Site icon Vistara News

Karnataka Budget 2023: ಖಾಸಗಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣ, ರೈಲ್ವೆ, ರಸ್ತೆ, ಮೂಲಸೌಕರ್ಯಕ್ಕೆ 69,031 ಕೋಟಿ ರೂ.

road

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಜನವರಿ ಅಂತ್ಯದವರೆಗೂ ರಾಜ್ಯದಲ್ಲಿ 33,991 ಕೋಟಿ ರೂ. ಗಳಷ್ಟು ಬಂಡವಾಳ ವೆಚ್ಚವಾಗಿದ್ದು, ಇದು ಆಯವ್ಯಯ ಅಂದಾಜಿನ ಶೇ. 72ರಷ್ಟಿದೆ. ಕಳೆದ 10 ವರ್ಷಗಳಲ್ಲಿ ಅತಿ ಹೆಚ್ಚಿನ ಬಂಡವಾಳ ವೆಚ್ಚ ಇದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ ಭಾಷಣದಲ್ಲಿ ಹೇಳಿದರು. (Karnataka Budget 2023) ರಾಜ್ಯದ ಆರ್ಥಿಕ ಪ್ರಗತಿಯ ಗುರಿ ಮತ್ತು ದಾರಿಯ ಬಗ್ಗೆ ಬಜೆಟ್‌ನಲ್ಲಿರುವ ಪ್ರಸ್ತಾಪಗಳ ವಿವರ ಇಲ್ಲಿದೆ.

ರಾಜ್ಯದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ವಿಮಾನ ನಿಲ್ದಾಣಗಳು, ರೈಲು ಮಾರ್ಗಗಳ ಅಭಿವೃದ್ಧಿ,
ಸಬ್‌ಅರ್ಬನ್ ರೈಲ್ವೆ ನಿಲ್ದಾಣ, ಬಂದರುಗಳ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಮಲ್ಟಿ ಮೋಡಲ್ ಲಾಜಿಸ್ಟಿಕ್ ಪಾರ್ಕ್ ಮೊದಲಾದ ಮೂಲಸೌಕರ್ಯಗಳ ಅಭಿವೃದ್ಧಿಗೆ 69,031 ಕೋಟಿ ರೂ. ಗಳ ಯೋಜನೆಗಳನ್ನು ನೀಡಲಾಗಿದೆ. ಅಲ್ಲದೆ ಇನ್ನೂ ಹೆಚ್ಚುವರಿಯಾಗಿ ಸಾಕಷ್ಟು ಯೋಜನೆಗಳು ಅನುಷ್ಠಾನಗೊಳಿಸುವ ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ.

2019-20 ರಿಂದ 2022-23 ರವರೆಗೂ, ಕೇಂದ್ರ ಸರ್ಕಾರವು ನಮ್ಮ ರಾಜ್ಯಕ್ಕೆ ಒಟ್ಟು 2,77,711 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 1,20,493 ಕೋಟಿ ರೂ. ಗಳು ತೆರಿಗೆಯಲ್ಲಿ ರಾಜ್ಯದ ಪಾಲಾಗಿದ್ದು, 1,57,218 ಕೋಟಿ ರೂ. ಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನ, ಕೋವಿಡ್ ಲಸಿಕೆ, ಜಲಜೀವನ್ ಮಿಷನ್, ಅಮೃತ್ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ಫಸಲ್ ಬಿಮಾ ಯೋಜನೆ, ನರೇಗ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ 105 ಕೇಂದ್ರ ಪುರಸ್ಕೃತ ಯೋಜನೆಗಳಡಿ ಬಿಡುಗಡೆ ಮಾಡಿದೆ.

