ನವದೆಹಲಿ: ಹೌಸಿಂಗ್ ಫೈನಾನ್ಸ್ ವಲಯದ ಡಿಎಚ್‌ಎಫ್‌ಎಲ್ ಸಂಸ್ಥೆಯ ಪ್ರಮೋಟರ್ಸ್ ಆಗಿದ್ದ ಕಪಿಲ್ ಮತ್ತು ಧೀರಜ್ ವಾಧ್ವಾನ್ ವಿರುದ್ಧ ಸಿಬಿಐ ಹೊಸತಾಗಿ ಕೇಸ್ ದಾಖಲಿಸಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ೩೪,೬೧೫ ಕೋಟಿ ರೂ. ವಂಚಿಸಿದ ಹಗರಣ ಇದಾಗಿದ್ದು, ಇದುವರೆಗೆ ಸಿಬಿಐ ತನಿಖೆಗೆ ದಾಖಲಾಗಿರುವ ಬ್ಯಾಂಕ್ ಹಗರಣಗಳಲ್ಲೇ ಅತಿ ದೊಡ್ಡದಾಗಿದೆ.
ಇತ್ತೀಚೆಗೆ ಎಬಿಜಿ ಶಿಪ್‌ಯಾರ್ಡ್ ಹಗರಣ ದಾಖಲಾಗಿತ್ತು. ಇದು ೨೨,೮೪೨ ಕೋಟಿ ರೂ. ಮೊತ್ತದ ಹಗರಣವಾಗಿತ್ತು.
ಡಿಎಚ್‌ಎಫ್‌ಎಲ್ ಹಗರಣಕ್ಕೆ ಸಂಬಂಧಿಸಿ ಸಿಬಿಐ, ಮುಂಬಯಿನ ೧೨ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಕಪಿಲ್ ವಾಧ್ವಾನ್ ಈ ಹಿಂದೆ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ (ಡಿಎಚ್‌ಎಫ್‌ಎಲ್) ಸಂಸ್ಥೆಯ ಸಿಎಂಡಿ ಆಗಿದ್ದರು. ಧೀರಜ್ ವಾಧ್ವಾನ್ ನಿರ್ದೇಶಕರಾಗಿದ್ದರು.
ಇವರಿಬ್ಬರೂ ಈಗ ಜೈಲಿನಲ್ಲಿದ್ದಾರೆ. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ತನಿಖೆ ಮುಂದುವರಿಸಿವೆ.
ಕಳೆದ ಸೆಪ್ಟೆಂಬರ್‌ನಲ್ಲಿ ಪಿರಮಲ್ ಕ್ಯಾಪಿಟಲ್ ಮತ್ತು ಹೌಸಿಂಗ್ ಫೈನಾನ್ಸ್ ಪಿಸಿಎಚ್‌ಎಫ್, ಡಿಎಚ್‌ಎಫ್‌ಎಲ್ ಅನ್ನು ೩೪,೨೫೦ ಕೋಟಿ ರೂ.ಗೆ ಖರೀದಿಸಿತ್ತು.