Site icon Vistara News

Karnataka Bank : ನೇರ ತೆರಿಗೆ, ಪರೋಕ್ಷ ತೆರಿಗೆ ಸಂಗ್ರಹಿಸಲು ಕರ್ಣಾಟಕ ಬ್ಯಾಂಕ್‌ಗೆ ಆರ್‌ಬಿಐ ಅನುಮತಿ

Karnataka Bank Locker

ಬೆಂಗಳೂರು: ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್‌ಗೆ ನೇರ ತೆರಿಗೆ, ಪರೋಕ್ಷ ತೆರಿಗೆಯನ್ನು ಸಂಗ್ರಹಿಸಲು ಆರ್‌ಬಿಐ ಅನುಮತಿ ನೀಡಿದೆ ಎಂದು ಸೆಂಟ್ರಲ್‌ ಬೋರ್ಡ್‌ ಆಫ್‌ ಡೈರೆಕ್ಟ್‌ ಟ್ಯಾಕ್ಸಸ್‌ (CBDT) ತಿಳಿಸಿದೆ. ಕಂಟ್ರೋಲರ್‌ ಜನರಲ್‌ ಆಫ್‌ ಅಕೌಂಟ್ಸ್‌ ಶಿಫಾರಸಿನ ಮೇರೆಗೆ ಆರ್‌ಬಿಐ ಈ ಅಧಿಕಾರವನ್ನು ಬ್ಯಾಂಕಿಗೆ ಕೊಟ್ಟಿದೆ.

ಗ್ರಾಹಕರು ಈಗಾಗಲೇ ಕಸ್ಟಮ್ಸ್‌ ಸುಂಕ ಪಾವತಿಯನ್ನು ಕರ್ಣಾಟಕ ಬ್ಯಾಂಕ್‌ನ ಮೂಲಕ ಮಾಡುತ್ತಿದ್ದಾರೆ. ಇಂಡಿಯನ್‌ ಕಸ್ಟಮ್ಸ್‌ ಎಲೆಕ್ಟ್ರಾನಿಕ್‌ ಗೇಟ್ವೇ (ICEGATE) ವೆಬ್‌ ಪೋರ್ಟಲ್‌ನಲ್ಲಿ ಕರ್ಣಾಟಕ ಬ್ಯಾಂಕ್‌ನ ಆಯ್ಕೆಯನ್ನೂ ಪಡೆಯಬಹುದು ಎಂದು ತಿಳಿಸಿದೆ. ಬ್ಯಾಂಕಿನ ಫೊರೆಕ್ಸ್‌ ಬಿಸಿನೆಸ್‌ ಮೇಲೆ ಇದು ಸಕಾರಾತ್ಮಕ ಪ್ರಭಾವ ಬೀರುವ ನಿರೀಕ್ಷೆ ಇದೆ.

ಕರ್ಣಾಟಕ ಬ್ಯಾಂಕ್‌ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಬಡ್ಡಿ ದರವನ್ನು ಪರಿಷ್ಕರಿಸಿದೆ. 375 ದಿನಗಳ ಠೇವಣಿಗೆ ಗರಿಷ್ಠ 7.30% ಬಡ್ಡಿ ದರ ಸಿಗಲಿದೆ. 7 ದಿನಗಳಿಂದ 10 ವರ್ಷ ಅವಧಿಗೆ 4.50%ರಿಂದ 5.80% ತನಕ ಬಡ್ಡಿ ದರ ಸಿಗಲಿದೆ.‌

ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ ತನ್ನ ಎಂಸಿಎಲ್‌ಆರ್‌ (Marginal cost of funds based lending rate) ದರವನ್ನು 0.05% ಏರಿಸಿದ್ದು, 2023ರ ಏಪ್ರಿಲ್‌ 12ರಿಂದ ಅನ್ವಯವಾಗಲಿದೆ.

ಎಂಸಿಎಲ್‌ಆರ್‌ ದರವು 6 ತಿಂಗಳಿನ ಅವಧಿಗೆ 8.45% ಮತ್ತು 1 ವರ್ಷ ಅವಧಿಗೆ 8.65% ಆಗಿದೆ. ಆರ್‌ಬಿಐ ಇತ್ತೀಚಿನ ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ನೀತಿ ದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಎಂಸಿಎಲ್‌ಆರ್‌ ದರವು ಎಂಸಿಎಲ್‌ ಆರ್‌ ಆಧರಿತ ಸಾಲ ಪಡೆದವರಿಗೆ ಪ್ರಭಾವ ಬೀರುತ್ತದೆ. ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲವನ್ನು ಎಂಸಿಎಲ್‌ಆರ್‌ ಆಧಾರದಲ್ಲಿ ನೀಡಬಹುದು.‌ ಕೆನರಾ ಬ್ಯಾಂಕ್‌ (Canara Bank) 2 ಕೋಟಿ ರೂ.ಗಿಂತ ಕೆಳಗಿನ ನಿಶ್ಚಿತ ಠೇವಣಿಗಳಿಗೆ (fixed deposits) ಬಡ್ಡಿ ದರವನ್ನು ಕೂಡ ಏರಿಸಿದೆ. ಪರಿಷ್ಕೃತ ದರ 2023ರ ಮಾರ್ಚ್‌ 5ರಿಂದ ಜಾರಿಯಾಗಿದೆ ಎಂದು ಬ್ಯಾಂಕಿನ ವೆಬ್‌ಸೈಟ್‌ ತಿಳಿಸಿದೆ.

Exit mobile version