ಬೆಂಗಳೂರು: ಕೇಂದ್ರ ಸರ್ಕಾರವು ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸಲು 2019-20ರಿಂದ 2022-23 ತನಕ ಒಟ್ಟು 2,77,711 ಕೋಟಿ ರೂ.ಗಳನ್ನು ನೀಡಿದೆ. ಇದರಲ್ಲಿ 1,57,218 ಕೋಟಿ ರೂ. ತೆರಿಗೆಯಲ್ಲಿ ರಾಜ್ಯದ ಪಾಲಾಗಿದ್ದು, 157218 ಕೋಟಿ ರೂ.ಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನ, ಕೋವಿಡ್ ಲಸಿಕೆ, ಜಲಜೀವನ್ ಮಿಷನ್, ಅಮೃತ್ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ಫಸಲ್ ಬಿಮಾ ಯೋಜನೆ, ನರೇಗಾ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ಕೇಂದ್ರ ಪುರಸ್ಕೃತ ಯೋಜನೆಗಳ ಅಡಿಯಲ್ಲಿ ಕೇಂದ್ರ ಸರ್ಕಾರ ಅನುದಾನ ನೀಡಿದೆ.
ಆರ್ಥಿಕತೆಯನ್ನು ಉತ್ತೇಜಿಸಲು 61,234 ಕೋಟಿ ರೂ. ಹೂಡಿಕೆ:
ಕರ್ನಾಟಕ ರಾಜ್ಯವು ಹೂಡಿಕೆಯನ್ನು ಆಕರ್ಷಿಸುವಲ್ಲಿ ದೇಶದಲ್ಲಿ ಅಗ್ರಸ್ಥಾನವನ್ನು ಕಾಯ್ದಿರಿಸಿದೆ. ನಾನಾ ವಲಯಗಳಿಗೆ ನೀತಿ ಮತ್ತು ಉಪಕ್ರಮಗಳ ಮೂಲ ಹೂಡಿಕೆದಾರರಸ್ನೇಹಿಯಾಗಿ ಬದಲಾಗಿದೆ. ಸರ್ಕಾರವು ಆರ್ಥಿಕತೆಯನ್ನು ಉತ್ತೇಜಿಸಲು ಹಾಗೂ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ಹೂಡಿಕೆಯನ್ನು ಹೆಚ್ಚಿಸಲಾಗುವುದು. 2022-23ರ ಆಯವ್ಯಯದಲ್ಲಿ ಅಂದಾಜಿಸಿದ್ದ 46,955 ಕೋಟಿ ರೂ. ಹೂಡಿಕೆಯನ್ನು 2023-24ರಲ್ಲಿ 61,234 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಇದು ಕಳೆದ ವರ್ಷದ ಆಯವ್ಯಯ ಅಂದಾಜಿಗಿಂತ 30.4% ಹೆಚ್ಚಾಗಿದೆ. ಇದು ಕಳೆದ 10 ವರ್ಷಗಳಲ್ಲಿನ ಬಂಡವಾಳ ಹಂಚಿಕೆಯಲ್ಲಿಯೇ ಅತಿ ಹೆಚ್ಚಿನ ಏರಿಕೆಯಾಗಿದೆ.
ರಾಜ್ಯದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ವಿಮಾನ ನಿಲ್ದಾಣಗಳು, ರೈಲ್ವೆ ಮಾರ್ಗಗಳು, ಬಂದರು, ರಾಷ್ಟ್ರೀಯ ಹೆದ್ದಾರಿ, ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್ ಮುಂತಾದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಮೂಲ ಸೌಕರ್ಯ ಅಭಿವೃದ್ಧಿಗೆ 69,031 ಕೋಟಿ ರೂ. ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ 5,000 ಕೋಟಿ ರೂ. ಮೌಲ್ಯದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು. 2019ರಲ್ಲಿ ಜಲಜೀವನ್ ಮಿಷನ್ ಆರಂಭವಾದಾಗ ಕರ್ನಾಟಕದಲ್ಲಿ ಮನೆಯಲ್ಲಿ 24 ಲಕ್ಷ ಇತ್ತು. ಹಿಂದಿನ ಮೂರು ವರ್ಷಗಳಲ್ಲಿ ಹೊಸತಾಗಿ 38 ಲಕ್ಷ ನಳ ಸಂಪರ್ಕ ನೀಡುವ ಮೂಲಕ 62 ಲಕ್ಷ ರೂ.ಗೆ ಏರಿಸಲಾಗಿದೆ.
