ಅಹಮದಾಬಾದ್ : ಕಾರ್ಪೊರೇಟ್ ವಲಯದ ನಾಯಕರು, ಕಂಪನಿಗಳ ಸಿಇಒಗಳು ತಮ್ಮ ವೇತನ, ಭತ್ಯೆ ಇತ್ಯಾದಿಗೆ ಸಂಬಂಧಿಸಿ ಸ್ವಯಂ ನಿಯಂತ್ರಣ (self restraint) ವಹಿಸಿಕೊಳ್ಳಬೇಕು. ಜೀವನಶೈಲಿಯನ್ನು ಸರಳವಾಗಿಸಬೇಕು, ಏಕೆಂದರೆ ಭಾರತದಲ್ಲಿ ಬಡವರ ಸಂಖ್ಯೆ ಹೆಚ್ಚು, ಇಲ್ಲಿ ಬಂಡವಾಳಶಾಹಿ ವ್ಯವಸ್ಥೆಯನ್ನು ಆಕರ್ಷಕವಾಗಿಸಬೇಕಾದ ಅಗತ್ಯ ಇದೆ ಎಂದು ಇನ್ಫೋಸಿಸ್‌ನ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ (NR Narayana Murthy) ಭಾನುವಾರ ತಿಳಿಸಿದ್ದಾರೆ.
ಅಹಮದಾಬಾದ್‌ನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ (IIMA) 58ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಪ್ರಾಮಾಣಿಕತೆ, ಪಾರದರ್ಶಕತೆ, ಉತ್ತರದಾಯಿತ್ವದೊಂದಿಗೆ ಕೆಲಸ ಮಾಡುವುದು ನಿಜವಾದ ಉತ್ತಮ ಆಡಳಿತ ವ್ಯವಸ್ಥೆಯಾಗಿದೆ. ಭಾರತದಂಥ ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚು. ಆದ್ದರಿಂದ ಬಂಡವಾಳ ಶಾಹಿಯನ್ನು ಅಥವಾ ಕ್ಯಾಪಿಟಲಿಸಂ ಅನ್ನು ಹೆಚ್ಚು ಆಕರ್ಷಕಗೊಳಿಸಬೇಕು, ಆದ್ದರಿಂದ ಕಾರ್ಪೊರೇಟ್ ನಾಯಕರು ತಮ್ಮ ಜೀವನಶೈಲಿಯನ್ನು ಸರಳವಾಗಿಸಬೇಕು, ಸಂಬಳದಲ್ಲಿ ಅತಿಯಾದ ಅಂತರ ಇಟ್ಟುಕೊಳ್ಳಬಾರದು ಎಂದು ಮೂರ್ತಿ ಸಲಹೆ ನೀಡಿದರು.
1990ರಲ್ಲಿ ಇನ್ಫೋಸಿಸ್ ಅನ್ನು ಕಟ್ಟುವ ಸಂದರ್ಭದಲ್ಲಿ ನನ್ನ ವೇತನದಲ್ಲಿ 1/10 ಪಾಲನ್ನು ಮಾತ್ರ ತೆಗೆದುಕೊಳ್ಳುತ್ತಿದ್ದೆ. ಉಳಿದ ಭಾಗವನ್ನು ಇತರ ಕಿರಿಯ ಸಹೋದ್ಯೋಗಿಗಳಿಗೆ ನೀಡುತ್ತಿದ್ದೆ. ಇದು ತಂಡದಲ್ಲಿ ಜವಾಬ್ದಾರಿಯ ಭಾವವನ್ನು ಪ್ರೇರೇಪಿಸುತ್ತಿತ್ತು ಎಂದು ಹೇಳಿದರು. ನನ್ನ ಜತೆಗೆ ನನಗಿಂತಲೂ ಬುದ್ಧಿವಂತರಾಗಿದ್ದ ಕಿರಿಯ ಸಹೋದ್ಯೋಗಿಗಳಿದ್ದರು. ಬಳಿಕ ಅದೇ ರೀತಿಯ ಜನ ಕೂಡಿಕೊಂಡರು. ಆದರೆ ನಮ್ರತೆಯಿಂದಾಗಿ ನನ್ನ ಕರಿಯರ್‌ನಲ್ಲಿ ಬೆಳೆಯುವಂತಾಯಿತು, ಯಾವತ್ತಿಗೂ ನಿಮ್ಮ ಪಾದ ನೆಲದಲ್ಲಿ ಇರಲಿ ಎಂದರು.
