Site icon Vistara News

Karvy stock broking : ಕಾರ್ವಿ ಸ್ಟಾಕ್‌ ಬ್ರೋಕಿಂಗ್‌ ನೋಂದಣಿ ರದ್ದುಪಡಿಸಿದ ಸೆಬಿ, ಕಾರಣವೇನು?

Stock market regulator SEBI

#image_title

ಮುಂಬಯಿ: ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ, (Securities and exchange board of India -SEBI) ಕಾರ್ವಿ ಸ್ಟಾಕ್‌ ಬ್ರೋಕಿಂಗ್‌ನ (Karvy Stock Broking) ನೋಂದಣಿಯನ್ನು ರದ್ದುಪಡಿಸಿದೆ. ಗ್ರಾಹಕರ ಹಣವನ್ನು ದುರ್ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸೆಬಿ ಈ ಕ್ರಮ ಕೈಗೊಂಡಿದೆ.

ಕಾರ್ವಿಯ ನೋಂದಣಿ ರದ್ದುಪಡಿಸಿರುವುದರ ಹೊರತಾಗಿಯೂ, ಸ್ಟಾಕ್‌ ಬ್ರೋಕರ್‌ ಆಗಿ ಅದು ಸೆಬಿಗೆ ನೀಡಬೇಕಿರುವ ಶುಲ್ಕ ಮತ್ತು ಬಾಕಿಗಳನ್ನು ತೀರಿಸಬೇಕು ಎಂದು ಸಂಸ್ಥೆಯ ಸದಸ್ಯ ಅಶ್ವಿನಿ ಭಾಟಿಯಾ ಹೇಳಿದ್ದಾರೆ.

ಷೇರು ವಹಿವಾಟಿನಲ್ಲಿ ಸ್ಟಾಕ್‌ ಬ್ರೋಕರ್‌ ನಿರ್ಣಾಯಕ ಪಾತ್ರ ವಹಿಸುತ್ತಾರೆ. ರಿಟೇಲ್‌ ಹೂಡಿಕೆದಾರರಿಗೆ ಮತ್ತು ಮಾರುಕಟ್ಟೆ ನಡುವೆ ಮಧ್ಯವರ್ತಿಯಾಗಿ ಸ್ಟಾಕ್‌ ಬ್ರೋಕರ್‌ ಕಾರ್ಯ ನಿರ್ವಹಿಸುತ್ತಾರೆ. ಆದ್ದರಿಂದ ಉನ್ನತ ದರ್ಜೆಯ ಸಮಗ್ರತೆ, ಮುಕ್ತ ಮತ್ತು ನ್ಯಾಯಸಮ್ಮತ ವಹಿವಾಟು ನಡೆಸುವುದು ದೊಡ್ಡ ಜವಾಬ್ದಾರಿ ಆಗಿರುತ್ತದೆ. ಆ ಮೂಲಕ ಹೂಡಿಕೆದಾರರ ವಿಶ್ವಾಸವನ್ನು ಗಳಿಸಬೇಕಾಗುತ್ತದೆ. ಕಾರ್ವಿ ಬ್ರೋಕಿಂಗ್‌ ಅನ್ನು ಡಿಫಾಲ್ಟರ್‌ (defaulter) ಎಂದು ಕಳೆದ ವರ್ಷ ನವೆಂಬರ್‌ನಲ್ಲಿ ಮಾರುಕಟ್ಟೆ ನಿಯಂತ್ರಕ ಸೆಬಿ ಘೋಷಿಸಿತ್ತು.

ಕಳೆದ ತಿಂಗಳು ಸೆಬಿ ಕಾರ್ವಿ ಸ್ಟಾಕ್‌ ಬ್ರೋಕಿಂಗ್‌ ಮತ್ತು ಅದರ ಪ್ರವರ್ತಕರಾದ ಕೊಮಂಡೂರ್‌ ಪಾರ್ಥಸಾರಥಿ ಅವರನ್ನು ಷೇರು ಮಾರುಕಟ್ಟೆಯಿಂದ 7 ವರ್ಷಗಳ ಅವಧಿಗೆ ನಿಷೇಧಿಸಿತ್ತು. ಹಾಗೂ ಗ್ರಾಹಕರ ಹಣವನ್ನು ದುರ್ಬಳಕೆ ಮಾಡಿದ್ದಕ್ಕಾಗಿ 21 ಕೋಟಿ ರೂ. ದಂಡವನ್ನು ವಿಧಿಸಿತ್ತು. ಪಾರ್ಥಸಾರಥಿ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗಿತ್ತು.

