ನವ ದೆಹಲಿ: ಹಂಗೇರಿ-ಅಮೆರಿಕ ಮೂಲದ ಬಿಲಿಯನೇರ್ ಉದ್ಯಮಿ, ಹೂಡಿಕೆದಾರ ಜಾರ್ಜ್ ಸೊರೊಸ್, ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ವಿರುದ್ಧ ಹಿಂಡೆನ್‌ಬರ್ಗ್ ನಡೆಸಿದಂತೆ ಶಾರ್ಟ್ ಸೆಲ್ಲಿಂಗ್ ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ವಿದೇಶಿ ವಿನಿಮಯ ಕೇಂದ್ರಗಳಲ್ಲಿ ರೂಪಾಯಿಯನ್ನು ಸುಲಭವಾಗಿ ದೊಡ್ಡ ಪ್ರಮಾಣದಲ್ಲಿ ಚಿನ್ನ ಅಥವಾ ಇತರ ಕರೆನ್ಸಿಗೆ ಪರಿವರ್ತಿಸಲು ಸಾಧ್ಯವಾಗುವುದಿಲ್ಲ. (George Soros Row) ಅದಕ್ಕೆ ಅನುಮೋದನೆ ಬೇಕಾಗುತ್ತದೆ. ಹೀಗಾಗಿ ಜಾರ್ಜ್ ಸೋರೊಸ್‌ಗೆ 1998ರಲ್ಲಿ ಲಭಿಸಿದಷ್ಟು ಅನೂಹ್ಯ ಲಾಭ ಸಿಗದು. ಆದರೆ ಸ್ಟಾಕ್ ಮಾರ್ಕೆಟ್ ಮೇಲೆ ಕಣ್ಣಿಡುವ ಸಾಧ್ಯತೆ ಇದೆ, ಅಂದರೆ ಭಾರತೀಯ ಷೇರು ಮಾರುಕಟ್ಟೆಯನ್ನು ಆಧರಿಸಿ ಶಾರ್ಟ್ ಸೆಲ್ಲಿಂಗ್ ಮಾಡಿ ಲಾಭ ಗಳಿಸಲು ಯತ್ನಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಹಿಂಡೆನ್ ಬರ್ಗ್ ವರದಿಯ ಬಳಿಕ ಅದಾನಿ ಸಮೂಹದ ಕಂಪನಿಗಳ ಷೇರು ಬಿಕ್ಕಟ್ಟು ಸಂಭವಿಸಿತ್ತು. ಸಂಸತ್ತಿನಲ್ಲೂ ಇದು ಮಾರ್ದನಿಸಿತ್ತು. ಈ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಮೋದಿ ಉತ್ತರ ಕೊಡಬೇಕು, ಅಂತಾರಾಷ್ಟ್ರೀಯ ಹೂಡಿಕೆದಾರರ ಪ್ರಶ್ನೆಗಳಿಗೆ ವಿವರಿಸಬೇಕು ಎಂದು ಜಾರ್ಜ್ ಸೊರೊಸ್ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವದ ಹಿತಾಸಕ್ತಿಗೆ ಸಾಂಸ್ಥಿಕ ಸುಧಾರಣೆ ಆಗಬೇಕು ಎಂದು ಒತ್ತಾಯಿಸಿದ್ದರು. ಸೊರೊಸ್ ಹೇಳಿಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.
ನ್ಯೂಯಾರ್ಕ್‌ನಲ್ಲಿ ಕುಳಿತಿರುವ ವಯೋವೃದ್ಧ, ಪೂರ್ವಾಗ್ರಹಪೀಡಿತ, ಶ್ರೀಮಂತ ವ್ಯಕ್ತಿಯೊಬ್ಬ ಈಗಲೂ ಇಡೀ ಜಗತ್ತು ತನ್ನ ಇಚ್ಛೆಯಂತೆ ನಡೆಯುತ್ತಿದೆ ಎಂದು ಭಾವಿಸಿದ್ದಾನೆ ಎಂದು ಜಾರ್ಜ್ ಸೊರೊಸ್ ಅವರನ್ನುದ್ದೇಶಿಸಿ ತರಾಟೆಗೆ ತೆಗೆದುಕೊಂಡಿದ್ದರು ವಿದೇಶಾಂಗ ಸಚಿವ ಜೈ ಶಂಕರ್.