2019ರಲ್ಲಿ ಜಲಜೀವನ್‌ ಮಿಷನ್‌ ಪ್ರಾರಂಭವಾದಾಗ ಕರ್ನಾಟಕದಲ್ಲಿ ಮನೆಯಲ್ಲಿ ನಳ ಸಂಪರ್ಕ ಹೊಂದಿರುವ ಗ್ರಾಮೀಣ ಕುಟುಂಬಗಳ ಸಂಖ್ಯೆಯು 24 ಲಕ್ಷ ಇತ್ತು. ಹಿಂದಿನ 3 ವರ್ಷಗಳಲ್ಲಿ ಹೊಸದಾಗಿ 38 ಲಕ್ಷ ನಳ ಸಂಪರ್ಕವನ್ನು ನೀಡುವ ಮೂಲಕ ಪ್ರಸ್ತುತ 62 ಲಕ್ಷಕ್ಕೆ ಏರಿಸಲಾಗಿದೆ. ಇದಕ್ಕೆ ಪೂರಕವಾಗಿ ಸುಸ್ಥಿರವಾಗಿ ನೀರನ್ನು ಸರಬರಾಜು ಮಾಡಲು 101 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ 30,308 ಕೋಟಿ ರೂ. ಗಳಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ರಾಜ್ಯದಲ್ಲಿ ಉಳಿದ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲು 31,235 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ, ಪ್ರಸಕ್ತ ಸಾಲಿನಲ್ಲಿ 6,23೪ ಕೋಟಿ ರೂ. ಗಳನ್ನು ಒದಗಿಸಲಾಗಿದೆ.

ನರೇಗಾದಲ್ಲಿ ದಾಖಲೆಯ 23 ಲಕ್ಷ ವೈಯಕ್ತಿಕ ಕಾಮಗಾರಿ ಪೂರ್ಣ:

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯವು ಕಳೆದ 5 ವರ್ಷಗಳಲ್ಲಿ 23 ಲಕ್ಷ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮೂಲಕ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಇದರಡಿಯಲ್ಲಿ 2.25 ಲಕ್ಷ ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ, 25 ಸಾವಿರ ಎಕರೆ ಪ್ಲಾಂಟೇಷನ್‌, 25 ಸಾವಿರ ಎಕರೆ ರೇಷ್ಮೆ ಪ್ರದೇಶ ವಿಸ್ತರಣೆ, 1.25 ಲಕ್ಷ ಎಕರೆ ಕೃಷಿ ಅರಣ್ಯೀಕರಣ ಸೇರಿರುತ್ತದೆ. ಅಲ್ಲದೆ 12,547 ಶಾಲಾ ಕಾಂಪೌಂಡ್, 2,331 ಆಟದ ಮೈದಾನಗಳು, 17,574 ಶೌಚಾಲಯಗಳು, 3,117 ಅಂಗನವಾಡಿ ಕಟ್ಟಡಗಳು,
4.95 ಲಕ್ಷಗಳ ಜಾನುವಾರು ಶೆಡ್‌ಗಳ ನಿರ್ಮಾಣವಾಗಿವೆ. ಜೊತೆಗೆ 42,717 ಸಾಂಪ್ರದಾಯಿಕ ಜಲಮೂಲಗಳ ಪುನರುಜ್ಜೀವನ, 1.34 ಲಕ್ಷ ರಸ್ತೆ ಕಾಮಗಾರಿಗಳು ಹಾಗೂ 13,500 ಕಿ.ಮೀ. ರಸ್ತೆ ಬದಿ ನೆಡುತೋಪುಗಳೂ ಸೇರಿವೆ. ಈ ಯೋಜನೆಯಡಿಯಲ್ಲಿ 2023-24ನೇ ಸಾಲಿನಲ್ಲಿ 1,800 ಕೋಟಿ ರೂ. ವೆಚ್ಚದಲ್ಲಿ 88 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಲು ಉದ್ದೇಶಿಸಲಾಗಿದೆ.

