ನವ ದೆಹಲಿ: ಕೋರ್ಟ್ ಗಮನಕ್ಕೂ ತರದೆ ಅಕ್ರಮವಾಗಿ ೩೧೨ ಕೋಟಿ ರೂ.ಗಳನ್ನು ಮಕ್ಕಳ ಹೆಸರಿಗೆ ವರ್ಗಾಯಿಸಿದ್ದ ಹಾಗೂ ಅದಕ್ಕಾಗಿ ನ್ಯಾಯಾಂಗ ನಿಂದನೆ ಕೇಸ್ ಎದುರಿಸುತ್ತಿದ್ದ ಉದ್ಯಮಿ ವಿಜಯ್ ಮಲ್ಯ ಅವರಿಗೆ ಕೇವಲ ೨,೦೦೦ ರೂ. ದಂಡ ವಿಧಿಸಿದ್ದಕ್ಕೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ನಾನಾ ವಿಧದಲ್ಲಿ ಜೋಕ್‌ಗಳನ್ನು ಹರಿಬಿಟ್ಟಿದ್ದಾರೆ.
ಮಲ್ಯಗೆ ಬರೋಬ್ಬರಿ ದಂಡ ಆಯ್ತಲ್ವ, ಇನ್ನು ಮಲ್ಯ ದಂಡ ಕಟ್ಟಿ ದಿವಾಳಿ ಆಗೋದು ಗ್ಯಾರಂಟಿ, ಮಲ್ಯ ವಿರುದ್ಧ ಅತ್ಯಂತ ಕಠಿಣ ಕ್ರಮ, 9,000 ಕೋಟಿ ರೂ. ಲೂಟಿ ಹೊಡೆದ ವ್ಯಕ್ತಿಗೆ ೨,೦೦೦ ರೂ. ದಂಡ..ಇತ್ಯಾದಿ ಜೋಕ್‌ಗಳು ಹರಿದಾಡಿವೆ.
ಮಲ್ಯಗೆ ನಿರಾಸೆ: ಸುಪ್ರೀಂಕೋರ್ಟ್ ಆದೇಶದಿಂದ ನಿರಾಸೆಯಾಗಿದೆ ಎಂದು ಉದ್ಯಮಿ ವಿಜಯ್ ಮಲ್ಯ ಪ್ರತಿಕ್ರಿಯಿಸಿದ್ದಾರೆ. ತೀರ್ಪಿನ ಬಗ್ಗೆ ನಾನು ಹೆಚ್ಚೇನೂ ಹೇಳುವುದಿಲ್ಲ. ಸಹಜವಾಗಿ ನನಗೆ ನಿರಾಸೆಯಾಗಿದೆ ಎಂದು ಮಲ್ಯ ತಿಳಿಸಿದ್ದಾರೆ. ಮಕ್ಕಳಿಗೆ ಅಕ್ರಮವಾಗಿ ವರ್ಗಾಯಿಸಿರುವ ೩೧೨ ಕೋಟಿ ರೂ.ಗಳನ್ನು ವಾಪಸ್ ಕೊಡಬೇಕು ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ತಿಳಿಸಿತ್ತು.
ಕಾಯಿದೆ ಏನೆನ್ನುತ್ತದೆ?
ಕೊರ್ಟ್ ಯಾವಾಗಲೂ ಕಾನೂನು ಏನು ಹೇಳುತ್ತದೆಯೋ, ಅದರ ಪ್ರಕಾರ ನಡೆದುಕೊಳ್ಳುತ್ತದೆ. ನ್ಯಾಯಾಂಗ ನಿಂದನೆಯ ಪ್ರಕರಣಗಳಲ್ಲಿ ಅಪರಾಧ ದಂಡ ಸಂಹಿತೆಯ ಸೆಕ್ಷನ್ ೧೨ರ ನ್ಯಾಯಾಂಗ ನಿಂದನೆ ಕಾಯಿದೆ-೧೯೭೧ರ ಪ್ರಕಾರ, ತಪ್ಪಿತಸ್ಥರಿಗೆ ೨,೦೦೦ ರೂ. ತನಕ ದಂಡ ವಿಧಿಸಬಹುದು. ಈ ಕಾಯಿದೆಯನ್ನು ಗಮನಿಸಿದರೆ, ಅದರಡಿಯಲ್ಲಿ ಗರಿಷ್ಠ ಮೊತ್ತವನ್ನು ಮಲ್ಯಗೆ ಕೋರ್ಟ್ ವಿಧಿಸಿದೆ.
ಪ್ರಶಾಂತ್ ಭೂಷಣ್ ಅವರಿಗೆ ೧ ರೂ. ದಂಡ
ಸುಪ್ರೀಂಕೋರ್ಟ್ ೨೦೨೦ರಲ್ಲಿ ಪ್ರಶಾಂತ್ ಭೂಷಣ್ ಅವರಿಗೆ ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ೧ ರೂಪಾಯಿ ದಂಡ ಕಟ್ಟಲು ಆದೇಶಿಸಿತ್ತು. ತಪ್ಪಿದರೆ ಮೂರು ತಿಂಗಳು ಸೆರೆವಾಸ ಮಾಡಬೇಕು ಎಂದಿತ್ತು.
ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ೧ ರೂ. ದಂಡ
ಸುಪ್ರೀಂಕೋರ್ಟ್ ೨೦೨೧ರಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ, ವಿಭಾಗೀಯ ಬಡ್ತಿ ಕುರಿತ ವಿವಾದದಲ್ಲಿ ನ್ಯಾಯಾಂಗ ನಿಂದನೆಗೆ ೧ ರೂ. ದಂಡವನ್ನು ವಿಧಿಸಿತ್ತು.