ವಾಷಿಂಗ್ಟನ್: ಅಮೆರಿಕ ಮತ್ತು ಯುರೋಪ್ ವಿರುದ್ಧ ಸೇಡು ತೀರಿಸಲು ಒಂದು ವೇಳೆ ರಷ್ಯಾ ತನ್ನ ಕಚ್ಚಾ ತೈಲೋತ್ಪಾದನೆಯನ್ನು ಕಡಿತಗೊಳಿಸಿದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ದರ ೩೮೦ ಡಾಲರ್‌ಗೆ ಸ್ಫೋಟವಾಗಲಿದೆ ಎಂದು ಜೆಪಿ ಮೋರ್ಗಾನ್ ಸಂಸ್ಥೆಯ ವರದಿ ಎಚ್ಚರಿಸಿದೆ. ಈಗ ಬ್ರೆಂಟ್ ಕಚ್ಚಾ ತೈಲ ದರ ಬ್ಯಾರೆಲ್‌ಗೆ ೧೧೨ ಡಾಲರ್‌ನ ಮಟ್ಟದಲ್ಲಿದೆ.
ಉಕ್ರೇನ್ ವಿರುದ್ಧ ಸಂಘರ್ಷ ನಡೆಸುತ್ತಿರುವ ರಷ್ಯಾದ ಮೇಲೆ ಅಮೆರಿಕ ಮತ್ತು ಯುರೋಪ್ ನಿರ್ಬಂಧಗಳನ್ನು ಘೋಷಿಸಿವೆ. ಆದರೆ ರಷ್ಯಾ ಒಂದು ವೇಳೆ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ತನ್ನ ದಿನದ ತೈಲೋತ್ಪಾದನೆಯಲ್ಲಿ ೫೦ ಲಕ್ಷ ಬ್ಯಾರೆಲ್ ತನಕ ಕಡಿತಗೊಳಿಸಿದರೆ, ಅದರ ಎಕಾನಮಿಗೆ ಭಾರಿ ಸಮಸ್ಯೆಯಾಗದು. ಆದರೆ ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಸ್ಫೋಟವಾಗಲಿದೆ ಎಂದು ಅಮೆರಿಕ ಮೂಲದ ಜಾಗತಿಕ ಹಣಕಾಸು ಸಂಸ್ಥೆ ಜೆಪಿ ಮೋರ್ಗಾನ್‌ನ ವಿಶ್ಲೇಷಕ ನಟಾಶಾ ಕನೇವಾ ತಮ್ಮ ಗ್ರಾಹಕರಿಗೆ ತಿಳಿಸಿದ್ದಾರೆ.
ರಷ್ಯಾ ದಿನದ ತೈಲೋತ್ಪಾದನೆಯಲ್ಲಿ ೩೦ ಲಕ್ಷ ಬ್ಯಾರೆಲ್‌ನಷ್ಟು ಕಡಿತಗೊಳಿಸಿದರೆ ಪ್ರತಿ ಬ್ಯಾರೆಲ್ ಕಚ್ಚಾ ತೈಲ ದರ ೧೯೦ ಡಾಲರ್‌ಗೆ ಜಿಗಿಯಬಹುದು. ಆದರೆ ೫೦ ಲಕ್ಷ ಬ್ಯಾರೆಲ್ ಕಡಿತಗೊಳಿಸಿದರೆ ೩೮೦ ಡಾಲರ್‌ಗೆ ದರ ಸ್ಫೋಟವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಹೀಗಿದ್ದರೂ ರಷ್ಯಾ ಈ ರೀತಿ ತನ್ನ ತೈಲ ರಫ್ತನ್ನೇ ತಗ್ಗಿಸಿ, ವೈರಿಗಳ ವಿರುದ್ಧ ಪ್ರತೀಕಾರ ತೀರಿಸಲು ಯತ್ನಿಸುವ ಸಾಧ್ಯತೆ ಕಡಿಮೆ ಎಂದೂ ತಿಳಿಸಿದ್ದಾರೆ.