ಹೊಸದಿಲ್ಲಿ: ಹಾರಾಟ ಸ್ಥಗಿತಗೊಳಿಸಿರುವ ಜೆಟ್ ಏರ್‌ವೇಸ್ ಮತ್ತೆ ಹಾರಾಟ ಆರಂಭಿಸಲು ಸಜ್ಜಾಗುತ್ತಿದೆ.
ಗೃಹ ಸಚಿವಾಲಯ ಜೆಟ್ ಏರ್‌ವೇಸ್‌ನ ಮರು ಹಾರಾಟಕ್ಕೆ ಪರವಾನಗಿಯನ್ನು ನೀಡಿದೆ.
ದರೊಂದಿಗೆ ಹಾರಾಟ ಪುನರಾರಂಭಿಸಲು ಇನ್ನು ಒಂದು ಹೆಜ್ಜೆ ಮಾತ್ರ ಬಾಕಿ ಇದೆ. ನಾಗರಿಕ ವಿಮಾನಯಾನ ಇಲಾಖೆಯ ಪರವಾನಗಿ ಪಡೆಯಬೇಕು. ಕಾಲ್‌ರೋಕ್ ಕ್ಯಾಪಿಟಲ್ ಮತ್ತು ಮಧ್ಯಪ್ರಾಚ್ಯದ ಉದ್ಯಮಿ ಮುರಾರಿ ಲಾಲ್ ಜಲನ್ ಅವರು ಜೆಟ್ ಏರ್‌ವೇಸ್‌ನ ನೂತನ ಮಾಲೀಕರಾಗಿದ್ದಾರೆ. ಭದ್ರತೆ ಕುರಿತ ಲೈಸೆನ್ಸ್ ಪಡೆಯಲು ಕಳೆದ ವರ್ಷ ಡಿಸೆಂಬರ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಕಳೆದ ವಾರ ಜೆಟ್ ಏರ್‌ವೇಸ್ ಹೈದರಾಬಾದ್‌ನಲ್ಲಿ ಮೊದಲ ಪರೀಕ್ಷಾರ್ಥ ಹಾರಾಟ ನಡೆಸಿತ್ತು. ಕಳೆದ ತಿಂಗಳು ಜೆಟ್ ಏರ್‌ವೇಸ್‌ನ ಸಿಇಒ ಆಗಿ ಸಂಜೀವ್ ಕಪೂರ್ ನೇಮಕವಾಗಿದ್ದರು. ಕಪೂರ್ ಈ ಹಿಂದೆ ವಿಸ್ತಾರ ಏರ್‌ಲೈನ್ಸ್ ನಲ್ಲಿ ಸಿಇಒ ಆಗಿದ್ದರು.
ಮರು ಹಾರಾಟಕ್ಕೆ ಸಿದ್ಧತೆ
ಜೆಟ್ ಏರ್‌ವೇಸ್ ಮುಂದಿನ ಕೆಲ ತಿಂಗಳುಗಳಲ್ಲಿಯೇ ಮತ್ತೆ ಹಾರಾಟ ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ 150ಕ್ಕೂ ಹೆಚ್ಚು ಉದ್ಯೋಗಿಗಳನ್ನು ನಾನಾ ಕಾರ್ಯಗಳಿಗೆ ನಿಯೋಜಿಸಿದೆ.
2019ರ ಏಪ್ರಿಲ್‌ನಲ್ಲಿ ಜೆಟ್ ಏರ್‌ವೇಸ್ ಹಾರಾಟ ಸ್ಥಗಿತಗೊಳಿಸಿತ್ತು. ಜೂನ್‌ನಲ್ಲಿ ಎನ್‌ಸಿಎಲ್‌ಟಿಯಲ್ಲಿ ದಿವಾಳಿ ಪ್ರಕ್ರಿಯೆಗೆ ಕೋರಿತ್ತು. ಎರಡು ವರ್ಷಗಳ ಬಳಿಕ ಜಲನ್-ಕಾಲ್‌ರೋಕ್‌ಗೆ ಮಾರಾಟ ಮಾಡಲು ನಿರ್ಣಯವಾಗಿತ್ತು.