ಕಾರ್ವಿ ಸ್ಟಾಕ್ ಬ್ರೋಕಿಂಗ್‌ನಲ್ಲಿ ಗ್ರಾಹಕರಿಂದ‌ ಸಂಗ್ರಹಿಸಿದ್ದ ನಿಧಿಯನ್ನು ಸಮೂಹದ ಇತರ ಕಂಪನಿಗಳಾದ ಕಾರ್ವಿ ರಿಯಾಲ್ಟಿ (ಇಂಡಿಯಾ) ಲಿಮಿಟೆಡ್‌, ಕಾರ್ವಿ ಕ್ಯಾಪಿಟಲ್‌ ಲಿಮಿಟೆಡ್‌ಗೆ ಅಕ್ರಮವಾಗಿ ವರ್ಗಾಯಿಸಲಾಗಿತ್ತು. ಇದನ್ನು ಸೆಬಿ ತನ್ನ ಅಂತಿಮ ಆದೇಶದಲ್ಲಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಕಾರ್ವಿ ರಿಯಾಲ್ಟಿ ಮತ್ತು ಕಾರ್ವಿ ಕ್ಯಾಪಿಟಲ್‌ಗೆ 1,443 ಕೋಟಿ ರೂ.ಗಳನ್ನು ಕಾರ್ವಿ ಸ್ಟಾಕ್‌ ಬ್ರೋಕಿಂಗ್‌ಗೆ ಮೂರು ತಿಂಗಳಿನ ಒಳಗೆ ಮರಳಿಸುವಂತೆ ಸೆಬಿ ಸೂಚಿಸಿತ್ತು. ಹಾಗೂ ಇದಕ್ಕೆ ತಪ್ಪಿದರೆ ಹಣವನ್ನು ವಸೂಲು ಮಾಡಲು ಎರಡೂ ಕಂಪನಿಗಳ ಆಸ್ತಿಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿ ಸೆಬಿ ಹೇಳಿತ್ತು. 2019ರಲ್ಲಿ ಕಾರ್ವಿ ಬ್ರೋಕಿಂಗ್‌ ಹಗರಣ ಬಯಲಾಗಿತ್ತು.

ಕಾರ್ವಿ ಸ್ಟಾಕ್‌ ಬ್ರೋಕಿಂಗ್‌ ಗ್ರೂಪ್‌ ಹೈದರಾಬಾದ್‌ ಮೂಲದ ಸ್ಟಾಕ್‌ ಬ್ರೋಕರೇಜ್‌ ಕಂಪನಿ. 1983ರಲ್ಲಿ ಹೈದರಾಬಾದಿನಲ್ಲಿ ಇದನ್ನು ಸ್ಥಾಪಿಸಲಾಯಿತು. ಸಿ. ಪಾರ್ಥಸಾರಥಿ ಇದರ ಚೇರ್ಮನ್‌ ಮತ್ತು ಮ್ಯಾನೇಜಿಂಗ್‌ ಡೈರೆಕ್ಟರ್.‌ ಇದು ಬಹರೈನ್‌, ದುಬೈ, ಮಲೇಷ್ಯಾ, ಫಿಲಿಪ್ಪೀನ್ಸ್‌, ಅಮೆರಿಕದಲ್ಲೂ ಶಾಖೆಗಳನ್ನು ಹೊಂದಿತ್ತು. ಒಂದು ಕಾಲದಲ್ಲಿ ಕಾರ್ವಿ ಗ್ರೂಪ್‌ 30,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿತ್ತು. 400 ನಗರಗಳಲ್ಲಿ ಮತ್ತು ಪಟ್ಟಣಗಳಲ್ಲಿ 900 ಕಚೇರಿಗಳನ್ನು ಒಳಗೊಂಡಿತ್ತು. 1990ರ ಮಧ್ಯಭಾಗದಲ್ಲಿ ಕಾರ್ವಿ ಸ್ಟಾಕ್‌ ಬ್ರೋಕಿಂಗ್‌ ವಹಿವಾಟಿಗೆ ಇಳಿಯಿತು.

ತೆಲಂಗಾಣ ಸರ್ಕಾರ ಕಾರ್ವಿಯ ಚೇರ್ಮನ್ ಪಾರ್ಥಸಾರಥಿ ಅವರಿಗೆ 2017ರಲ್ಲಿ ವರ್ಷದ ಉದ್ಯಮಿ ಪ್ರಶಸ್ತಿ ನೀಡಿತ್ತು.‌ 2019ರ ನವೆಂಬರ್‌ನಲ್ಲಿ ಸೆಬಿಯು ಕಾರ್ವಿ ಸ್ಟಾಕ್‌ ಬ್ರೋಕಿಂಗ್‌ ಲಿಮಿಟೆಡ್‌ ಅನ್ನು ಷೇರು ಕೊಡು-ಕೊಳ್ಳುವಿಕೆ ವ್ಯವಹಾರಗಳಿಂದ ನಿಷೇಧಿಸಿತು.

ಇದನ್ನೂ ಓದಿ: Adani stocks : ಅದಾನಿ ಷೇರುಗಳಲ್ಲಿ ಹೂಡಿಕೆಯಿಂದ 3 ತಿಂಗಳಲ್ಲಿ 10,000 ಕೋಟಿ ರೂ. ಲಾಭ ಗಳಿಸಿದ ರಾಜೀವ್‌ ಜೈನ್

Exit mobile version