Site icon Vistara News

ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ದಿನಾಂಕ 1 ತಿಂಗಳು ವಿಸ್ತರಣೆಗೆ ಮನವಿ

ITR Filing

ನವದೆಹಲಿ: ಆದಾಯ ತೆರಿಗೆ ರಿಟರ್ನ್ (Income Tax Returns) ಸಲ್ಲಿಕೆಯೆ ದಿನಾಂಕವನ್ನು ಆಗಸ್ಟ್ 31ರವರೆಗೆ ವಿಸ್ತರಿಸುವಂತೆ ಅಖಿಲ ಭಾರತ ತೆರಿಗೆ ವೃತ್ತಿಪರರ ಒಕ್ಕೂಟ (All-India Federation of Tax Practitioners-AIFTP)ವು ಕೇಂದ್ರ ನೇರ ತೆರಿಗೆ ಮಂಡಳಿ (Central Board of Direct Taxes-CBDT)ಗೆ ಮನವಿ ಮಾಡಿದೆ. ಸದ್ಯ  ದಂಡ ರಹಿತವಾಗಿ ಐಟಿಆರ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನ.

ಎಐಎಫ್‌ಟಿಪಿ ರಾಷ್ಟ್ರೀಯ ಅಧ್ಯಕ್ಷ ನಾರಾಯಣ್ ಜೈನ್ ಮತ್ತು ನೇರ ತೆರಿಗೆ ಪ್ರಾತಿನಿಧ್ಯ ಸಮಿತಿ ಅಧ್ಯಕ್ಷ ಎಸ್.ಎಂ.ಸುರಾನಾ ಅವರು ಸಲ್ಲಿಸಿದ ಮನವಿಯಲ್ಲಿ ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ರಿಟರ್ನ್ಸ್ ಸಲ್ಲಿಸುವ ಪ್ರಕ್ರಿಯೆಯ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಉಲ್ಲೇಖಿಸಲಾಗಿದೆ.

ಕೇರಳ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿನ ಭೂಕುಸಿತದಿಂದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ವಿವಿಧ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಲು ಮತ್ತು ಪರಿಶೀಲಿಸಲು ತೊಂದರೆ ಎದುರಾಗಿದೆ. ಆದಾಯ ತೆರಿಗೆ ಪೋರ್ಟಲ್ ಮತ್ತು ಸಾಫ್ಟ್‌ವೇರ್‌ನಲ್ಲಿ ನಿರಂತರ ಸಮಸ್ಯೆಗಳಿವೆ ಎಂದು ತಿಳಿಸಲಾಗಿದೆ. ಜತೆಗೆ ಬ್ಯಾಂಕುಗಳ ಮೂಲಕ ಸ್ವಯಂ ಮೌಲ್ಯಮಾಪನ ತೆರಿಗೆ ಪಾವತಿಸುವ ಮತ್ತು ಚಲನ್‌ಗಳನ್ನು ಡೌನ್‌ಲೋಡ್ ಮಾಡುವ ಪ್ರಕ್ರಿಯೆಯು‌ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಐಟಿಆರ್ ಫೈಲಿಂಗ್ ಗಡುವಿನ ವಿಸ್ತರಣೆಯ ಬಗ್ಗೆ ಹಣಕಾಸು ಸಚಿವಾಲಯ ಯಾವುದೇ ಔಪಚಾರಿಕ ಪ್ರಕಟಣೆಯನ್ನು ಇದುವರೆಗೆ ಹೊರಡಿಸಿಲ್ಲ.

ದಂಡ ಎಷ್ಟು?

ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಗಡುವು ಮುಗಿದರೂ ದಂಡ ಸಹಿತ ರಿಟರ್ನ್ ಸಲ್ಲಿಕೆಗೆ ಅವಕಾಶವಿದೆ. ತೆರಿಗೆ ಲೆಕ್ಕಪರಿಶೋಧನೆಯ ಅಗತ್ಯವಿರುವ ತೆರಿಗೆದಾರರಿಗೆ ದಂಡ ಸಹಿತ ಐಟಿಆರ್ ಫೈಲ್ ಮಾಡಲು 2024ರ ಅಕ್ಟೋಬರ್ 31ರವರೆಗೆ ಅವಕಾಶವಿದೆ. ಆರ್ಥಿಕ ವರ್ಷ 2024-25ಗಾಗಿ ಪರಿಷ್ಕೃತ ಮತ್ತು ತಡವಾದ ರಿಟರ್ನ್‌ಗಳನ್ನು ಸಲ್ಲಿಸಲು ಅಂತಿಮ ಗಡುವು 2024ರ ಡಿಸೆಂಬರ್ 31 ಆಗಿದೆ.

ತೆರಿಗೆ ಸಲ್ಲಿಸುವಿಕೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆದಾಯ ತೆರಿಗೆ ಇಲಾಖೆಯು ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ವಿವಿಧ ಐಟಿಆರ್ ಫಾರ್ಮ್‌ಗಳು ಮತ್ತು ಎಕ್ಸೆಲ್ ಮಾಹಿತಿಗಳನ್ನು ನಿರ್ಧಿಷ್ಟ ವೆಬ್‌‌ಸೈಟ್ ಮೂಲಕ ಪ್ರಕಟಿಸುತ್ತದೆ. ಆದರೂ ಹೆಚ್ಚಿನ ಸಂಬಳ ಪಡೆಯುವ ವ್ಯಕ್ತಿಗಳು ತಮ್ಮ ಫಾರ್ಮ್ 16 ಅನ್ನು ಉದ್ಯೋಗದಾತರಿಂದ ಸ್ವೀಕರಿಸಲು ಕಾಯುತ್ತಾರೆ. ಸಾಮಾನ್ಯವಾಗಿ ಇದನ್ನು ಜೂನ್ ಕೊನೆಯಲ್ಲಿ ಅಥವಾ ಜುಲೈ ಆರಂಭದಲ್ಲಿ ವಿತರಿಸಲಾಗುತ್ತದೆ.

ಇದನ್ನೂ ಓದಿ: Money Guide: ಐಟಿಆರ್ ಇನ್ನೂ ಸಲ್ಲಿಸಿಲ್ಲವೇ? ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಈ ಟಿಪ್ಸ್‌ ಫಾಲೋ ಮಾಡಿ

ಜುಲೈ 31ರ ಗಡುವಿನ ನಂತರ ಐಟಿಆರ್ ಸಲ್ಲಿಸುವುದರಿಂದ ದಂಡ ಪಾವತಿಸಬೇಕಾಗುತ್ತದೆ. ನಿವ್ವಳ ತೆರಿಗೆಯ ಆದಾಯವು 5 ಲಕ್ಷ ರೂ. ವರೆಗೆ ಇದ್ದರೆ ತಡವಾಗಿ ತೆರಿಗೆ ರಿಟರ್ನ್‌ಗೆ ಗರಿಷ್ಠ ದಂಡ 1,000 ರೂ ಆಗಿದೆ. 5 ಲಕ್ಷ ರೂ. ಗಿಂತ ಹೆಚ್ಚಿನ ಆದಾಯ ಹೊಂದಿರುವವರು 5,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಪ್ರಕಾರ ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಾದರೆ ಯಾವುದೇ ದಂಡವನ್ನು ವಿಧಿಸಲಾಗುವುದಿಲ್ಲ.

Exit mobile version