ನವ ದೆಹಲಿ: ದುಬೈನ ಮೆಟ್ರೊ ನಿಲ್ದಾಣಗಳ ವಾಸ್ತುಶಿಲ್ಪ ಸೌಂದರ್ಯಕ್ಕೆ ಹೋಲಿಸಿದರೆ ಭಾರತದ ಬೆಂಗಳೂರು, ಗುರ್‌ಗಾಂವ್, ಕೋಲ್ಕತಾ ಮೆಟ್ರೊ ನಿಲ್ದಾಣಗಳು ಕೇವಲ ಕಾಂಕ್ರಿಟ್ ರಚನೆಗಳಾಗಿದ್ದು, ಯಾವುದೇ ಕಲಾತ್ಮಕತೆಯನ್ನು ಹೊಂದಿಲ್ಲ ಎಂದು ಟೀಕಿಸಿದ್ದ ಜೆಟ್ ಏರ್‌ವೇಸ್ ಸಿಇಒ ( Jet Airways CEO) ಸಂಜೀವ್ ಕಪೂರ್ ವಿರುದ್ಧ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಲಾತ್ಮಕ ಸೌಂದರ್ಯ ಎನ್ನುವುದು ವೈಯಕ್ತಿಕವಾದದ್ದು. ಅದನ್ನು ಇತರರ ದೃಷ್ಟಿಕೋನದೊಂದಿಗೆ ಸಮೀಕರಿಸಿ ಹೇಳುವಾಗ ಎಚ್ಚರ ವಹಿಸಬೇಕು. ಮುಖ್ಯವಾಗಿ ವಿನ್ಯಾಸಗಳು ಬಳಕೆದಾರರಿಗೆ ಆದ್ಯತೆ ನೀಡಿರಬೇಕೇ ವಿನಾ ನೋಡುಗರಿಗೆ ಇರುವುದಲ್ಲ ಎಂದು ನೆಟ್ಟಿಗರು ಕುಟುಕಿದ್ದಾರೆ.
ದುಬೈ ಮೆಟ್ರೊ ವಿಫಲ ಯೋಜನೆಯಾಗಿದ್ದರೆ, ದಿಲ್ಲಿ ಮೆಟ್ರೊ ಯಶಸ್ವಿಯಾಗಿದೆ. ಸಂಪನ್ಮೂಲವನ್ನು ಹೇಗೆ ಖರ್ಚು ಮಾಡುತ್ತೇವೆ ಎನ್ನುವುದು ಮುಖ್ಯ ಎಂದು ಮತ್ತೊಬ್ಬರು ಹೇಳಿದ್ದಾರೆ. ಮತ್ತೊಬ್ಬರು ಬೆಂಗಳೂರು ಮೆಟ್ರೊದಲ್ಲಿ ಕೂಡ ಆಕರ್ಷಕ ಕಲಾತ್ಮಕತೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು, ಗುರ್‌ಗಾಂವ್, ಕೋಲ್ಕೊತಾ ಮೊದಲಾದೆಡೆ ಮೆಟ್ರೊ ನಿಲ್ದಾಣಗಳು ಏಕೆ ಕಲಾತ್ಮಕವಾಗಿಲ್ಲ? ಉದಾಹರಣೆಗೆ ಬೆಂಗಳೂರು (ಎಡ) ಮತ್ತು ದುಬೈ (ಬಲ) ಮೆಟ್ರೊವನ್ನು ಹೋಲಿಸಿ. ದುಬೈನದ್ದು ಬಹುಶಃ 10 ವರ್ಷ ಮೊದಲು ನಿರ್ಮಿಸಿದ್ದು. ಎಷ್ಟು ಸುಂದರವಾಗಿದೆ, ಕಲಾತ್ಮಕವಾಗಿದೆ ಎಂದು ಸಂಜೀವ್ ಕಪೂರ್ ಟ್ವೀಟ್ ಮಾಡಿದ್ದರು. ಕಪೂರ್ ಅವರ ಟೀಕೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ, ನೀವು ಬೇಕಾದರೆ ದುಬೈಗೆ ಹೋಗಿ ನೆಲಸಬಹುದು ಎಂದು ತರಾಟೆಗೆ ತೆಗೆದುಕೊಂಡೊದ್ದಾರೆ.
ಅದಕ್ಕೂ ಪ್ರತಿಕ್ರಿಯಿಸಿರುವ ಕಪೂರ್, ಜಪಾನ್‌ನಲ್ಲಿ ಸಣ್ಣ ಅಪಾರ್ಟ್‌ಮೆಂಟ್ ಅನ್ನೂ ಕಲಾತ್ಮಕವಾಗಿ ನಿರ್ಮಿಸುತ್ತಾರೆ. ಅದಕ್ಕೆ ಬಾಂಬ್ ನಿರ್ಮಿಸುವಷ್ಟ ವೆಚ್ಚವೂ ಆಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ವೈಟ್ ಫೀಲ್ಡ್-ಕೆಆರ್ ಪುರಂ ಮೆಟ್ರೊ ಮಾರ್ಗ ಮಾರ್ಚ್ 25ಕ್ಕೆ ಉದ್ಘಾಟನೆಯಾಗಲಿದೆ. ಈ ನಡುವೆ ಕಪೂರ್ ಭಾರತೀಯ ಮೆಟ್ರೊಗಳನ್ನು ದುಬೈ ಮೆಟ್ರೊಗೆ ಹೋಲಿಸಿ ಟೀಕಿಸಿರುವುದು ನೆಟ್ಟಿಗರನ್ನು ತೆರಳಿಸಿದೆ.