ನವ ದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶುಕ್ರವಾರ ಕಂಪನಿ ತನ್ನ ಆಡಳಿತ ಮಂಡಳಿಗೆ ಸ್ವತಂತ್ರ ನಿರ್ದೇಶಕರಾಗಿ ಅನುಭವಿ ಬ್ಯಾಂಕರ್ ಆದ ಕೆ.ವಿ. ಕಾಮತ್ ಅವರನ್ನು ನೇಮಕ ಮಾಡಿದೆ. 74 ವರ್ಷದ ಕಾಮತ್ ಅವರನ್ನು (K V Kamath) ಐದು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ ಎಂದು ಸಂಸ್ಥೆಯು ಷೇರು ವಿನಿಮಯ ಕೇಂದ್ರದಲ್ಲಿ ತಿಳಿಸಿದೆ.
ಕಾಮತ್ ಅವರು ರಿಲಯನ್ಸ್ ಸಮೂಹದ ಹಣಕಾಸು ಸೇವೆಗಳ ಸಂಸ್ಥೆಯಾಗಿರುವ ರಿಲಯನ್ಸ್ ಸ್ಟ್ರಾಟೆಜಿಕ್ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್ (RSIL) ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈ ಸಂಸ್ಥೆಯನ್ನು ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಜೆಎಫ್ಎಸ್ಎಲ್) ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂದು ಸಮೂಹವು ತಿಳಿಸಿದೆ. ಐಐಎಂ ಅಹಮದಾಬಾದ್ ಪದವೀಧರರಾದ ಕುಂದಾಪುರ ವಾಮನ ಕಾಮತ್ (ಕೆ.ವಿ. ಕಾಮತ್) ಹಿರಿಯ ಬ್ಯಾಂಕರ್ ಆಗಿದ್ದು, ಅವರು 1971ರಲ್ಲಿ ಐಸಿಐಸಿಐನಲ್ಲಿ ವೃತ್ತಿಜೀವನ ಪ್ರಾರಂಭಿಸಿದರು.
1988ರಲ್ಲಿ ಅವರು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB)ಗೆ ತೆರಳಿದರು. 1996ರಲ್ಲಿ ಐಸಿಐಸಿಐಗೆ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆದರು. 2015ರ ವರೆಗೆ ಐಸಿಐಸಿಐ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಐಸಿಐಸಿಐನಲ್ಲಿ ತಮ್ಮ ಅವಧಿ ಮುಗಿಸಿದ ನಂತರದಲ್ಲಿ ಕಾಮತ್ ಅವರು ಬ್ರಿಕ್ಸ್ ದೇಶಗಳ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ನ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು.