Site icon Vistara News

Alibaba Group:‌ ಅಜ್ಞಾತವಾಸ ಮುಗಿಸಿ ಚೀನಾಕ್ಕೆ ಮರಳಿದ ಜಾಕ್‌ ಮಾ, ವಿಭಜನೆಯಾಗಲಿದೆ ಅಲಿಬಾಬಾ ಗ್ರೂಪ್

jack ma

Jack Ma

ಬೀಜಿಂಗ್:‌ ಜಾಕ್‌ ಮಾ (Jack Ma) ಮಾಲಿಕತ್ವದ ಅಲಿಬಾಬಾ ಗ್ರೂಪ್‌, 6 ಬಿಸಿನೆಸ್‌ ಸಮೂಹವಾಗಿ ವಿಭಜನೆಯಾಗಲಿದೆ ಎಂದು ವರದಿಯಾಗಿದೆ. (Alibaba Holding ltd) ಚೀನಾ ಮೂಲದ ಅಲಿಬಾಬಾ ಸಮೂಹ ಇ-ಕಾಮರ್ಸ್‌ ವಲಯದ ದಿಗ್ಗಜ ಕಂಪನಿಯಾಗಿದೆ. 220 ಶತಕೋಟಿ ಡಾಲರ್‌ ( ಅಂದಾಜು 18 ಲಕ್ಷ ಕೋಟಿ ರೂ.) ಮೌಲ್ಯದ ಅಲಿಬಾಬಾ ಸಮೂಹವು 6 ಪ್ರತ್ಯೇಕ ಕಂಪನಿಗಳಾಗಿ ವಿಭಜನೆಯಾಗುವುದರ ಜತೆಗೆ ಹಲವು ಐಪಿಒಗಳನ್ನೂ ನಡೆಸಲಿದೆ. ಹೀಗಾಗಿ ಷೇರು ಹೂಡಿಕೆದಾರರಿಗೆ ಅಲಿಬಾಬಾ ಕಂಪನಿಗಳಲ್ಲಿ ಹೂಡಿಕೆಗೆ ಅವಕಾಶ ಸಿಗಲಿದೆ.

ಅಲಿಬಾಬಾ ಗ್ರೂಪ್‌ನ ಪ್ರಮುಖ ವಿಭಜನೆ ಇ-ಕಾಮರ್ಸ್‌ ಮತ್ತು ಮಾಧ್ಯಮ ಕಂಪನಿಯಾಗಲಿದೆ. ತಂತ್ರಜ್ಞಾನ ವಲಯದ ದಿಗ್ಗಜ ಕಂಪನಿಗಳು ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಹೊಂದುತ್ತಿವೆ ಎಂಬ ಚೀನಿ ಸರ್ಕಾರದ ಆಕ್ಷೇಪವನ್ನು ಎದುರಿಸಲು ಹಾಗೂ ಫಂಡ್‌ ಸಂಗ್ರಹಿಸಲು ಜಾಕ್‌ ಮಾಗೆ ಈ ನಡೆ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಲಿಬಾಬಾ ಗ್ರೂಪ್‌ ಈ ರೀತಿ ವಿಭಜನೆಯಾಗಲಿದೆ- ಕ್ಲೌಡ್‌ ಇಂಟಲಿಜೆನ್ಸ್‌ ಗ್ರೂಪ್‌, ಟಾಬಾವೊ ಟಿಮಾಲ್‌ ಕಾಮರ್ಸ್‌ ಗ್ರೂಪ್‌, ಲೋಕಲ್‌ ಸರ್ವೀಸ್‌ ಗ್ರೂಪ್‌, ಕೈನಿಯೊ ಸ್ಮಾರಟ್‌ ಲಾಜಿಸ್ಟಿಕ್ಸ್‌ ಗ್ರೂಪ್‌, ಗ್ಲೋಬಲ್‌ ಡಿಜಿಟಲ್‌ ಕಾಮರ್ಸ್‌ ಗ್ರೂಪ್‌ ಮತ್ತು ಡಿಜಿಟಲ್‌ ಮೀಡಿಯಾ & ಎಂಟರ್‌ಟೈನ್‌ಮೆಂಟ್‌ ಗ್ರೂಪ್.

ಚೀನಾಕ್ಕೆ ಮರಳಿದ ಜಾಕ್‌ ಮಾ:

ಕಳೆದ 2021ರ ನವೆಂಬರ್ ಬಳಿಕ ಚೀನಾದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಸುದ್ದಿಯಾಗಿದ್ದ ಜಾಕ್‌ ಮಾ, ವಿದೇಶದಲ್ಲಿದ್ದರು. ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆಯೇ ಎಂಬ ಊಹಾಪೋಹವೂ ಉಂಟಾಗಿತ್ತು.‌ ಶಾಂಘೈನಲ್ಲಿ ಬಹಿರಂಗವಾಗಿಯೇ ಕ್ಸೀ ಜಿನ್‌ಪಿಂಗ್‌ ಸರ್ಕಾರವನ್ನು ಟೀಕಿಸಿದ್ದರು. ಜಾಕ್‌ ಮಾ ಹಾಗೂ ಚೀನಿ ಅಧ್ಯಕ್ಷ ಜಿನ್‌ ಪಿಂಗ್‌ ನಡುವೆ ಭಿನ್ನಾಭಿಪ್ರಾಯದ ಬಗ್ಗೆ ವದಂತಿ ಹರಡಿತ್ತು. ಇದೀಗ ಮತ್ತೆ ಚೀನಾಕ್ಕೆ ಆಗಮಿಸಿದ್ದಾರೆ. ಇದರೊಂದಿಗೆ ಸೂಪರ್‌ ಮಾರ್ಕೆಟ್‌ನಿಂದ ಡೇಟಾ ಸೆಂಟರ್‌ ತನಕ ಎಲ್ಲ ಬಿಸಿನೆಸ್‌ ಅನ್ನೂ ಒಂದೇ ಸಮೂಹದ ವೇದಿಕೆಯಲ್ಲಿ ಇಡುವ ಪದ್ಧತಿಗೆ ಅಲಿಬಾಬಾ ತಿಲಾಂಜಲಿ ನೀಡಿದೆ. ಅಲಿಬಾಬಾ ವಿಭಜನೆಯ ಸುದ್ದಿ ಹಿನ್ನೆಲೆಯಲ್ಲಿ ಅದರ ಷೇರು ದರದಲ್ಲಿ 15% ಏರಿಕೆಯಾಗಿದೆ.

Exit mobile version