Site icon Vistara News

ITR filing due date : ಜುಲೈ 31ರ ಐಟಿ ರಿಟರ್ನ್‌ ಫೈಲಿಂಗ್‌ ಗಡುವು ಮುಂದೂಡಿಕೆ ಆಗಲಿದೆಯೇ?

cash

ವೈಯಕ್ತಿಕ ಆದಾಯ ತೆರಿಗೆದಾರರು ಕಳೆದ ಕೆಲವು ದಿನಗಳಿಂದ ಬ್ಯುಸಿಯಾಗಿದ್ದಾರೆ. ಬಹುತೇಕ ಎಲ್ಲ ಚಾರ್ಟರ್ಡ್‌ ಅಕೌಂಟೆಂಟ್‌ಗಳೂ ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ. ಏಕೆಂದರೆ 2022-23ರ ಐಟಿ ರಿಟರ್ನ್‌ ಫೈಲಿಂಗ್‌ಗೆ ಇದೇ ಜುಲೈ 31 ಕೊನೆಯ ದಿನ. ಇನ್ನು ಕೇವಲ ಮೂರೇ ದಿನ ಬಾಕಿ. ಹಾಗಾದರೆ (ITR filing due date) ಈ ಸಲ ಗಡುವು ವಿಸ್ತರಣೆಯಾದೀತೆ? ಎಂಬ ಪ್ರಶ್ನೆ ಉಂಟಾಗಿದೆ. ಇದಕ್ಕೆ ತಜ್ಞರು ಹಾಗೂ ತೆರಿಗೆ ಇಲಾಖೆ ಏನೆನ್ನುತ್ತದೆ? ಇಲ್ಲಿದೆ ಡಿಟೇಲ್ಸ್.‌

ಐಟಿ ರಿಟರ್ನ್‌ ಫೈಲಿಂಗ್‌ ಗಡುವು ಸಮೀಪಿಸುತ್ತಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಸುದ್ದಿಗಳು ಹರಿದಾಡುತ್ತಿವೆ. ಹಲವು ಕಡೆಗಳಲ್ಲಿ ಐಟಿ ರಿಟರ್ನ್‌ ಮಾಡುವಾಗ ಅಡಚಣೆಗಳು ಆಗಿರುವ ಉದಾಹರಣೆಗಳೂ ಇವೆ. ಮತ್ತೆ ಅನೇಕ ಮಂದಿ ಚಾರ್ಟರ್ಡ್‌ ಅಕೌಂಟೆಂಟ್‌ಗಳನ್ನು ವಿಚಾರಿಸುತ್ತಿದ್ದಾರೆ. ಆದಾಯ, ತೆರಿಗೆ ಲೆಕ್ಕಾಚಾರದ ಗಡಿಬಿಡಿಯಲ್ಲಿದ್ದಾರೆ. ತೆರಿಗೆ ಕಡಿತಕ್ಕೀಡಾದವರು ರಿಫಂಡ್‌ ಮಾಡಿಸಿಕೊಳ್ಳಲು ಏನು ಮಾಡಬಹುದು ಎಂಬ ಆಲೋಚನೆಯಲ್ಲಿದ್ದಾರೆ. ನಿರ್ದಿಷ್ಟ ತೆರಿಗೆ ವಿನಾಯಿತಿ ಮಿತಿಗಿಂತ ಹೆಚ್ಚು ಆದಾಯ ಇರುವವರು ಹೇಗೆ ತೆರಿಗೆ ಉಳಿತಾಯ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ. ಈ ನಡುವೆ ಅನೇಕ ಮಂದಿ ಗಡುವನ್ನು ವಿಸ್ತರಿಸುವಂತೆ ತೆರಿಗೆ ಇಲಾಖೆಗೆ ಈಗಾಗಲೇ ಮನವಿಯನ್ನೂ ಮಾಡಿದ್ದಾರೆ.

