPL ಪ್ರಸಾರ ಹಕ್ಕಿಗಾಗಿ ದಿಗ್ಗಜರ ವಾರ್!