Site icon Vistara News

Amazon layoffs : ಅಮೆಜಾನ್‌ನಲ್ಲಿ ಉದ್ಯೋಗ ಕಡಿತ ಆರಂಭ, ಜಾಹೀರಾತು ವಿಭಾಗಕ್ಕೆ ಎಫೆಕ್ಟ್

Amazon planning to lay off from Alexa unit

ನವ ದೆಹಲಿ: ಇ-ಕಾಮರ್ಸ್‌ ದಿಗ್ಗಜ ಅಮೆಜಾನ್‌ ವೆಚ್ಚ ನಿಯಂತ್ರಣದ ಭಾಗವಾಗಿ (Amazon layoffs) ತನ್ನ ಜಾಹೀರಾತು ವಿಭಾಗದಲ್ಲಿ ಉದ್ಯೋಗ ಕಡಿತವನ್ನು ಮಂಗಳವಾರದಿಂದ ಆರಂಭಿಸಿದೆ. ಇ-ಮೇಲ್‌ ಮೂಲಕ ಸಂಬಂಧಿಸಿದ ಉದ್ಯೋಗಿಗಳಿಗೆ ತಿಳಿಸಲಾಗಿದೆ.

ಅಮೆಜಾನ್‌ನ ಜಾಹೀರಾತು ವಿಭಾಗದ ಹಿರಿಯ ಉಪಾಧ್ಯಕ್ಷ ಪೌಲ್‌ ಕೋಟಾಸ್‌ ಅವರು, ಉದ್ಯೋಗಿಗಳಿಗೆ ಲೇಆಫ್‌ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಸಿಬ್ಬಂದಿ ಬಲದಲ್ಲಿ ಸಣ್ಣ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ. ನವ ದೆಹಲಿ ಮತ್ತು ನ್ಯೂಯಾರ್ಕಿನಲ್ಲಿರುವ ಕಂಪನಿಯ ಉದ್ಯೋಗಿಗಳ ಮೇಲೆ ಇದು ಪ್ರಭಾವ ಬೀರಲಿದೆ. ಕಂಪನಿಯೊಳಗೆಯೇ ಬೇರೆ ಉದ್ಯೋಗ ಕಂಡುಕೊಳ್ಳಲು ಕೂಡ ಉದ್ಯೋಗಿಗಳಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ಅಮೆಜಾನ್‌ 27,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಳೆದ ಜನವರಿಯಲ್ಲಿ 18,000 ಹುದ್ದೆ ಕಡಿತವನ್ನು ಘೋಷಿಸಲಾಗಿತ್ತು. ಕಳೆದ ತಿಂಗಳು 9000 ಸಿಬ್ಬಂದಿಯನ್ನು ವಜಾಗೊಳಿಸಲಾಗಿತ್ತು.

ಮೆಟಾದಲ್ಲಿ ಸಾಮೂಹಿಕ ಉದ್ಯೋಗ ಕಡಿತ:

ಮೆಟಾ ಪ್ಲಾಟ್‌ಫಾರ್ಮ್ಸ್‌ ಎರಡನೇ ಸುತ್ತಿನ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಕಳೆದ ನವೆಂಬರ್‌ನಲ್ಲಿ ಸುಮಾರು 11,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. (Meta layoffs 2023) ಎರಡನೇ ಸುತ್ತಿನಲ್ಲಿ ಮತ್ತೆ ಫೇಸ್‌ಬುಕ್‌, ವಾಟ್ಸ್‌ ಆ್ಯಪ್, ಇನ್‌ಸ್ಟಾಗ್ರಾಮ್‌ನಲ್ಲಿ ಏಪ್ರಿಲ್‌ ಅಂತ್ಯಕ್ಕೆ ಉದ್ಯೋಗ ಕಡಿತವನ್ನು ನಿರೀಕ್ಷಿಸಲಾಗಿದೆ. ಕಳೆದ ಜನವರಿ-ಮಾರ್ಚ್‌ ಅವಧಿಯಲ್ಲಿ ಹೊಸ ನೇಮಕಾತಿಯನ್ನೂ ಮೆಟಾ ಕೈಗೊಂಡಿತ್ತು. ಬುಧವಾರದಿಂದಲೇ ಹುದ್ದೆ ಕಡಿತ ಆರಂಭವಾಗಿದ್ದು, ಇದರಲ್ಲಿ 4000ಕ್ಕೂ ಹೆಚ್ಚು ಮಂದಿ ಉನ್ನತ ಮಟ್ಟದ ಕೌಶಲ (skill) ಇರುವವರೇ ಆಗಿದ್ದಾರೆ ಎಂದು ವರದಿಯಾಗಿದೆ.