ಇದುವರೆಗೆ ಎಷ್ಟು ಮಂದಿ ಐಟಿಆರ್‌ ಸಲ್ಲಿಸಿದ್ದಾರೆ? 2023ರ ಜುಲೈ 23 ರ ತನಕ 4 ಕೋಟಿ ಆದಾಯ ತೆರಿಗೆ ರಿಟರ್ನ್‌ಗಳು ಸಲ್ಲಿಕೆಯಾಗಿವೆ. 2,12 ಕೋಟಿ ರಿಟರ್ನ್‌ಗಳು ವೆರಿಫೈ ಮತ್ತು ಪ್ರೊಸೆಸ್‌ ಆಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಐಟಿಆರ್‌ ಫೈಲಿಂಗ್‌ ಗಡುವು ವಿಸ್ತರಣೆಯಾಗಲಿದೆಯೇ? ಸರ್ಕಾರ ಐಟಿ ರಿಟರ್ನ್‌ ಸಲ್ಲಿಕೆಯ ಗಡುವನ್ನು ವಿಸ್ತರಿಸಲಿದೆಯೇ ಎಂಬ ಪ್ರಶ್ನೆಗೆ ಕಂದಾಯ ಇಲಾಖೆ ಕಾರ್ಯದರ್ಶಿ ಸಂಜಯ್‌ ಮಲ್ಹೋತ್ರಾ ಹೀಗೆನ್ನುತ್ತಾರೆ- ಕೊನೆಯ ಕ್ಷಣದ ತನಕ ಕಾಯದಿರಿ. ಮುಂಚಿತವಾಗಿಯೇ ಸಲ್ಲಿಸಿ. ಈ ಸಲ ಯಾವುದೇ ವಿಸ್ತರಣೆಯಾಗುವ ಸಾಧ್ಯತೆ ಇಲ್ಲ.

ಐಟಿ ರಿಟರ್ನ್‌ ಗಡುವನ್ನು ವಿಸ್ತರಣೆ ಮಾಡದಿದ್ದರೆ ವಿಳಂಬ ಶುಲ್ಕವನ್ನು ಸಲ್ಲಿಸಬೇಕಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹಣ ಸೇರಿದಂತಾಗುತ್ತದೆ. ಆದ್ದರಿಂದ ತೆರಿಗೆದಾರರು ಸಕಾಲದಲ್ಲಿ ಐಟಿ ರಿಟರ್ನ್‌ ಫೈಲ್‌ ಮಾಡುವುದು ಉತ್ತಮ. ವೃಥಾ ದಂಡ ತೆರಬೇಕಾದ ಹಾಗೂ ಇತರ ಪ್ರತಿಕೂಲ ಪರಿಣಾಮಗಳನ್ನು ಎದುರಿಸುವ ಅಗತ್ಯ ಇರುವುದಿಲ್ಲ ಎನ್ನುತ್ತಾರೆ ಲೆಕ್ಕ ಪರಿಶೋಧಕರು.

ಐಟಿಆರ್‌ ಸಲ್ಲಿಕೆಯಲ್ಲಿ ಗಡುವು ತಪ್ಪಿಸಿದರೆ ತೆರಿಗೆದಾರರು 5,000 ರೂ. ತನಕ ಶುಲ್ಕವನ್ನು ನೀಡಬೇಕಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 234 ಎಫ್‌ ಅಡಿಯಲ್ಲಿ ಇದನ್ನು ವಿಧಿಸಲಾಗುತ್ತದೆ. ಹೀಗಿದ್ದರೂ ವಾರ್ಷಿಕ ಆದಾಯ 5 ಲಕ್ಷ ರೂ. ಮೀರದಿದ್ದರೆ ಗರಿಷ್ಠ ದಂಡ 1,000 ರೂ. ಆಗುತ್ತದೆ. ವಾರ್ಷಿಕ ಆದಾಯ 5 ಲಕ್ಷ ರೂ. ಮೀರಿದ್ದರೆ 5000 ರೂ. ದಂಡ ನೀಡಬೇಕಾಗುತ್ತದೆ. ಮಾತ್ರವಲ್ಲದೆ ದಂಡದ ಜತೆಗೆ ರಿಟರ್ನ್‌ ಫೈಲ್‌ ಮಾಡುವ ತನಕ ಕೊಡಬೇಕಿರುವ ತೆರಿಗೆಗೆ 1% ಬಡ್ಡಿಯನ್ನೂ ಕೊಡಬೇಕಾಗುತ್ತದೆ.

Exit mobile version