Site icon Vistara News

IT Jobs | ಐಟಿ ಕಂಪನಿಗಳಿಂದ 6 ತಿಂಗಳಿನಲ್ಲಿ 1 ಲಕ್ಷ ಹೊಸಬರಿಗೆ ಉದ್ಯೋಗ

IT Job

ನವ ದೆಹಲಿ: ಟೆಕ್ಕಿಗಳಾಗಲು ಬಯಸುವವರಿಗೆ ಇದು ಸಿಹಿ ಸುದ್ದಿ. ಭಾರತದ ನಾಲ್ಕು ಪ್ರಮುಖ ಐಟಿ ಕಂಪನಿಗಳು 105,000 ಹೊಸಬರಿಗೆ ಪ್ರಸಕ್ತ ಸಾಲಿನ ಮೊದಲಾರ್ಧದಲ್ಲಿ ಉದ್ಯೋಗ ನೀಡಿವೆ. (IT Jobs ) ಕಳೆದ ವರ್ಷದ ಇದೇ ಅವಧಿಯಲ್ಲಿ 97,000 ಹೊಸಬರನ್ನು ನೇಮಕ ಮಾಡಿಕೊಳ್ಳಲಾಗಿತ್ತು. (ಟಿಸಿಎಸ್‌, ಇನ್ಫೋಸಿಸ್‌, ವಿಪ್ರೊ, ಎಚ್‌ಸಿಎಲ್‌ )

ಐಟಿ ಉದ್ದಿಮೆಯಲ್ಲಿ ಉದ್ಯೋಗಿಗಳ ವಲಸೆ ಕೂಡ ಉನ್ನತ ಮಟ್ಟದಲ್ಲಿದ್ದು, ಕಂಪನಿಗಳು ಹೊಸಬರ ನೇಮಕಾತಿಗೆ ಆದ್ಯತೆ ನೀಡಿತ್ತು. ಹೊಸಬರಿಗೆ ತರಬೇತಿ ಕಾರ್ಯಕ್ರಮವನ್ನೂ ವ್ಯಾಪಕವಾಗಿಸಲಾಗಿದೆ.

ಉದ್ಯೋಗಿಗಳ ವಲಸೆ ಇಳಿಮುಖ: ಪ್ರಸಕ್ತ ಸಾಲಿನ ಎರಡನೇ ದ್ವಿತೀಯಾರ್ಧದಲ್ಲಿ ಟಿಸಿಎಸ್‌ ಹೊರತುಪಡಿಸಿ ಉಳಿದ ಪ್ರಮುಖ ಐಟಿ ಕಂಪನಿಗಳಲ್ಲಿ ಉದ್ಯೋಗಿಗಳ ವಲಸೆ ಕಡಿಮೆಯಾಗಿದೆ. ಬಹುತೇಕ ಐಟಿ ಕಂಪನಿಗಳು ವಲಸೆಯನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿವೆ. ಪ್ರತಿಭಾವಂತ ಉದ್ಯೋಗಿಗಳಿಗೆ ಉತ್ತಮ ವೇತನವನ್ನೂ ನೀಡುತ್ತಿವೆ ಎಂದು ಎಚ್‌ಎಫ್‌ಎಸ್‌ ರಿಸರ್ಚ್‌ನ ಸಿಇಒ ಫಿಲ್‌ ಫ್ರೆಶ್ಟ್‌ ತಿಳಿಸಿದ್ದಾರೆ.

ಎರಡನೇ ತ್ರೈಮಾಸಿಕದಲ್ಲಿ ಐಟಿ ಕಂಪನಿಗಳು ಹೊಸಬರ ನೇಮಕಾತಿ ವಿಚಾರದಲ್ಲಿ ಯಾವುದೇ ಮಹತ್ವದ ಬದಲಾವಣೆಯನ್ನು ಮಾಡಿಲ್ಲ. ಟಿಸಿಎಸ್‌ ಮಾತ್ರ 40,000 ಬದಲಿಗೆ 47,000 ಟೆಕ್ಕಿಗಳನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗಿವೆ.

” ಕಳೆದ ಎರಡು ತ್ರೈಮಾಸಿಕಗಳಲ್ಲಿ 35,000 ಹೊಸಬರನ್ನು ನೇಮಕ ಮಾಡಿಕೊಂಡಿದ್ದೇವೆ. ನೇಮಕಾತಿ ಪ್ರಕ್ರಿಯೆ ಮುಂದುವರಿಯಲಿದೆʼʼ ಎಂದು ಟಿಸಿಎಸ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್‌ ಲಕ್ಕಡ್‌ ತಿಳಿಸಿದ್ದಾರೆ. 2021-22ರಲ್ಲಿ ಟಾಪ್‌ ನಾಲ್ಕು ಐಟಿ ಕಂಪನಿಗಳು 230,000 ಹೊಸಬರನ್ನು ನೇಮಕ ಮಾಡಿಕೊಂಡಿತ್ತು. 2023ರ ವೇಳೆಗೆ ಒಟ್ಟು 157,000 ಹೊಸಬರನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ. ಅಂದರೆ ಕಳೆದ ಸಾಲಿಗೆ ಹೋಲಿಸಿದರೆ 30% ಇಳಿಕೆಯಾಗುವ ನಿರೀಕ್ಷೆ ಇದೆ. ಹೀಗಿದ್ದರೂ, ಇತರ ವಲಯಗಳನ್ನು ಹೋಲಿಸಿದರೆ ಐಟಿ ಕ್ಷೇತ್ರ ಭರವಸೆ ಹುಟ್ಟಿಸಿದೆ.

ನೇಮಕಾತಿ ಮುಂದುವರಿಸಲಿರುವ ಪ್ರಮುಖ ಕಂಪನಿಗಳು : ಇನ್ಫೋಸಿಸ್‌ ಪ್ರಸಕ್ತ ಸಾಲಿನಲ್ಲಿ 50,000 ಮಂದಿಯನ್ನು ನೇಮಕ ಮಾಡಿಕೊಳ್ಳಲಿದೆ. ವಿಪ್ರೊ 30,000 ಹೊಸಬರನ್ನು ನೇಮಕ ಮಾಡಿಕೊಳ್ಳಲಿದೆ. ಎಚ್‌ಸಿಎಲ್‌ ಟೆಕ್‌ ಕೂಡ ಪ್ರಸಕ್ತ ಸಾಲಿನ ಮೊದಲಾರ್ಧದಲ್ಲಿ 16,000 ಹೊಸಬರನ್ನು ನೇಮಕ ಮಾಡಿತ್ತು. ಇಡೀ ಸಾಲಿನಲ್ಲಿ ಒಟ್ಟು 30,000 ಮಂದಿಯನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.

Exit mobile version