ಗ್ರಾಮ ಪಂಚಾಯಿತಿಗಳಿಗೆ 780 ಕೋಟಿ ರೂ. ವಿಶೇಷ ಅನುದಾನ:

ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಸಶಕ್ತಗೊಳಿಸಲು ಮತ್ತು ಜನರಿಗೆ ಗ್ರಾಮ ಪಂಚಾಯಿತಿಗಳ ಮುಖಾಂತರ ಸ್ಥಳೀಯವಾಗಿಯೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಅವಕಾಶ ಮಾಡಲಾಗುವುದು. ಪ್ರಸ್ತುತ ಗ್ರಾಮ ಪಂಚಾಯಿತಿಗಳಿಗೆ, ಜನಸಂಖ್ಯೆ ಆಧರಿಸಿ 12 ಲಕ್ಷ ರೂ. ಗಳಿಂದ 35 ಲಕ್ಷ ರೂ. ಗಳವರೆಗೆ ರಾಜ್ಯ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ. 2023-24ನೇ ಸಾಲಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ 22 ರಿಂದ 60 ಲಕ್ಷ ರೂ. ಗಳಷ್ಟು ಅನುದಾನ ಲಭ್ಯಪಡಿಸಲು 780 ಕೋಟಿ ರೂ. ಗಳ ಒಂದು ಬಾರಿಯ ವಿಶೇಷ ಅನುದಾನ ಒದಗಿಸಲಾಗುವುದು.

ಗ್ರಾಮೀಣ ರಸ್ತೆಗಳ ಸುಧಾರಣೆಗೆ 300 ಕೋಟಿ ರೂ. ವೆಚ್ಚ:

ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ ಸರ್ಕಾರವು ಹೆಚ್ಚಿನ ಮಹತ್ವವನ್ನು ನೀಡಿದೆ. ಪ್ರಸಕ್ತ ಸಾಲಿನಲ್ಲಿ 2,070 ಕೋಟಿ ರೂ. ಗಳ ವೆಚ್ಚದಲ್ಲಿ 4,504 ಕಿ.ಮೀ. ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಗ್ರಾಮೀಣ ಭಾಗದ ರಸ್ತೆಗಳ ಮತ್ತು ಕೃಷಿ ಭೂಮಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗಾಗಿ, ನರೇಗಾ ಜೊತೆಗೆ ಸಂಯೋಜಿಸಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 25 ಕಿ.ಮೀ. ನಂತೆ ಒಟ್ಟಾರೆಯಾಗಿ 5,000 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು 300 ಕೋಟಿ ರೂ. ವೆಚ್ಚ ಮಾಡಲಾಗುವುದು.

ರಾಜ್ಯದ 20 ಸಾವಿರ ಗ್ರಾಮಗಳಲ್ಲಿ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಕಾಮಗಾರಿಗಳು ಜಾರಿಯಲ್ಲಿವೆ. ಗ್ರಾಮೀಣ ಪ್ರದೇಶಗಳ ಸ್ವಚ್ಛತೆಯನ್ನು ಕಾಪಾಡಲು ಅಗತ್ಯ ಚರಂಡಿ ವ್ಯವಸ್ಥೆಯನ್ನು ನರೇಗಾ ಹಾಗೂ ಸ್ವಚ್ಛ ಭಾರತ್‌ ಯೋಜನೆಗಳಡಿಯಲ್ಲಿ 4,190 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು.

ಪ್ರತಿ ವರ್ಷ 2,000 ಕೆರೆಗಳನ್ನು 200 ಕೋಟಿ ರೂ. ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಮೂಲಕ ಪಂಚಾಯತ್‌ ಕೆರೆಗಳ ಪುನರುಜ್ಜೀವನಕ್ಕೆ ಕ್ರಮವಹಿಸಲಾಗುವುದು.

ಕಳೆದ ಮೂರು ವರ್ಷಗಳಲ್ಲಿ 5,213 ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗಿದ್ದು, ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ಡಿಸೆಂಬರ್‌ 2023 ರ ಒಳಗಾಗಿ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗುವುದು.

Exit mobile version