ಮುಂಬಯಿ: ಸಿಗರೇಟ್‌ನಿಂದ ಹಿಟ್ಟು ಉತ್ಪಾದನೆಯ ತನಕ ನಾನಾ ಉದ್ದಿಮೆಗಳಲ್ಲಿ ಸಕ್ರಿಯವಾಗಿರುವ ಐಟಿಸಿ ಲಿಮಿಟೆಡ್ ( ITC Limited) ಕಂಪನಿಯ ಷೇರು ದರ ಕಳೆದ ಕೆಲವು ದಿನಗಳಿಂದ ದಾಖಲೆಯ ಜಿಗಿತಕ್ಕೀಡಾಗಿದ್ದು, ಮಾರುಕಟ್ಟೆ ಮೌಲ್ಯ 5 ಲಕ್ಷ ಕೋಟಿ ರೂ. ದಾಟಿದೆ. ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ (National Stock Exchange) ಐಟಿಸಿ ಷೇರು ದರ ಗುರುವಾರ 402.65 ರೂ.ಗೆ ಏರಿತ್ತು. ಮಾರುಕಟ್ಟೆ ಬಂಡವಾಳ ಮೌಲ್ಯದ ದೃಷ್ಟಿಯಿಂದ ಐಟಿಸಿ ಈಗ 8ನೇ ಸ್ಥಾನಕ್ಕೆ ಏರಿದೆ.
ಕಳೆದ ಒಂದು ವರ್ಷದಲ್ಲಿ ಐಟಿಸಿ ಷೇರು ದರದಲ್ಲಿ 50% ಏರಿಕೆಯಾಗಿದೆ. ನಿಫ್ಟಿ 50 ಇಂಡೆಕ್ಸ್‌ನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಷೇರುಗಳಲ್ಲಿ ಎರಡನೇ ಸ್ಥಾನದಲ್ಲಿದೆ. 2023ರಲ್ಲಿ ಇದುವರೆಗೆ 20% ಗಳಿಕೆ ದಾಖಲಿಸಿದೆ.
ಸಿಗರೇಟ್ ಮೇಲೆ ಸರ್ಕಾರ ತೆರಿಗೆ ಏರಿಸಿದ್ದರೂ, ಅದರ ಮಾರಾಟದ ಮೇಲೆ ಪ್ರಭಾವ ಬೀರಿಲ್ಲ. ಮತ್ತೊಂದು ಕಡೆ ಇತರ ಬಿಸಿನೆಸ್ ಸುಧಾರಿಸಿದೆ. ಹೀಗಾಗಿ ಷೇರು ದರ ಚೇತರಿಸಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಐಟಿಸಿ ಷೇರಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಿದ್ದಾರೆ. ಅದಾನಿ ಕಂಪನಿಯ ಷೇರುಗಳಲ್ಲಿ ಇತ್ತೀಚೆಗೆ 15,000 ಕೋಟಿ ರೂ. ಹೂಡಿರುವ ಜಿಕ್ಯೂಜಿ ಪಾರ್ಟನರ್ಸ್ ಐಟಿಸಿಯಲ್ಲೂ ತನ್ನ ಹೂಡಿಕೆಯನ್ನು ಹೆಚ್ಚಿಸಿದೆ.
ಐಟಿಸಿ ಲಿಮಿಟೆಡ್ ಈ ಹಿಂದೆ ಇಂಪೀರಿಯಲ್ ಟೊಬ್ಯಾಕೊ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ಎಂಬ ಹೆಸರಿನಲ್ಲಿ ತಂಬಾಕು ಉತ್ಪನ್ನದ ಕಂಪನಿಯಾಗಿತ್ತು. ಇದಕ್ಕೆ 112 ವರ್ಷಗಳ ಇತಿಹಾಸ ಇದೆ. ಕೋಲ್ಕೊತಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಸಂಜೀವ್ ಪುರಿ ಹಾಲಿ ಅಧಯಕ್ಷರು. ಸಿಗರೇಟ್ ಉತ್ಪಾದನೆಗೆ ಹೆಸರುವಾಸಿಯಾಗಿದ್ದ ಐಟಿಸಿ, ಈಗ ಕನ್‌ಸ್ಯೂಮರ್ ಗೂಡ್ಸ್, ಅಪಾರಲ್, ಶಿಕ್ಷಣ, ಹೋಟೆಲ್, ಅಗ್ರಿ ಬಿಸಿನೆಸ್, ಪ್ಯಾಕೇಜಿಂಗ್, ಪೇಪರ್ ಬೋರ್ಡ್ ಮತ್ತಿತರ ವಸ್ತುಗಳನ್ನು ತಯಾರಿಸುತ್ತಿದೆ.
ಗೋಲ್ಡ್ ಫ್ಲೇಕ್, ಕ್ಲಾಸಿಕ್, ವಿಲ್ಸ್ ನೇವಿ ಕಟ್ ಸಿಗರೇಟ್ ಬ್ರಾಂಡ್, ಆಶೀರ್ವಾದ್ ಹಿಟ್ಟು, ಸಾವ್ಲೋನ್ ಪರ್ಸನಲ್ ಕೇರ್ ಬ್ರಾಂಡ್ ಐಟಿಸಿಗೆ ಸೇರಿದೆ.