ನೀವು ಬ್ಯಾಂಕ್ ಉಳಿತಾಯ ಖಾತೆ, ಫಿಕ್ಸೆಡ್ ಡಿಪಾಸಿಟ್, ಮ್ಯೂಚುವಲ್ ಫಂಡ್, ಬಾಂಡ್ ಇತ್ಯಾದಿಗಳಲ್ಲಿ ಹಣ ಹೂಡಿಕೆ ಮಾಡಿರಬಹುದು. ಹಾಗೂ ಸಹಜವಾಗಿ ಆದಾಯವನ್ನು ನಿರೀಕ್ಷಿಸುತ್ತಿರಬಹುದು. ಹಾಗಾದರೆ ನಿಮ್ಮ ಇನ್ವೆಸ್ಟ್‌ಮೆಂಟ್ ಯಾವಾಗ ಇಮ್ಮಡಿಯಾಗುತ್ತದೆ ಎಂಬುದನ್ನು ಮೊದಲೇ ತಿಳಿದುಕೊಳ್ಳುವುದು ಹೇಗೆ? ಇದಕ್ಕೊಂದು ಸೂತ್ರವಿದೆ. ಅದನ್ನು 72ರ ನಿಯಮ ( The rule of 72 ) ಎನ್ನುತ್ತಾರೆ.
ಹಣಕಾಸು ವಿಚಾರಗಳಿಗೆ ಬಂದಾಗ, ಜೀವನದ ಗುರಿಗಳನ್ನು ಈಡೇರಿಸುವಲ್ಲಿ ಉಳಿತಾಯ ಮತ್ತು ಹೂಡಿಕೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಅದರಲ್ಲೂ ನಿಮ್ಮ ಹಣ ಯಾವಾಗ ಎರಡು ಪಟ್ಟು ಬೆಳೆಯುತ್ತದೆ ಎಂಬುದು ಮುಖ್ಯವಾಗುತ್ತದೆ. ಇದಕ್ಕೆ ಉತ್ತರ ಇಲ್ಲಿದೆ.
ನೀವು 72 ಸಂಖ್ಯೆಯನ್ನು ಯಾವುದೇ ಹಣಕಾಸು ಹೂಡಿಕೆಯಿಂದ ಪಡೆಯುವ ಬಡ್ಡಿ ದರದಿಂದ ಭಾಗಿಸಿದಾಗ ಸಿಗುವ ಉತ್ತರವೇ ಎಷ್ಟು ವರ್ಷಗಳಲ್ಲಿ ನಿಮ್ಮ ಇನ್ವೆಸ್ಟ್‌ಮೆಂಟ್ ಡಬಲ್ ಆಗುತ್ತದೆ ಎಂಬುದನ್ನು ಸೂಚಿಸುತ್ತದೆ. ಉದಾಹರಣೆಗೆ ನೀವು 6% ಲೆಕ್ಕದಲ್ಲಿ ಬಡ್ಡಿ ಪಡೆಯುತ್ತಿದ್ದೀರಿ ಎಂದು ಭಾವಿಸಿ. 72 ಅನ್ನು 6 ರಿಂದ ಭಾಗಿಸಿದಾಗ 12 ಸಿಗುತ್ತದೆ. ಅಂದರೆ 12 ವರ್ಷಗಳಲ್ಲಿ ನಿಮ್ಮ ಹೂಡಿಕೆ ಎರಡು ಪಟ್ಟು ಆಗುತ್ತದೆ. ಬ್ಯಾಂಕ್‌ಗಳ ಎಸ್‌ಬಿ ಖಾತೆಯಲ್ಲಿ 3% ಬಡ್ಡಿ ಸಿಗುತ್ತದೆ. ಅಲ್ಲಿಯೇ ಇಟ್ಟರೆ ನಿಮ್ಮ ಹಣ ಡಬಲ್ ಆಗಲು 24 ವರ್ಷ ಬೇಕಾಗುತ್ತದೆ! ನೀವು 1 ಲಕ್ಷ ರೂ.ಗಳನ್ನು ಫಿಕ್ಸೆಡ್ ಡಿಪಾಸಿಟ್‌ನಲ್ಲಿ ಹೂಡಿದ್ದೀರಿ, ಹಾಗೂ ಬಡ್ಡಿ ದರ 8 % ಇದ್ದರೆ 9 ವರ್ಷಗಳಲ್ಲಿ ನಿಮ್ಮ ಹಣ ಎರಡು ಲಕ್ಷ ರೂ. ಆಗುತ್ತದೆ.
ಇದನ್ನೂ ಓದಿ: Inflation : ಹಣದುಬ್ಬರ ಎಂದರೇನು? ಕಾರಣವೇನು?
ಹಣದುಬ್ಬರ ಅಥವಾ ಬೆಲೆ ಏರಿಕೆ ಪ್ರತಿ ವರ್ಷ 6% ಇದ್ದರೆ, ( 72/6=12) ಪ್ರತಿ 12 ವರ್ಷಕ್ಕೊಮ್ಮೆ ಬೆಲೆಗಳು ಇಮ್ಮಡಿಯಾಗುತ್ತದೆ. ಈಗ 100 ರೂ. ಬೆಲೆ ಬಾಳುವ ವಸ್ತುವಿನ ದರ 12 ವರ್ಷಕ್ಕೆ 200 ರೂ.ಗೆ ಏರುತ್ತದೆ. 72ರ ನಿಯಮ ನಿಖರವಾಗಿ ಇರದಿದ್ದರೂ, ಅಂದಾಜು ಲೆಕ್ಕವಾಗಿರುತ್ತದೆ. ಒಂದು ವೇಳೆ ನಿಮ್ಮ ಹಣ ಯಾವಾಗ ಮೂರು ಪಟ್ಟು ಹೆಚ್ಚುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕೆ? ಹಾಗಿದ್ದರೆ 114 ಅನ್ನು ಬಡ್ಡಿ ದರದಿಂದ ಭಾಗಿಸಿ. ಉತ್ತರ ಸಿಗುತ್ತದೆ.
ನಿಮ್ಮ ನಿವೃತ್ತಿಯ ಬದುಕಿನ ಹಣಕಾಸು ಅಗತ್ಯಗಳನ್ನು ತಿಳಿದುಕೊಳ್ಳಲು ಈ ಸೂತ್ರ ಸಹಕಾರಿಯಾಗುತ್ತದೆ. ಹಣದುಬ್ಬರದ ಹೊರತಾಗಿಯೂ ಉಳಿತಾಯ ಎಷ್ಟು ಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ನಿಮ್ಮ ಹೂಡಿಕೆ ಮತ್ತು ಆಸ್ತಿಯ ಮೌಕ್ಯವು ಹಣದುಬ್ಬರವನ್ನೂ ಮೀರಿ ಬೆಳೆಯಬೇಕು. ಆಗ ನೀವು ನಿವೃತ್ತರಾದಾಗ ಕೂಡ ಖರ್ಚು ವೆಚ್ಚಗಳಿಗೆ ಬೇಕಾಗುವ ಹಣಕ್ಕೆ ಕೊರತೆ ಉಂಟಾಗುವುದಿಲ್ಲ.
ಹಣದುಬ್ಬರವು ನೀವು ಹೂಡಿಕೆಯೊಂದಿಗೆ ಉಳಿತಾಯ ಮಾಡಿದ ಹಣದ ಮೊತ್ತವನ್ನು ಕಡಿಮೆ ಮಾಡುವುದಿಲ್ಲ. ವಾಸ್ತವವಾಗಿ ಬಡ್ಡಿ ದರ ಸೇರುವುದರಿಂದ ಹಣದ ಮೊತ್ತ ಹೆಚ್ಚುತ್ತದೆ. ಆದರೆ ಹಣದುಬ್ಬರವು ಆ ಹಣದ ಖರೀದಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಹಣದುಬ್ಬರದ ಗತಿಯನ್ನು ನಿಖರವಾಗಿ ಗ್ರಹಿಸಲಾಗದು. ಆದ್ದರಿಂದ ಸದಾ ಹಣದುಬ್ಬರದ ಮಟ್ಟಕ್ಕಿಂತ ಹೆಚ್ಚು ಗಳಿಸುವುದು ನಿಮ್ಮ ಹೂಡಿಕೆಯಲ್ಲಿ ಅಗತ್ಯ. ಇಲ್ಲದಿದ್ದರೆ ಅಂಥ ಹೂಡಿಕೆ ಪ್ರಯೋಜನಕ್ಕೆ ಬರುವುದಿಲ್ಲ.
ಜನ ಜೀವನದ ವೆಚ್ಚ ಪ್ರತಿ ವರ್ಷವೂ ಹೆಚ್ಚುವುದರಿಂದ ನಿಮಗೆ ಈಗ ಸಿಗುವ ಹಣದಲ್ಲಿಯೇ ಭವಿಷ್ಯದ ದಿನಗಳಲ್ಲೂ ವಸ್ತುಗಳು ಹಾಗೂ ಸೇವೆಗಳನ್ನು ಪಡೆಯಲಾಗದು. ಬ್ಯಾಂಕ್‌ಗಳ ಫಿಕ್ಸೆಡ್ ಡಿಪಾಸಿಟ್‌ಗಳಲ್ಲಿ ಇಟ್ಟ ಹಣ ಕೂಡ ಹಣದುಬ್ಬರದ ಮಟ್ಟವನ್ನು ಬಹಶಃ ಮೀರದು. ಇದರ ಅರ್ಥ ಏನೆಂದರೆ ಸರಕು ಮತ್ತು ಸೇವೆಗಳು ದರಗಳು ನೀವು ಗಳಿಸುವ ಬಡ್ಡಿ ದರಕ್ಕಿಂತಲೂ ಹೆಚ್ಚು ಇರುತ್ತವೆ.
ಹಾಗಾದರೆ ಹಣದುಬ್ಬರವನ್ನು ಸೋಲಿಸುವುದು ಹೇಗೆ? ಇದಕ್ಕಾಗಿ ನೀವು ನಿಮ್ಮ ಹಣಕಾಸು ಪ್ಲಾನಿಂಗ್‌ನಲ್ಲಿ ಹಣದುಬ್ಬರವನ್ನು ಸೇರಿಸಬೇಕು. ನಿಮ್ಮ ಹೂಡಿಕೆಯನ್ನು ಕಂಫರ್ಟ್ ಝೋನ್‌ನಿಂದ ತೆಗೆದು ಒಂದಷ್ಟು ಭಾಗವನ್ನು ಷೇರು, ಮ್ಯೂಚುವಲ್ ಫಂಡ್ ಮತ್ತು ಇತರ ಸಾಧನಗಳಲ್ಲಿ ಹೂಡಿಕೆ ಮಾಡುವ ಮೂಲಕ ಹಣದುಬ್ಬರವನ್ನು ಸೋಲಿಸಬಹುದು.