Site icon Vistara News

Chandrayaan : ಚಂದ್ರಯಾನದಿಂದ ಹೂಡಿಕೆದಾರರು ಕಲಿಯಬೇಕಾದ ಪಾಠ!

Chandrayaan 3

Chandrayaan-3 would have crashed into a satellite, How Isro saved it?

ಚಂದ್ರಯಾನ- ಮೂರರ ಯಶಸ್ಸು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಹೆಚ್ಚುತ್ತಿರುವ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಅಷ್ಟು ಮಾತ್ರವಲ್ಲದೆ ಅಶ್ಚರ್ಯ ಹುಟ್ಟಿಸುವಷ್ಟು ಕಡಿಮೆ ಖರ್ಚಿನಲ್ಲಿ ಚಂದ್ರಯಾನವನ್ನು ಮಾಡಬಹುದು ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ. (Chandrayaan ) ಮಾತ್ರವಲ್ಲದೆ ಈ ಅಭೂತಪೂರ್ವ ಚಂದ್ರಯಾನವು ಪ್ರತಿಯೊಬ್ಬ ಹೂಡಿಕೆದಾರರು, ಜನ ಸಾಮಾನ್ಯರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಹಲವು ಮಹತ್ವದ ಹಣಕಾಸು ಪಾಠಗಳನ್ನೂ ಕಲಿಸಿಕೊಟ್ಟಿದೆ. ಸರಳ ಜೀವನ, ಉನ್ನತ ಚಿಂತನೆ ಮತ್ತು ಹಣಕಾಸು ಉಳಿತಾಯದ ಮಹತ್ವವನ್ನೂ ತಿಳಿಸಿದೆ.

ಭಾರತದ ಬಜೆಟ್‌ ಸ್ನೇಹಿ ಬಾಹ್ಯಾಕಾಶ ಯೋಜನೆಗಳಿಗೆ ಹಲವಾರು ದಶಕಗಳ ಸುದೀರ್ಘ ಇತಿಹಾಸ ಇದೆ. 2014ರಲ್ಲಿ ಭಾರತ, ಮಂಗಳಯಾನ ಸ್ಪೇಸ್‌ ಪ್ರಾಜೆಕ್ಟ್‌ ನಡೆಸಿದಾಗ ಪ್ರಧಾನಿ ನರೇಂದ್ರ ಮೋದಿಯವರು ಒಂದು ಮಾತು ಹೇಳಿದ್ರು. ಅಹಮದಾಬಾದ್‌ನಲ್ಲಿ ಆಟೊ ರಿಕ್ಷಾದಲ್ಲಿ ಒಂದು ಕಿಲೋ ಮೀಟರ್‌ ಹೋಗಬೇಕಿದ್ದರೆ 10 ರೂ. ಕೊಡಬೇಕಾಗುತ್ತದೆ. ಆದರೆ ಭಾರತ ಮಂಗಳ ಯಾನ ಯಾತ್ರೆಯನ್ನು ಪ್ರತಿ ಕಿ.ಮೀಗೆ 7 ರೂ.ಗಳ ಕಡಿಮೆ ಖರ್ಚಿನಲ್ಲಿ ಪೂರ್ಣಗೊಳಿಸಿರುವುದು ಅದ್ಭುತ ಅಂತ ಅವರು ಹೇಳಿದ್ರು. ಮತ್ತೊಂದು ಉದಾಹರಣೆಯನ್ನೂ ಅವರು ಕೊಟ್ಟಿದ್ದರು. ಮಂಗಳಯಾನ ಯಾತ್ರೆಗೆ 74 ದಶಲಕ್ಷ ಡಾಲರ್‌ ಖರ್ಚಾಗಿದೆ. ಇದು ಬಾಲಿವುಡ್‌ನ ಗ್ರಾವಿಟಿ ಸಿನಿಮಾ ನಿರ್ಮಾಣಕ್ಕೆ ತಗಲಿರುವ 100 ದಶಲಕ್ಷ ಡಾಲರ್‌ಗಿಂತ ಕಡಿಮೆ. ನಾಸಾದ ಮಂಗಳಯಾತ್ರೆಗೆ ಭಾರತದ ಮಂಗಳಯಾನಕ್ಕಿಂತ ಹತ್ತು ಪಟ್ಟು ಹೆಚ್ಚು ಖರ್ಚಾಗಿತ್ತು. ಆಗ ಭಾರತ ಮೊದಲ ಪ್ರಯತ್ನದಲ್ಲಿಯೇ ಮಂಗಳ ಗ್ರಹದ ಕಕ್ಷೆಗೆ ತನ್ನ ಸ್ಪೇಸ್‌ ಕ್ರಾಫ್ಟ್ ಅಥವಾ ಬಾಹ್ಯಾಕಾಶ ನೌಕೆಯನ್ನು ಸೇರಿಸಿತ್ತು.