ಮೆಟಾ ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿದ್ದು, ಕಂಪನಿಯ ಸಂಘಟನೆಗೆ ಹೊಸ ತಂಡದ ಮೂಲಕ ಹೊಸತನ ನೀಡಲಾಗುವುದು, ಹಾಗೂ ದಕ್ಷತೆಯನ್ನು ಹೆಚ್ಚಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಮೆಟಾ ನಾರ್ತ್‌ ಅಮೆರಿಕದಲ್ಲಿ ಎಲ್ಲ ಉದ್ಯೋಗಿಗಳಿಗೆ ಬುಧವಾರ ಮನೆಯಿಂದಲೇ ಕೆಲಸ ಮಾಡಲು ತಿಳಿಸಿದೆ. ಮಾರ್ಕ್‌ ಜುಕರ್‌ ಬರ್ಗ್‌ ಅವರು 2023 ಅನ್ನು ದಕ್ಷತೆಯ ವರ್ಷ (year of efficiency) ಎಂದು ಕರೆದಿದ್ದಾರೆ.

ಫೇಸ್‌ಬುಕ್‌ ತನ್ನ ನೇಮಕಾತಿ ಮತ್ತು ಟೆಕ್‌ ಗ್ರೂಪ್‌ಗಳಲ್ಲಿ ಹುದ್ದೆ ಕಡಿತ ಮಾಡುವುದಾಗಿ ತಿಳಿಸಿದೆ. ಆದರೆ ಜತೆಗೆ 5,000 ಮಂದಿಯನ್ನು ನೇಮಿಸಿಕೊಳ್ಳಲೂ ಸಜ್ಜಾಗಿದೆ. ಅಂದರೆ ಸಾಂಸ್ಥಿಕ ಪುನಾರಚನೆಗೆ ಕಂಪನಿ ತೊಡಗಿಸಿಕೊಂಡಿದೆ ಎನ್ನುತ್ತಾರೆ ತಜ್ಞರು. ಮೆಟಾ ತನ್ನ ಫ್ಯೂಚರಿಸ್ಟಿಕ್‌ ಮೆಟಾವರ್ಸ್‌ ಅನ್ನು ನಿರ್ಮಿಸಲು ಕೋಟ್ಯಂತರ ಡಾಲರ್‌ ವ್ಯಯಿಸಿತ್ತು. ಕೋವಿಡ್‌ ಬಿಕ್ಕಟ್ಟಿನ ಬಳಿಕ ಕಂಪನಿಗಳ ಜಾಹೀರಾತು ವೆಚ್ಚ ತಗ್ಗಿರುವುದೂ ಮೆಟಾಗೆ ಸವಾಲಾಗಿ ಪರಿಣಮಿಸಿದೆ. ಎರಡನೇ ಸುತ್ತಿನ ಹುದ್ದೆ ಕಡಿತದ ಸುದ್ದಿ ಹಿನ್ನೆಲೆಯಲ್ಲಿ (Pink slip) ಕಂಪನಿಯ ಷೇರು ದರ ಏರಿಕೆಯಾಗಿದೆ.

ಭಾರತದಲ್ಲಿರುವ ಮೆಟಾ ಉದ್ಯೋಗಿಗಳು ಕೂಡ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ವಾಷಿಂಗ್ಟನ್‌ ಪೋಸ್ಟ್‌ ವರದಿಯ ಪ್ರಕಾರ ಫೇಸ್‌ಬುಕ್‌, ವಾಟ್ಸ್‌ ಆ್ಯಪ್, ಇನ್‌ಸ್ಟಾಗ್ರಾಮ್‌, ಮೆಸೆಂಜರ್‌ ವಿಭಾಗದಲ್ಲಿ ಸಾವಿರಾರು ಉದ್ಯೋಗ ಕಡಿತ ನಡೆಯಲಿದೆ.

Exit mobile version