ನವ ದೆಹಲಿ: 2022-23ರ ಆದಾಯ ತೆರಿಗೆ ವಿವರ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದೆ. ಇದುವರೆಗೆ 6 ಕೋಟಿ ಮಂದಿ ಐಟಿ ರಿಟರ್ನ್ ಸಲ್ಲಿಸಿದ್ದಾರೆ. ನೀವು ಇದರ ಗಡುವು ವಿಸ್ತರಣೆಯಾದೀತು (Income Tax Return Filing Due Date AY 2023-24) ಎಂದು ಭಾವಿಸುತ್ತಿದ್ದೀರಾ? ಆದರೆ ಹಾಗೆ ವಿಳಂಬಿಸುವುದಕ್ಕಿಂತ ಈಗಿನ ಗಡುವಿನ ಒಳಗೆಯೇ ಸಲ್ಲಿಸುವುದು ಸೂಕ್ತ. (ITR Filing on http://www.incometax.gov.in) ಒಂದು ವೇಳೆ ಗಡುವು ವಿಸ್ತರಣೆಯಾಗದಿದ್ದರೆ ಪೆನಾಲ್ಟಿ , ಬಡ್ಡಿ ಮಾತ್ರವಲ್ಲದೆ ಇತರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಆದಾಯ ತೆರಿಗೆ ಇಲಾಖೆ ಇದುವರೆಗೆ ಐಟಿಆರ್ ಫೈಲಿಂಗ್ ಗಡುವನ್ನು ಮುಂದೂಡುವ ಯಾವುದೇ ಸುಳಿವನ್ನು ನೀಡಿಲ್ಲ. ಆದ್ದರಿಂದ ಗಡುವಿನ ಒಳಗೆಯೇ ಫೈಲಿಂಗ್ ಮಾಡುವುದು ಸೂಕ್ತ ಎನ್ನುತ್ತಾರೆ ಲೆಕ್ಕ ಪರಿಶೋಧಕರು. ಐಟಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ 2022-23ರ ಐಟಿರ್ ಸಲ್ಲಿಕೆಯು ಈಗಾಗಲೇ ಹಿಂದಿನ ಸಾಲಿನದ್ದಕ್ಕಿಂತ ಹೆಚ್ಚಾಗಿದ್ದು ದಾಖಲೆ ಸೃಷ್ಟಿಸಿದೆ.
ಐಟಿ ರಿಟರ್ನ್ ಸಲ್ಲಿಕೆಯ ವೇಳೆ ಯಾವುದೇ ತಾಂತ್ರಿಕ ಅಡಚಣೆ ಕಂಡು ಬಂದಲ್ಲಿ ಈ ವೆಬ್ ವಿಳಾಸಕ್ಕೆ ನಿಮ್ಮ ಪ್ಯಾನ್ ಮತ್ತು ಮೊಬೈಲ್ ನಂಬರ್ ಸಹಿತ ವಿವರಗಳನ್ನು ಸಲ್ಲಿಸಬಹುದು. orm@cpc.incometax.gov.in ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
📢 Kind Attention 📢
— Income Tax India (@IncomeTaxIndia) July 30, 2023
A new milestone!
More than 6 crore ITRs have been filed so far (30th July), out of which about 26.76 lakh ITRs have been filed today till 6.30 pm!
We have witnessed more than 1.30 crore successful logins on the e-filing portal till 6.30 pm, today.
To… pic.twitter.com/VFkgYezpDH
ಈ ನಡುವೆ ಕೆಲ ತೆರಿಗೆದಾರರು ಐಟಿ ರಿಟರ್ನ್ ಸಲ್ಲಿಕೆಯಲ್ಲಿ ಉಂಟಾಗಿರುವ ತಾಂತ್ರಿಕ ಅಡಚಣೆಗಳನ್ನು ವಿವರಿಸಿದ್ದಾರೆ. ಆನ್‌ಲೈನ್ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ದೂರಿದ್ದಾರೆ.
ಜುಲೈ 31ರ ಗಡುವು ತಪ್ಪಿದರೂ ನೀವು ವಿಳಂಬಿತ ರಿಟರ್ನ್ (belated return) ಫೈಲಿಂಗ್ ಮಾಡಬಹುದು. ವಿಳಂಬಿತ ಐಟಿಆರ್ ಅನ್ನು 2023ರ ಡಿಸೆಂಬರ್ 31 ರ ತನಕ ಫೈಲಿಂಗ್ ಮಾಡಬಹುದು. ಆದಾಯ ತೆರಿಗೆ ಪಾವತಿಸದಿದ್ದರೆ ( non-payment of taxes) ಕಠಿಣ ದಂಡ ಮತ್ತು ಮೂರು ತಿಂಗಳಿನಿಂದ ಎರಡು ವರ್ಷದ ತನಕ ಸೆರೆ ವಾಸಕ್ಕೂ ಕಾರಣವಾಗಬಹುದು. 25,00,000 ರೂ.ಗೂ ಹೆಚ್ಚು ತೆರಿಗೆ ಮೊತ್ತ ತಪ್ಪಿಸಿದ್ದರೆ ಏಳು ವರ್ಷದ ತನಕ ಜೈಲು ಶಿಕ್ಷೆ ಎದುರಿಸಬೇಕಾಗಿ ಬರಬಹುದು.
ಇದನ್ನೂ ಓದಿ: ITR filing due date : ಜುಲೈ 31ರ ಐಟಿ ರಿಟರ್ನ್ ಫೈಲಿಂಗ್ ಗಡುವು ಮುಂದೂಡಿಕೆ ಆಗಲಿದೆಯೇ?
ಐಟಿಆರ್ ಸಲ್ಲಿಕೆಯ ಗಡುವನ್ನು ತಪ್ಪಿದರೆ ನಾನಾ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪೆನಾಲ್ಟಿಗಳನ್ನು ಕಟ್ಟಬೇಕಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 234 ಎಫ್ ಅಡಿಯಲ್ಲಿ 5,000 ರೂ. ತನಕ ವಿಳಂಬ ಶುಲ್ಕ ಪಾವತಿಸಬೇಕಾಗುತ್ತದೆ. ವಾರ್ಷಿಕ ಆದಾಯವು 5 ಲಕ್ಷ ರೂ.ಗಿಂತ ಕಡಿಮೆ ಇದ್ದರೆ ವಿಳಂಬ ಶುಲ್ಕವು 1,000 ರೂ. ಆಗುತ್ತದೆ.