ಮುಂಬಯಿ: ಹಲವಾರು ಉದ್ದಿಮೆಗಳನ್ನು ನಡೆಸುತ್ತಿರುವ ಐಟಿಸಿ (ITC) ಕಂಪನಿಯ ಷೇರು ದರ ಮಂಗಳವಾರ ಸಾರ್ವಕಾಲಿಕ ಎತ್ತರಕ್ಕೇರಿದ್ದು, ಮಾರುಕಟ್ಟೆ ಮೌಲ್ಯದ ದೃಷ್ಟಿಯಿಂದ 6ನೇ ಅತಿ ದೊಡ್ಡ ಕಂಪನಿಯಾಗಿದೆ. ಈ ಮೂಲಕ ಐಟಿ ದಿಗ್ಗಜ ಇನ್ಫೋಸಿಸ್ ಅನ್ನೂ ಹಿಂದಿಕ್ಕಿದೆ. (Infosys) ಐಟಿಸಿ ಷೇರು ದರ ಸೋಮವಾರ 0.5% ಏರಿದ್ದು, 410 ರೂ.ಗೆ ವೃದ್ಧಿಸಿದೆ. ಒಂದು ಹಂತದಲ್ಲಿ 413 ರೂ.ಗೆ ಏರಿತ್ತು.
ಇನ್ಫೋಸಿಸ್‌ನ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯವು 5.06 ಲಕ್ಷ ಕೋಟಿ ರೂ.ಗಳಾಗಿದ್ದರೆ, ಐಟಿಸಿಯದ್ದು 5.11 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.
ಕಳೆದ ಒಂದು ವರ್ಷದಲ್ಲಿ ಐಟಿಸಿ ಷೇರು 61% ಆದಾಯ ನೀಡಿತ್ತು. ಸಿಗರೇಟ್ ಮಾರಾಟದಲ್ಲಿ ಎರಡಂಕಿಯ ಬೆಳವಣಿಗೆ ದಾಖಲಿಸಿರುವ ಐಟಿಸಿ, ಎಫ್‌ಎಂಸಿಜಿ ವಲಯದಲ್ಲೂ ವೇಗವಾಗಿ ಬೆಳೆಯುತ್ತಿದೆ. ಎಚ್‌ಯುಎಲ್ ಈಗಾಗಲೇ ಹಲವಾರು ಕ್ಷೇತ್ರಗಳಲ್ಲಿ ನಾಯಕತ್ವದ ಸ್ಥಾನದಲ್ಲಿದ್ದರೂ, ಬೆಳವಣಿಗೆಯ ವೇಗವು ಐಟಿಸಿಗಿಂತ ಮಂದಗತಿಯಲ್ಲಿದೆ. ಕೋಟಕ್ ಸೆಕ್ಯುರಿಟೀಸ್ ಪ್ರಕಾರ ಐಟಿಸಿ ಷೇರು ದರ ಶೀಘ್ರದಲ್ಲಿ 420 ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ. ಸಿಗರೇಟ್ ಉತ್ಪಾದನೆಗೆ ಸೀಮಿತವಾಗಿರದೆ, ಎಫ್‌ಎಂಸಿಜಿ ವಲಯದಲ್ಲಿ ತ್ವರಿತ ಮುನ್ನಡೆ ಕಾಯ್ದುಕೊಂಡಿರುವುದು ಐಟಿಸಿಯ ಯಶಸ್ಸಿಗೆ ಕಾರಣ ಎನ್ನಲಾಗುತ್ತಿದೆ.
ಸಿಗರೇಟ್ ಮೇಲೆ ಸರ್ಕಾರ ತೆರಿಗೆ ಏರಿಸಿದ್ದರೂ, ಅದರ ಮಾರಾಟದ ಮೇಲೆ ಪ್ರಭಾವ ಬೀರಿಲ್ಲ. ಮತ್ತೊಂದು ಕಡೆ ಇತರ ಬಿಸಿನೆಸ್ ಸುಧಾರಿಸಿದೆ. ಹೀಗಾಗಿ ಷೇರು ದರ ಚೇತರಿಸಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಐಟಿಸಿ ಷೇರುಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಿದ್ದಾರೆ. ಅದಾನಿ ಕಂಪನಿಯ ಷೇರುಗಳಲ್ಲಿ ಇತ್ತೀಚೆಗೆ 15,000 ಕೋಟಿ ರೂ. ಹೂಡಿರುವ ಜಿಕ್ಯೂಜಿ ಪಾರ್ಟನರ್ಸ್ ಐಟಿಸಿಯಲ್ಲೂ ತನ್ನ ಹೂಡಿಕೆಯನ್ನು ಹೆಚ್ಚಿಸಿದೆ.
ಐಟಿಸಿ ಲಿಮಿಟೆಡ್ ಈ ಹಿಂದೆ ಇಂಪೀರಿಯಲ್ ಟೊಬ್ಯಾಕೊ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ಎಂಬ ಹೆಸರಿನಲ್ಲಿ ತಂಬಾಕು ಉತ್ಪನ್ನದ ಕಂಪನಿಯಾಗಿತ್ತು. ಇದಕ್ಕೆ 112 ವರ್ಷಗಳ ಇತಿಹಾಸ ಇದೆ. ಕೋಲ್ಕೊತಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಸಂಜೀವ್ ಪುರಿ ಹಾಲಿ ಅಧಯಕ್ಷರು. ಸಿಗರೇಟ್ ಉತ್ಪಾದನೆಗೆ ಹೆಸರುವಾಸಿಯಾಗಿದ್ದ ಐಟಿಸಿ, ಈಗ ಕನ್‌ಸ್ಯೂಮರ್ ಗೂಡ್ಸ್, ಅಪಾರಲ್, ಶಿಕ್ಷಣ, ಹೋಟೆಲ್, ಅಗ್ರಿ ಬಿಸಿನೆಸ್, ಪ್ಯಾಕೇಜಿಂಗ್, ಪೇಪರ್ ಬೋರ್ಡ್ ಮತ್ತಿತರ ವಸ್ತುಗಳನ್ನು ತಯಾರಿಸುತ್ತಿದೆ. ಗೋಲ್ಡ್ ಫ್ಲೇಕ್, ಕ್ಲಾಸಿಕ್, ವಿಲ್ಸ್ ನೇವಿ ಕಟ್ ಸಿಗರೇಟ್ ಬ್ರಾಂಡ್, ಆಶೀರ್ವಾದ್ ಹಿಟ್ಟು, ಸಾವ್ಲೋನ್ ಪರ್ಸನಲ್ ಕೇರ್ ಬ್ರಾಂಡ್ ಐಟಿಸಿಗೆ ಸೇರಿದೆ.