ಇದನ್ನೂ ಓದಿ | ಏರ್ ಏಷ್ಯಾವನ್ನೂ ಖರೀದಿಸಲು ಮುಂದಾದ TATA: ಪೂರ್ಣ ಮಾಲೀಕತ್ವ ಕುರಿತು ಪ್ರಸ್ತಾಪ
30 ವರ್ಷ ಹಳೆಯ ಏರ್‌ಲೈನ್
ಜೆಟ್ ಏರ್‌ವೇಸ್ ಅನ್ನು 1992ರ ಏಪ್ರಿಲ್ 1ರಂದು ಸ್ಥಾಪಿಸಲಾಗಿತ್ತು. 1993ರ ಮೇ 5ರಂದು ಹಾರಾಟ ಆರಂಭಿಸಿತ್ತು. ಇದರ ಸ್ಥಾಪಕಾಧ್ಯಕ್ಷ ಉದ್ಯಮಿ ನರೇಶ್ ಗೋಯೆಲ್. 90ರ ದಶಕದಲ್ಲಿ ಅಂದಿನ ಪ್ರಧಾನಿ ಪಿವಿ ನರಸಿಂಹರಾವ್ ಆರ್ಥಿಕ ಉದಾರೀಕರಣ ನೀತಿಯನ್ನು ಜಾರಿಗೊಳಿಸಿದಾಗ ಅದರ ಪ್ರಯೋಜನವನ್ನು ಗೋಯೆಲ್ ಪಡೆದರು. ಜೆಟ್ ಏರ್‌ವೇಸ್ 2006ರಲ್ಲಿ ಏರ್ ಸಹಾರಾವನ್ನು ಖರೀದಿಸಿತ್ತು. 2016ರ ವೇಳೆಗೆ ಭಾರತದ ವಿಮಾನ ಪ್ರಯಾಣಿಕರ ಮಾರುಕಟ್ಟೆಯಲ್ಲಿ ಶೇ.21 ಪಾಲನ್ನು ಹೊಂದಿತ್ತು. ವಿಶ್ವದ 74 ಸ್ಥಳಗಳಿಗೆ ಜೆಟ್ ಏರ್‌ವೇಸ್‌ನ 300ಕ್ಕೂ ಹೆಚ್ಚು ವಿಮಾನಗಳ ಹಾರಾಟ ನಡೆಯುತ್ತಿತ್ತು. ದಿಲ್ಲಿ, ಮುಂಬಯಿ, ಚೆನ್ನೈ, ಕೋಲ್ಕೊತಾದಲ್ಲಿ ತನ್ನ ನೆಲೆಗಳನ್ನು ಹೊಂದಿತ್ತು. 2008ರಲ್ಲಿ ಜೆಟ್ ಏರ್‌ವೇಸ್ 1,900 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತು. ಬಳಿಕ ನಾಗರಿಕ ವಿಮಾನಯಾನ ಇಲಾಖೆಯ ಮಧ್ಯಪ್ರವೇಶದೊಂದಿಗೆ ಮರು ನೇಮಿಸಿತು.
ಜೆಟ್ ಏರ್‌ವೇಸ್ 2010ರ ಮೂರನೇ ತ್ರೈಮಾಸಿಕದ ವೇಳೆಗೆ ಭಾರತದ ಅತಿ ದೊಡ್ಡ ಏರ್‌ಲೈನ್ ಆಗಿತ್ತು. ಕೇಂದ್ರ ಸರಕಾರ 2013ರ ಏಪ್ರಿಲ್ 24ರಂದು ಹೊರಡಿಸಿದ ಘೋಷಣೆಯಲ್ಲಿ, ವಿದೇಶಿ ಏರ್‌ಲೈನ್ ಗಳು ಭಾರತೀಯ ಏರ್‌ಲೈನ್‌ಗಳಲ್ಲಿ ಶೇ.49ರ ತನಕ ಷೇರುಗಳನ್ನು ಖರೀದಿಸಬಹುದು ಎಂದು ಅವಕಾಶ ನೀಡಿತು. ಆಗ ಯುನೈಟೆಡ್ ಅರಬ್ ಎಮಿರೇಟ್ಸ್ ಏರ್‌ಲೈನ್ಸ್, ಜೆಟ್ ಏರ್‌ಲೈನ್ಸ್ ನಲ್ಲಿ ಷೇರು ಖರೀದಿಗೆ ಆಸಕ್ತಿ ವಹಿಸಿತು. ಶೇ.24 ಷೇರುಗಳನ್ನು ಮಾರಾಟ ಮಾಡಲು ಜೆಟ್ ಏರ್‌ವೇಸ್ ನಿರ್ಧರಿಸಿತು. 2013 ರ ನವೆಂಬರ್ ವೇಳೆಗೆ ಡೀಲ್ ಅಂತಿಮವಾಯಿತು. ಶೇ.51 ಷೇರುಗಳನ್ನು ನರೇಶ್ ಗೋಯಲ್ ಉಳಿಸಿಕೊಂಡರು.
ದಿವಾಳಿಯಾಗಿದ್ದ ಜೆಟ್ ಏರ್‌ವೇಸ್
ಜೆಟ್ ಏರ್‌ವೇಸ್ 2018ರ ನವೆಂಬರ್ ವೇಳೆಗೆ ನಕಾರಾತ್ಮಕ ಹಣಕಾಸು ಮುನ್ನೋಟವನ್ನು ದಾಖಲಿಸಿತ್ತು. 2019ರ ಮಾರ್ಚ್ ನಲ್ಲಿ ಗೋಯೆಲ್ ಮತ್ತು ಪತ್ನಿ ಅನಿತಾ ಗೋಯೆಲ್ ನಿರ್ದೇಶಕರುಗಳ ಮಂಡಳಿಗೆ ರಾಜೀನಾಮೆ ನೀಡಿದರು. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಇಂಧನ ಸರಬರಾಜನ್ನು ಸ್ಥಗಿತಗೊಳಿಸಿತು. ಏರ್‌ಲೈನ್ ಹಾರಾಟ ಸ್ತಬ್ಧವಾಯಿತು. ಇದೀಗ ಮತ್ತೆ ಜೆಟ್ ಏರ್‌ವೇಸ್ ಟೇಕಾಫ್ ಆಗುತ್ತಿದೆ. ಮತ್ತೊಂದು ಕಡೆ ಏರ್ ಇಂಡಿಯಾ ಕೂಡ ಟಾಟಾ ಗ್ರೂಪ್‌ಗೆ ಮರಳಿದೆ. ಇವೆರಡೂ ಉತ್ತಮ ಬೆಳವಣಿಗೆ ಎನ್ನುತ್ತಾರೆ ತಜ್ಞರು.