ನವ ದೆಹಲಿ: ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್), ಇನ್ಫೋಸಿಸ್, ವಿಪ್ರೊ ಮತ್ತು ಎಚ್‌ಸಿಎಲ್ ಟೆಕ್ ಕಂಪನಿಯಲ್ಲಿ ಪ್ರಸಕ್ತ ಸಾಲಿನ ಮೊದಲಾರ್ಧದಲ್ಲಿ, ಅಂದರೆ ಏಪ್ರಿಲ್-ಸೆಪ್ಟೆಂಬರ್‌ನಲ್ಲಿ (IT Hiring) ನಿವ್ವಳ ನೇಮಕಾತಿಯಲ್ಲಿ 24% ಇಳಿಕೆಯಾಗಿದೆ.
ಐಟಿ ವಲಯದ ಈ ನಾಲ್ಕು ಪ್ರಮುಖ ಕಂಪನಿಗಳು 2021-22ರ ಏಪ್ರಿಲ್-ಸೆಪ್ಟೆಂಬರ್‌ನಲ್ಲಿ 107,616 ನಿವ್ವಳ ನೇಮಕಾತಿ ಮಾಡಿದ್ದರೆ, 2022-23ರಲ್ಲಿ 81,700 ಮಂದಿಯನ್ನು ನಿವ್ವಳ ನೇಮಿಸಿವೆ. ಈ ಕಂಪನಿಗಳು 2021-22ರಲ್ಲಿ 240,000 ನಿವ್ವಳ ನೇಮಕಾತಿಯನ್ನು ಮಾಡಿಕೊಂಡಿತ್ತು. ಉದ್ಯೋಗಿಗಳ ವಲಸೆ ಕಡಿಮೆಯಾಗಿರುವುದು, ಪ್ರತಿಭಾವಂತ ಉದ್ಯೋಗಿಗಳ ಕೊರತೆಯ ಸಮಸ್ಯೆ ಕೂಡ ತಗ್ಗುತ್ತಿರುವುದರಿಂದ ನಿವ್ವಳ ನೇಮಕಾತಿ ಕೂಡ ಕಡಿಮೆಯಾಗಿದೆ ಎಂದು ವರದಿಯಾಗಿದೆ.
ಅಮೆರಿಕ, ಯುರೋಪ್‌ನಲ್ಲಿ ಒಟ್ಟಾರೆಯಾಗಿ ಆರ್ಥಿಕ ಮಂದಗತಿ ಹಾಗೂ ಆರ್ಥಿಕ ಹಿಂಜರಿತದ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದಿದೆ. ಮುಂದಿನ ಎರಡು ತ್ರೈಮಾಸಿಕದಲ್ಲೂ ನಿವ್ವಳ ನೇಮಕಾತಿ ಇಳಿಕೆ ನಿರೀಕ್ಷಿಸಲಾಗಿದೆ ಎಂದು ಟೀಮ್‌ಲೀಸ್ ಡಿಜಿಟಲ್‌ನ ಹಿರಿಯ ಎಕ್ಸಿಕ್ಯುಟಿವ್ ಸುನಿಲ್ ಸಿ ತಿಳಿಸಿದ್ದಾರೆ.