ಅಮೆರಿಕದ ಹೂಡಿಕೆದಾರ ಜಾರ್ಜ್ ಸೊರೊಸ್ ಹಂಗೇರಿ ಮೂಲದ ವ್ಯಕ್ತಿ. 1930ರಲ್ಲಿ ಜನಿಸಿದವರು. ಯೆಹೂದಿ ಕುಟುಂಬದವರಾಗಿದ್ದರೂ, ಆಚರಣೆಯಲ್ಲಿ ಉಳಿಸಿಕೊಂಡಿಲ್ಲ. ಎರಡನೇ ಮಹಾ ಯುದ್ಧದ ಬಳಿಕ ಇಂಗ್ಲೆಂಡ್‌ಗೆ ವಲಸೆ ಬಂದಿದ್ದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಓದಿದ್ದರು. 1969ರಲ್ಲಿ ತಮ್ಮ ಸೊರೊಸ್ ಹೆಡ್ಜ್ ಫಂಡ್ ಎಂಬ ಹೂಡಿಕೆ ಕಂಪನಿಯನ್ನು ಸ್ಥಾಪಿಸಿದರು. 1992ರಲ್ಲಿ ಬ್ರಿಟಿಷ್ ಪೌಂಡ್ ವಿರುದ್ಧ ಶಾರ್ಟ್ ಸೆಲ್ಲಿಂಗ್ ನಡೆಸಿ ಕೋಟ್ಯಂತರ ಡಾಲರ್ ಲಾಭ ಗಳಿಸಿದ್ದರು. 2006ರಲ್ಲಿ ಫ್ರಾನ್ಸ್ ಸುಪ್ರೀಂಕೋರ್ಟ್ ಜಾರ್ಜ್ ಸೊರೊಸ್ ವಿರುದ್ಧದ ಒಳ ವ್ಯವಹಾರ ಕೇಸ್‌ನಲ್ಲಿ ದೋಷಿ ಎಂದು ಪರಿಗಣಿಸಿತ್ತು.
ಏನಿದು ಶಾರ್ಟ್ ಸೆಲ್ಲಿಂಗ್? (Short selling)
ಶಾರ್ಟ್ ಸೆಲ್ಲಿಂಗ್ ಎಂಬುದು ಷೇರು ಮಾರುಕಟ್ಟೆಯಲ್ಲಿ ಟ್ರೇಡರ್‌ಗಳು ನಿರ್ದಿಷ್ಟ ಷೇರು ನಿರ್ದಿಷ್ಟ ಮೌಲ್ಯಕ್ಕೆ ಕುಸಿಯಲಿದೆ ಎಂದು ಮೊದಲೇ ಗ್ರಹಿಸಿ, ಷೇರು ದರ ಕುಸಿದಾಗ ಲಾಭ ಮಾಡಿಕೊಳ್ಳುವ ವ್ಯವಹಾರ. ಬಾಂಡ್ ಮತ್ತು ಕರೆನ್ಸಿಗಳ ಮೇಲೆಯೂ ಶಾರ್ಟ್ ಸೆಲ್ಲಿಂಗ್ ಮಾಡುವವರಿದ್ದಾರೆ.
ಈ ಹಿಂದೆ 1998ರಲ್ಲಿ ಜಾರ್ಜ್ ಸೊರೊಸ್ ಅವರು ಅಮೆರಿಕದ ಟಿವಿ ಶೋ ಒಂದರಲ್ಲಿ ಹಲವು ಪೂರ್ವ ಏಷ್ಯಾದ ರಾಷ್ಟ್ರಗಳ ಕರೆನ್ಸಿಗಳ ವಿರುದ್ಧ ನಡೆಸಿದ್ದ ಶಾರ್ಟ್ ಸೆಲ್ಲಿಂಗ್ ಬಗ್ಗೆ ಮಾತನಾಡಿದ್ದರು. ಆಗ ಮೂಲತಃ ನನ್ನ ಉದ್ದೇಶ ಹಣ ಮಾಡುವುದು ಅಷ್ಟೇ, ಆದರೆ ನನ್ನ ವ್ಯವಹಾರಗಳಿಂದ ಆಗಬಹುದಾದ ಸಾಮಾಜಿಕ ಪರಿಣಾಮಗಳ ಬಗ್ಗೆ ಅಷ್ಟಾಗಿ ಯೋಚಿಸುವುದಿಲ್ಲ. ಹೀಗಾಗಿ ನನಗೇನೂ ವಿಷಾದ ಉಂಟಾಗುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.