2 ಲಕ್ಷ ಜನರಿಗೆ ಉದ್ಯೋಗ:
ಪ್ರಸ್ತುತ ರಾಜ್ಯ ಸರ್ಕಾರವು ಅನುಮೋದಿಸಿರುವ 393 ಕೈಗಾರಿಕಾ ಯೋಜನೆಗಳಿಂದ 2.37 ಲಕ್ಷ ಕೋಟಿ ರೂ. ಹೂಡಿಕೆ ಹರಿದು ಬರುವ ನಿರೀಕ್ಷೆ ಇದೆ. 2 ಲಕ್ಷ ಮಂದಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಹಾಗೂ ನಾನಾ ವಲಯಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸಲು 2023-24ನೇ ಸಾಲಿನಲ್ಲಿ ನಾಲ್ಕು ಹೂಡಿಕೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುವುದು.
ಬಹು ರಾಷ್ಟ್ರೀಯ ಕಂಪನಿಗಳ ಕಾರ್ಯಾಚರಣೆಯನ್ನು ತ್ವರಿತವಾಗಿ ಆರಂಭಿಸಲು ಬೆಂಗಳೂರಿನ ಸುತ್ತಮುತ್ತ ಪ್ಲಗ್ & ಪ್ಲೇ ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು. ಉತ್ತರಕನ್ನಡ ಜಿಲ್ಲೆಯ ಕೋಡ್ಕಣಿ, ಬೆಳಗಾವಿಯ ಕಣಗಲಾ, ಚಾಮರಾಜನಗರದ ಬದನಗುಪ್ಪೆ, ಕಲಬುರಗಿಯ ಚಿತ್ತಾಪುರ, ತುಮಕೂರಿನ ಬೈರಗೊಂಡನಹಳ್ಳಿ, ಚಿಕ್ಕನಾಯಕನಹಳ್ಳಿ, ಬೀದರ್‌ನ ಹುಮನಾಬಾದ್, ರಾಯಚೂರು ಗ್ರಾಮಾಂತರ, ವಿಜಯಪುರದ ಹೂವಿನ ಹಿಪ್ಪರಗಿ ಮತ್ತು ಚಿತ್ರದುರ್ಗದ ಮೊಳಕಾಲ್ಮೂರು ಹೀಗೆ 9 ಸ್ಥಳಗಳಲ್ಲಿ ಹೊಸತಾಗಿ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಲಾಗುವುದು.
ಮೈಶುಗರ್ ಕಾರ್ಖಾನೆ ಆರಂಭವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಎಥೆನಾಲ್ ಉತ್ಪಾದನಾ ಘಟಕವನ್ನೂ ಸ್ಥಾಪಿಸಲಾಗುವುದು.
ಮಹಿಳಾ ಉದ್ಯಮಿಗಳಿಗೆ 5 ಕೋಟಿ ರೂ. ಸಾಲ:
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಸೇವಾ ವಲಯದಲ್ಲಿನ ಮಹಿಳಾ ಉದ್ದಿಮೆದಾರರಿಗೆ ಇದುವರೆಗೆ 4% ಬಡ್ಡಿ ದರದಲ್ಲಿ 2 ಕೋಟಿ ರೂ. ತನಕ ಸಾಲ ನೀಡಲಾಗುತ್ತಿತ್ತು. ಇದನ್ನು 5 ಕೋಟಿ ರೂ.ಗೆ ವಿಸ್ತರಿಸಲಾಗುವುದು.
ಜವಳಿ ಪಾರ್ಕ್‌ಗಳಿಂದ 25,000 ಉದ್ಯೋಗ:
ರಾಯಚೂರು, ಕಲಬುರಗಿ, ವಿಜಯಪುರ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನೂತನ ಮೆಗಾ ಜವಳಿ ಪಾರ್ಕ್, ರಾಜ್ಯದ 25 ಸ್ಥಳಗಳಲ್ಲಿ ಮಿನಿ ಜವಳಿ ಪಾರ್ಕ್‌ಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು. ಇದರಿಂದ 25,000 ಜನರಿಗೆ ಉದ್ಯೋಗ ಸಿಗಲಿದೆ.