ಟೋಕಿಯೊ: ಚೀನಾದ ಇ-ಕಾಮರ್ಸ್ ದಿಗ್ಗಜ ಆಲಿಬಾಬಾದ ಸ್ಥಾಪಕ ಜಾಕ್ ಮಾ (58) ಅವರು ಕಳೆದ 6 ತಿಂಗಳಿನಿಂದ ಜಪಾನ್ ರಾಜಧಾನಿ ( Jack Ma) ಟೋಕಿಯೊದಲ್ಲಿ ವಾಸಿಸುತ್ತಿದ್ದಾರೆ.
ಚೀನಾ ಸರ್ಕಾರ ತನ್ನ ಮಾರುಕಟ್ಟೆ ಏಕಸ್ವಾಮ್ಯ ವಿರೋಧಿ ನೀತಿ ಅಡಿಯಲ್ಲಿ ಜಾಕ್‌ಮಾ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಲಾಗಿದೆ. 2020ರಿಂದ ಅವರನ್ನು ಚೀನಾ ಸರ್ಕಾರ ಕಡೆಗಣಿಸುತ್ತಿದೆ. ಅಂದಿನಿಂದ ಸಾರ್ವಜನಿಕವಾಗಿ ಅಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಅವರು ಚೀನಾವನ್ನು ತೊರೆದು ಜಪಾನಿನಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಕುಟುಂ ಸಮೇತರಾಗಿ ಜಪಾನ್‌ನಲ್ಲಿ ಇರುವ ಜಾಕ್ ಮಾ ಅವರು ಆಗಾಗ್ಗೆ ಅಮೆರಿಕ ಮತ್ತು ಇಸ್ರೇಲ್‌ಗೂ ಭೇಟಿ ನೀಡುತ್ತಿರುತ್ತಾರೆ. 2020ರಲ್ಲಿ ಚೀನಿ ಸರ್ಕಾರವನ್ನು ಜಾಕ್ ಮಾ ಟೀಕಿಸಿದ್ದಕ್ಕೆ ಅವರ ಕಂಪನಿಗಳ ಮೇಲೆ ಸರ್ಕಾರ ಕಠಿಣ ಕ್ರಮಗಳನ್ನು ಜರುಗಿಸಿತ್ತು. ನಾನಾ ಪ್ರಕರಣಗಳಲ್ಲಿ 208 ಕೋಟಿ ಡಾಲರ್ ದಂಡವನ್ನು ವಿಧಿಸಲಾಗಿತ್ತು. 2015ರಲ್ಲಿ ಭಾರತಕ್ಕೂ ಜಾಕ್ ಮಾ ಭೇಟಿ ನೀಡಿದ್ದರು. ಪ್ರಧಾನಿ ಮೋದಿಯವರನ್ನೂ ಭೇಟಿಯಾಗಿದ್ದರು.
ಚೀನಾದಲ್ಲಿ ಬಡ ಕುಟುಂಬವೊಂದರಲ್ಲಿ ಜನಿಸಿದ್ದ ಜಾಕ್ ಮಾ, ಇ-ಕಾಮರ್ಸ್ ಕಂಪನಿ ಕಟ್ಟಿದ ಬಳಿಕ ಚೀನಾದ ಸಿರಿವಂತ ಉದ್ಯಮಿಯಾಗಿದ್ದರು.