ನವ ದೆಹಲಿ: ಇತ್ತೀಚೆಗೆ ವಾರಂಗಲ್‌ನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (National Institute of Technology Warangal) ಸಂಸ್ಥೆಯಲ್ಲಿ ನಡದ ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ ಹೊಸ ದಾಖಲೆಯೇ ಸೃಷ್ಟಿಯಾಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹೈದರಾಬಾದ್ ( Indian Institute of Technology Hyderabad) ಅನ್ನೂ ಮೀರಿಸುವಂತೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಜಾಬ್ಸ್ ಆಫರ್‌ಗಳು ಲಭಿಸಿರುವುದು ವಿಶೇಷ.
ಎಲ್ಲಕ್ಕಿಂತ ವಿಶೇಷ ಏನೆಂದರೆ ಅಂತಿಮ ವರ್ಷದ ಎಂಟೆಕ್ ಓದುತ್ತಿರುವ ಆದಿತ್ಯ ಸಿಂಗ್ (Aditya Singh) ಅವರಿಗೆ ವಾರ್ಷಿಕ ದಾಖಲೆಯ 88 ಲಕ್ಷ ರೂ. ವೇತನದ ಆಫರ್ ಲಭಿಸಿದೆ. ಐಐಟಿ-ಹೈದರಾಬಾದ್‌ನಲ್ಲಿ (IIT-Hyderabad) ಗರಿಷ್ಠ 63.8 ಲಕ್ಷ ರೂ. ವೇತನದ ಆಫರ್ ಲಭಿಸಿತ್ತು. ಮೂರು ಸುತ್ತುಗಳ ಬಳಿಕ ಆದಿತ್ಯ ಅವರೊಬ್ಬರೇ ಆಯ್ಕೆಯಾಗಿದ್ದರು.
ಸಾಮಾನ್ಯವಾಗಿ ಇನ್‌ಸ್ಟಿಟ್ಯೂಟ್‌ನಲ್ಲಿ 20-30 ಲಕ್ಷ ರೂ. ಸಂಬಳದ ಆಫರ್ ಲಭಿಸುತ್ತಿತ್ತು. ಹೀಗಾಗಿ ಕಂಪನಿಯು 88 ಲಕ್ಷ ರೂ. ವೇತನದ ಆಫರ್ ಕೊಟ್ಟಾಗ ಸ್ವತಃ ಆದಿತ್ಯ ಸಿಂಗ್ ಅವರಿಗೇ ಆಶ್ಚರ್ಯವಾಗಿತ್ತು. ಹಾಗಾದರೆ ಶಾಲಾ ದಿನಗಳಿಂದಲೇ ಆದಿತ್ಯ ಸಿಂಗ್ ಟಾಪರ್ ಆಗಿದ್ದರೇ? ಇಲ್ಲ! 10ನೇ ತರಗತಿಯಲ್ಲಿ ಆದಿತ್ಯ ಸಿಂಗ್ ಗಳಿಸಿದ್ದು ಕೇವಲ 75% ಅಂಕಗಳು ಮಾತ್ರ. ಹೀಗಿದ್ದರೂ, ಬಳಿಕ ಹೆಚ್ಚಿ ಸೀರಿಯಸ್ ಆಗಿ ಓದಬೇಕು ಎಂದು ಬಯಸಿದ್ದರು. ಹಾಗೆಯೇ ಓದಿನಲ್ಲಿ ಮುಳುಗಿದರು. ಪರಿಣಾಮ 12ನೇ ತರಗತಿಯಲ್ಲಿ 96% ಅಂಕ ಗಳಿಸಿದ್ದ. ಬಳಿಕ ಎನ್‌ಐಟಿ-ವಾರಂಗಲ್‌ನಲ್ಲಿ ಓದು ಮುಂದುವರಿಸಿದ್ದರು.
ಆದಿತ್ಯ ಅವರ ತಂದೆ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ. ಮಗ ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾನೆ ಎಂದು ಹೆಮ್ಮೆಯಿಂದ ಅವರು ಹೇಳುತ್ತಾರೆ. ಕೋವಿಡ್ ಲಾಕ್ ಡೌನ್ ವೇಳೆ ಸಾಫ್ಟ್‌ವೇರ್ ಕೋಡಿಂಗ್ ಅಭ್ಯಾಸ ಮಾಡುತ್ತಿದ್ದ, ಒಂದು ಕ್ಷಣವನ್ನೂ ಪೋಲು ಮಾಡುತ್ತಿರಲಿಲ್ಲ ಎನ್ನುತ್ತಾರೆ ಅವರು.
ಇದನ್ನೂ ಓದಿ: ಮದ್ರಾಸ್ ಐಐಟಿಯಿಂದ ನಾಲ್ಕು ವರ್ಷಗಳ ಆನ್‌ಲೈನ್ ಬಿಎಸ್ ಪದವಿ ಶುರು