ನವ ದೆಹಲಿ: ಇನ್ನೊಂದು ವಾರದಲ್ಲಿ 2022 ಮುಕ್ತಾಯವಾಗಿ ಹೊಸ ವರ್ಷ 2023 ಆರಂಭವಾಗಲಿದೆ. ಜತೆಗೆ 2022-23ರ ಸಾಲಿನ ಪರಿಷ್ಕೃತ, ವಿಳಂಬಿತ ಐಟಿ ರಿಟರ್ನ್ (ITR Filing) ಸಲ್ಲಿಕೆಗೆ ಕೂಡ ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ.
ನೀವು 2022ರ ಜುಲೈ 31ರ ಒಳಗೆ ಐಟಿಆರ್ ಸಲ್ಲಿಸಿರದಿದ್ದರೆ, ಐಟಿಆರ್ ಸಲ್ಲಿಸಿದ್ದೂ, ಏನಾದರೂ ಸರಿಪಡಿಸುವುದಿದ್ದರೆ, ಪರಿಷ್ಕೃತ ಐಟಿಆರ್ ಸಲ್ಲಿಸಲೂ ಡಿಸೆಂಬರ್ 31 ಕೊನೆಯ ದಿನವಾಗಿರುತ್ತದೆ. ಜುಲೈ 31ರೊಳಗೆ 5.83 ಕೋಟಿ ರಿಟರ್ನ್ ಸಲ್ಲಿಕೆಯಾಗಿತ್ತು. ಕೊನೆಯ ದಿನ 72 ಲಕ್ಷಕ್ಕೂ ಹೆಚ್ಚು ಐಟಿ ರಿಟರ್ನ್ ಸಲ್ಲಿಕೆಯಾಗಿತ್ತು.
ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 139 ಪ್ರಕಾರ ವಿಳಂಬಿತ ಐಟಿಆರ್ ಸಲ್ಲಿಕೆಗೆ ಅವಕಾಶ ಇದೆ. ಆದರೆ ಸೆಕ್ಷನ್ 234ಎಫ್ ಪ್ರಕಾರ ಜುಲೈ 31ರ ಬಳಿಕ ಐಟಿಆರ್ ಸಲ್ಲಿಸುವವರಿಗೆ ವಾರ್ಷಿಕ 5 ಲಕ್ಷ ರೂ. ಮತ್ತು ಹೆಚ್ಚಿನ ಆದಾಯ ಇದ್ದರೆ 5,000 ರೂ. ದಂಡ ಕಟ್ಟಬೇಕಾಗುತ್ತದೆ. 5 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವವರಿಗೆ 1,000 ರೂ. ದಂಡ ಇರುತ್ತದೆ. ಆದಾಯ ತೆರಿಗೆ ಪಾವತಿಸಬೇಕಾಗಿ ಬರದವರು ದಂಡ ಪಾವತಿಸಬೇಕಾಗುವುದಿಲ್ಲ.