ಇನ್ಫೋಸಿಸ್ ನಿರ್ಮಿಸುತ್ತಿದ್ದ ವೇಳೆ ಬ್ಯುಸಿಯಾಗಿರುತ್ತಿದ್ದೆ, ತಾಯಿಯನ್ನೂ ಅವರ ಕೊನೆಯ ದಿನಗಳನ್ನು ಎಣಿಸುತ್ತಿದ್ದಾಗ ಕಂಪನಿಯನ್ನು ತೋರಿಸಲು ಕರೆ ತಂದಿದ್ದೆ. ಇದೊಂದು ಸಂಗತಿ ನನಗೆ ನೋವುಂಟು ಮಾಡಿದೆ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.
ಕಂಪನಿಯ ಮನಸ್ಥಿತಿ (mindset) ಅದು ಅಳವಡಿಸುವ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಆಧರಿಸಿರಬೇಕು. ಏಕೆಂದರೆ ಸಂಸ್ಕ್ರತಿಯು ಮಹತ್ತ್ವಾಕಾಂಕ್ಷೆಯ ಬುನಾದಿಯಾಗಿರುತ್ತದೆ. ಯಶಸ್ಸಿನ ಒಂದು ಭಾಗವು ಕಾರ್ಯಕ್ಷಮತೆ ಮತ್ತು ಮತ್ತೊಂದು ಭಾಗ ಅದೃಷ್ಟದಿಂದ ಇರುತ್ತದೆ. ಹೀಗಾಗಿ ವಿನಮ್ರರಾಗಿರುವುದು ಮುಖ್ಯ ಎಂದು ಮೂರ್ತಿ ವಿವರಿಸಿದರು.
ಅತ್ಯುನ್ನತ ಮಟ್ಟದಲ್ಲಿ ನಾಯಕತ್ವ ಸಂಪೂರ್ಣ ಏಕಾಂಗಿತನವನ್ನು ಹೊಂದಿರುತ್ತದೆ. ನಾನು ಈ ಹಂತವನ್ನು ಎದುರಿಸಿದ್ದೇನೆ ಎಂದೂ ನಾರಾಯಣ ಮೂರ್ತಿ ಮತ್ತೊಂದು ಕಾರ್ಯಕ್ರಮದಲ್ಲಿ ಹೇಳಿದರು. ಲೀಡರ್‌ಶಿಪ್ ಎಂದರೆ ಸರಿಯಾದ ವಿಚಾರಗಳನ್ನು ಅನುಷ್ಠಾನಕ್ಕೆ ತರುವುದಾಗಿದೆ. ನೂರಾರು, ಸಾವಿರಾರು ಮಂದಿಯಲ್ಲಿ ಆತ್ಮವಿಶ್ವಾಸವನ್ನು ತುಂಬುವುದಾಗಿದೆ. ಜನ ನಿಮ್ಮನ್ನು ಮಾರ್ಗದರ್ಶನ, ಸಲಹೆಗೆ ಎದುರು ನೋಡುತ್ತಿರುತ್ತಾರೆ. ಅವರಲ್ಲಿ ಆತ್ಮವಿಶ್ವಾಸ ತುಂಬುವುದು ನಾಯಕರ ಲಕ್ಷಣವಾಗಿದೆ ಎಂದು ವಿವರಿಸಿದರು.