ವಾಷಿಂಗ್ಟನ್: ಅಮೆರಿಕದಲ್ಲಿ ಟೆಸ್ಲಾ ಕಂಪನಿಯ ಸಿಇಒ ಹಾಗೂ ವಿಶ್ವದ ಅತಿ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅಮೆರಿಕದ ಆರ್ಥಿಕತೆ ಕುಸಿದಿರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಜತೆಗೆ ತಮ್ಮ ಕಂಪನಿಯಲ್ಲಿ 10 ಸಾವಿರ ಹುದ್ದೆಗಳ ಕಡಿತವನ್ನು ಮಾಡುವ ಉದ್ದೇಶ ಇರುವುದನ್ನು ತಿಳಿಸಿದ್ದಾರೆ.
ಕೇವಲ ಟೆಸ್ಲಾ ಒಂದರಲ್ಲೇ ಅಲ್ಲ, ಕಾರ್ಪೊರೇಟ್ ವಲಯದ ಹಲವು ಕಂಪನಿಗಳಲ್ಲಿ ಉದ್ಯೋಗ ಕಡಿತದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಣದುಬ್ಬರ ಕಳೆದೊಂದು ದಾಶಕದಲ್ಲಿಯೇ ಗರಿಷ್ಠ ಪ್ರಮಾಣಕ್ಕೆ ಜಿಗಿದಿರುವುದು, ರಷ್ಯಾ-ಉಕ್ರೇನ್ ಬಿಕ್ಕಟ್ಟು ಪರಿಸ್ಥಿತಿಯನ್ನು ಬಿಗಡಾಯಿಸಿದೆ ಎಂದು ವರದಿಯಾಗಿದೆ.
ಆಲಿಬಾಬಾದಲ್ಲಿ 39,000 ಹುದ್ದೆ ಕಡಿತ ಸಂಭವ
ಚೀನಾ ಮೂಲದ ಆಲಿಬಾಬಾ ಗ್ರೂಪ್ ತನ್ನ ಒಟ್ಟು ಉದ್ಯೋಗಿಗಳ ಬಲದಲ್ಲಿ 15% ಕಡಿತಕ್ಕೆ ನಿರ್ಧರಿಸಿರುವುದಾಗಿ ವರದಿಯಾಗಿದೆ. ಅಂದರೆ 15% ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ವ್ಯಾಪಾರ ಮಂದಗತಿಗೆ ತಿರುಗಿರುವುದು, ಸರಕಾರದ ಕಠಿಣ ನಿಯಂತ್ರಕ ಕ್ರಮಗಳು, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದ ಪರಿಣಾಮ ಆಲಿಬಾಬಾ ಗ್ರೂಪ್ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
ಅಮೆರಿಕದ ಪೆಲ್ಟೋನ್ ಕಂಪನಿ 2,800 ಉದ್ಯೋಗಿಗಳನ್ನು ಮನೆಗೆ ಕಳಿಸಲು ತೀರ್ಮಾನಿಸಿದೆ. ಕಾರ್‌ವನಾ 2,500 ಹುದ್ದೆ ಕಡಿತಕ್ಕೆ ನಿರ್ಧರಿಸಿದೆ. ಕಾಯಿನ್ ಬೇಸ್ ಹೊಸ ನೇಮಕಾತಿಯನ್ನು ನಿಲ್ಲಿಸಿದೆ. ಜರ್ಮನಿಯ ಹೆನ್‌ಕೆಲ್ ಕಂಪನಿ 2,000 ಹುದ್ದೆಗಳನ್ನು ಕಡಿತಗೊಳಿಸಲಿದೆ. ಸ್ವೀಡನ್ ಮೂಲದ ಕ್ಲಾರ್ನಾ 700 ಉದ್ಯೋಗಿಗಳನ್ನು ವಜಾಗೊಳಿಸಲು ಉದ್ದೇಶಿಸಿದೆ. ಮೆಟಾ, ರಾಬಿನ್ ಹುಡ್, ಟೆನ್ಸೆಂಟ್, ನೆಟ್ ಫ್ಲಿಕ್ಸ್ ಕೂಡ ಇದೇ ನಿಟ್ಟಿನಲ್ಲಿ ಆಲೋಚಿಸಿದೆ. ಟ್ವಿಟರ್ ನೇಮಕಾತಿಯನ್ನು ಸದ್ಯಕ್ಕೆ ನಿಲ್ಲಿಸಿದೆ.
ಭಾರತದ ಸ್ಟಾರ್ಟಪ್‌ಗಳಲ್ಲಿ ಉದ್ಯೋಗ ನಷ್ಟ
ಭಾರತದ ನಾನಾ ವಲಯದ ಸ್ಟಾರ್ಟಪ್‌ಗಳಲ್ಲಿ ಇತ್ತೀಚೆಗೆ ಹುದ್ದೆ ಕಡಿತ ಆರಂಭವಾಗಿದೆ. ಇದುವರೆಗೆ 6,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಶೈಕ್ಷಣಿಕ ತಂತ್ರಜ್ಞಾನದಿಂದ ಇ-ಕಾಮರ್ಸ್ ವಲಯದ ತನಕ ಹಲವು ಕ್ಷೇತ್ರಗಳ ಸ್ಟಾರ್ಟಪ್‌ಗಳಲ್ಲಿ ಉದ್ಯೋಗ ನಷ್ಟವಾಗುತ್ತಿದೆ.
ದೇಶದಲ್ಲಿ ಕಳೆದ ಏಪ್ರಿಲ್‌ನಲ್ಲಿ ನಿರುದ್ಯೋಗದ ಪ್ರಮಾಣ ಶೇ.7.83ಕ್ಕೆ ಏರಿಕೆಯಾಗಿದೆ. ಮಾರ್ಚ್‌ನಲ್ಲಿ ಶೇ.7.60 ಇತ್ತು ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಎಂಬ ಖಾಸಗಿ ಸಂಸ್ಥೆಯ ಸಮೀಕ್ಷೆ ತಿಳಿಸಿದೆ. ಹರಿಯಾಣ, ರಾಜಸ್ತಾನ, ಬಿಹಾರ ಮತ್ತು ಜಮ್ಮು ಕಾಶ್ಮೀರದಲ್ಲಿ ನಿರುದ್ಯೋಗ ಹೆಚ್ಚು ಎಂದು ತಿಳಿಸಿದೆ.