ವಾಷಿಂಗ್ಟನ್: ಅಮೆರಿಕ ಮೂಲದ ಬಹುರಾಷ್ಟ್ರೀಯ ಸರಣಿ ಕಾಫಿ ಹೌಸ್ ಸ್ಟಾರ್‌ಬಕ್ಸ್‌ನ (Starbucks) ನೂತನ ಸಿಇಒ ಆಗಿ ಲಕ್ಷ್ಮಣ್ ನರಸಿಂಹನ್ ನೇಮಕವಾಗಿದ್ದಾರೆ. ಇದರೊಂದಿಗೆ ವಿಶ್ವದ ಅತಿ ದೊಡ್ಡ ಕಾಫಿ ಕೆಫೆ ಸರಣಿಯ ಸಾರಥ್ಯ ಭಾರತೀಯ ಮೂಲದ ಸಿಇಒಗೆ ಸಿಕ್ಕಿದಂತಾಗಿದೆ. ಅವರಿಗೆ ವಾರ್ಷಿಕ 10.37 ಕೋಟಿ ರೂ. ವೇತನ, 12.6 ಕೋಟಿ ರೂ. ಬೋನಸ್ ಹಾಗೂ ೭೩ ಕೋಟಿ ರೂ. ಇನ್ಸೆಂಟಿವ್ ಪಡೆಯಲಿದ್ದಾರೆ.
ಡ್ಯೂರೆಕ್ಸ್ ಕಾಂಡೋಮ್‌ಗಳನ್ನು ಉತ್ಪಾದಿಸುವ ರೆಕಿಟ್ ಕಂಪನಿಯ ಸಿಇಒ ಆಗಿದ್ದ ನರಸಿಂಹನ್, ಆ ಕಂಪನಿಯಿಂದ ನಿರ್ಗಮಿಸುತ್ತಿದ್ದಾರೆ. ಅವರ ವಿದಾಯದ ಬೆನ್ನಲ್ಲೇ ರೆಕಿಟ್ ಷೇರು ದರ 4% ಇಳಿಕೆಯಾಗಿದೆ.
ಸ್ಟಾರ್ ಬಕ್ಸ್ ಅಮೆರಿಕದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದೆ. 200ಕ್ಕೂ ಹೆಚ್ಚು ಮಳಿಗೆಗಳಲ್ಲಿ ಯೂನಿಯನ್ ರಚನೆಯಾಗಿದ್ದು, ಕಾರ್ಮಿಕರು ಬೇಡಿಕೆ ಈಡೇರಿಸಲು ಒತ್ತಾಯಿಸುತ್ತಿದ್ದಾರೆ. ನರಸಿಂಹನ್ ಅವರು ಅಕ್ಟೋಬರ್‌ನಲ್ಲಿ ಸ್ಟಾರ್ ಬಕ್ಸ್‌ಗೆ ಸೇರ್ಪಡೆಯಾಗಲಿದ್ದಾರೆ. 55 ವರ್ಷದ ನರಸಿಂಹನ್ ಈ ಹಿಂದೆ ಪೆಪ್ಸಿಕೊ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.