ಬೆಂಗಳೂರು: ಭಾರತದಲ್ಲಿ ಟ್ವಿಟರ್‌ಗೆ ಪ್ರತಿಸ್ಪರ್ಧಿಯಾಗಿರುವ, ಬೆಂಗಳೂರು ಮೂಲದ ಸಾಮಾಜಿಕ ಜಾಲತಾಣ ಆ್ಯಪ್ ಕೂ (Koo layoffs) ಸಂಸ್ಥೆಯಲ್ಲಿ 30% ಹುದ್ದೆ ಕಡಿತವಾಗಿದೆ. ಒಂದು ಕಡೆ ನಷ್ಟ ಹಾಗೂ ಮತ್ತೊಂದು ಕಡೆ ಹೊಸ ಹೂಡಿಕೆ ಪಡೆಯುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ವೆಚ್ಚ ನಿಯಂತ್ರಣಕ್ಕಾಗಿ ಹುದ್ದೆ ಕಡಿತಕ್ಕೆ ಕೂ ಮುಂದಾಗಿದೆ.
ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಕೂ ಆ್ಯಪ್ ತನ್ನ 260 ಉದ್ಯೋಗಿಗಳನ್ನು ವಜಾಗೊಳಿಸಿದೆ. ಜಾಗತಿಕ ಕಾರ್ಪೊರೇಟ್ ವಲಯ ಈಗ ಬೆಳವಣಿಗೆ ಮತ್ತು ಬಿಸಿನೆಸ್‌ಗಿಂತ ದಕ್ಷತೆಗೆ ಆದ್ಯತೆ ನೀಡುತ್ತಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಟೈಗರ್ ಗ್ಲೋಬಲ್ ಸಂಸ್ಥೆಯು ಕೂ ಆ್ಯಪ್‌ನಲ್ಲಿ ಹೂಡಿಕೆ ಮಾಡಿದೆ.
ಈ ಹಿಂದೆ ಟ್ವಿಟರ್‌ಗೂ ಸರ್ಕಾರಕ್ಕೂ ಸಂಘರ್ಷ ಏರ್ಪಟ್ಟ ಸಂದರ್ಭದಲ್ಲಿ ಕೂ ಆ್ಯಪ್‌ಗೆ ಲಾಭವಾಗಿತ್ತು. ಅನೇಕ ಮಂದಿ ಕೂ ಆ್ಯಪ್‌ನಲ್ಲಿ ತಮ್ಮ ಕಂಟೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದರು. ಭಾರತದ್ದೇ ಜಾಲತಾಣ ಕೂಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಸರ್ಕಾರಿ ಅಧಿಕಾರಿಗಳು, ಕ್ರಿಕೆಟ್ ತಾರೆಯರು, ಬಾಲಿವುಡ್ ಸೆಲೆಬ್ರಿಟಿಗಳು ಕೂ ಅನ್ನು ಹಿಂಬಾಲಿಸಿದ್ದರು. ಟ್ವಿಟರ್‌ಗೆ ಸ್ಥಳೀಯ ಪರ್ಯಾಯವಾಗಿ ಕೂ ಹೊರಹೊಮ್ಮಿತ್ತು.
ಹೀಗಿದ್ದರೂ, ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಆಧರಿತ ಕಂಪನಿಗಳ ಬಿಕ್ಕಟ್ಟಿನ ಪರಿಣಾಮ, ಹೂಡಿಕೆ ಕುರಿತ ಚಟುವಟಿಕೆಗಳು ಇಳಿಕೆಯಾಗಿದೆ. ಸ್ಟಾರ್ಟಪ್‌ಗಳಿಗೆ ಹೂಡಿಕೆಯ ಪ್ರಮಾಣ ತಗ್ಗಿದೆ.
ಕೂ ಆ್ಯಪ್ 6 ಕೋಟಿಗೂ ಹೆಚ್ಚು ಡೌನ್‌ಲೋಡ್ ಆಗಿದ್ದು, ಉತ್ತಮ ಬಂಡವಾಳವನ್ನು ಹೊಂದಿದೆ. ಬಿಡುಗಡೆಯಾದ ಮೂರೇ ವರ್ಷದಲ್ಲಿ 6 ಕೋಟಿ ಡೌನ್‌ಲೋಡ್ ಗಳಿಸಿತ್ತು. ಕಳೆದ ಜನವರಿಯಲ್ಲಿ ಕಂಪನಿ 1 ಕೋಟಿ ಡಾಲರ್ (82 ಕೋಟಿ ರೂ.) ಎಂದು ಸಂದರ್ಶನವೊಂದರಲ್ಲಿ ಸಹ ಸಂಸ್ಥಾಪಕ ಮಾಯಾಂಕ್ ಬಿಡಾವಾಟ್ಕಾ ಹೇಳಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಕೂ ಕಂಪನಿಯು 40 ಮಂದಿಯನ್ನು ವಜಾಗೊಳಿಸಿತ್ತು.