ಈಗ ಮತ್ತೊಮ್ಮೆ ಚಂದ್ರಯಾನ 3 ಕ್ಕೆ ತಗಲಿದ ಖರ್ಚು, ಬಾಲಿವುಡ್‌ ಸಿನಿಮಾಗಳಿಗೆ ಹೋಲಿಸಿದರೆ ಅಗ್ಗ ಎಂಬುದು ಹೈಲೈಟ್‌ ಆಗುತ್ತಿದೆ. ಉದಾಹರಣೆಗೆ ಚಂದ್ರಯಾನ 3 ಕ್ಕೆ 75 ದಶಲಕ್ಷ ಡಾಲರ್‌ ( 615 ಕೋಟಿ ರೂ.) ಖರ್ಚಾಗಿದ್ದರೆ, ಆದಿ ಪುರುಷ್‌ ಸಿನಿಮಾಕ್ಕೆ ಇದಕ್ಕಿಂತ ಸ್ವಲ್ಪ ಹೆಚ್ಚೇ ಖರ್ಚಾಗಿದೆ.

1963ರಲ್ಲಿ ಇಸ್ರೊ ಮೊದಲ ಬಾರಿಗೆ ತನ್ನ ರಾಕೆಟ್‌ ಅನ್ನು ಉಡಾವಣೆಗೊಳಿಸಿದ ಸಂದರ್ಭ ರಾಕೆಟ್‌ನ ಬಿಡಿ ಭಾಗಗಳನ್ನು ಸೈಕಲ್‌ ಮೇಲೆ ಇರಿಸಿ ವಿಜ್ಞಾನಿಗಳು ಸಾಗಿಸಿದ್ದರು. ಆ ಚಿತ್ರಗಳು ಈಗ ಮತ್ತೊಮ್ಮೆ ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿವೆ. ಶುರುವಾದಾಗಿನಿಂದ ಇಲ್ಲಿಯವರೆಗೂ ಇಸ್ರೊದ ಬಾಹ್ಯಾಕಾಶ ಯೋಜನೆಗಳು ಎಂದರೆ ಪ್ರಪಂಚದಲ್ಲಿಯೇ ಅತ್ಯಂತ ಅಗ್ಗ ಎಂದು ಹೆಸರುವಾಸಿಯಾಗಿವೆ. ಮ್ಯೂಚುವಲ್‌ ಫಂಡ್‌ ಹೂಡಿಕೆಯಲ್ಲೂ ಅಷ್ಟೇ, ನೀವು ನಿರ್ದಿಷ್ಟ ಗುರಿಯನ್ನು ಸ್ಪಷ್ಟವಾಗಿ ಇಟ್ಟುಕೊಂಡು ಅದಕ್ಕೆ ತಕ್ಕಂತೆ ನಿಯಮಿತವಾಗಿ ಸಿಪ್‌ ಮೂಲಕ ಹೂಡಿಕೆ ಮಾಡುತ್ತಾ ಬರಬೇಕು. ಆಗ ಅಂದುಕೊಂಡಷ್ಟು ಹಣವನ್ನು ಗಳಿಸಿ ಕೋಟ್ಯಧಿಪತಿಯಾಗಲೂ ಸಾಧ್ಯವಿದೆ.

ಅಭಿವೃದ್ಧಿ ಹೊಂದಿರುವ ದೇಶಗಳು ಮಾಡುವ ದುಬಾರಿ ಬಾಹ್ಯಾಕಾಶ ಯೋಜನೆಗಳ ಖರ್ಚಿಗೆ ಹೋಲಿಸಿದರೆ ಇಸ್ರೊದ ಯೋಜನೆಗಳು ಅತ್ಯಂತ ಅಗ್ಗ. ಆದರೂ ಅತ್ಯಂತ ಪರಿಣಾಮಕಾರಿ. ಭಾರತದ ಬಾಹ್ಯಾಕಾಶ ಯೋಜನೆಗಳ ಪಿತಾಮಹ, ಇಸ್ರೊದ ಸ್ಥಾಪಕ ವಿಕ್ರಮ್‌ ಸಾರಾಭಾಯಿ ಅವರು ಸರಳತೆಯ ಪ್ರತೀಕವಾಗಿದ್ದರು. ತಮ್ಮ ಮನೆಯ ಸಣ್ಣ ಔಟ್‌ ಹೌಸ್‌ನಲ್ಲಿಯೇ ಲ್ಯಾಬ್‌ ಅನ್ನು ನಡೆಸುತ್ತಿದ್ದರು.

ಇಸ್ರೊ ಅಧ್ಯಕ್ಷರಾಗಿದ್ದ ಡಾ. ಕೆ. ಶಿವನ್‌ ಭಾರತದ ಬಾಹ್ಯಾಕಾಶ ಯೋಜನೆಗಳ ಸ್ವರೂಪವನ್ನು ಹೀಗೆ ವಿವರಿಸಿದ್ದಾರೆ. ವ್ಯವಸ್ಥೆಯನ್ನು ಸರಳಗೊಳಿಸುವುದು, ಸಂಕೀರ್ಣ ದೊಡ್ಡ ಸಿಸ್ಟಮ್‌ ಅನ್ನು ಚಿಕ್ಕದಾಗಿಸುವುದು, ಗುಣಮಟ್ಟ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಉಳಿಸಿಕೊಳ್ಳುವುದು, ಕಡಿಮೆ ಖರ್ಚಿನಲ್ಲಿ ಹೆಚ್ಚು ರಿಸಲ್ಟ್‌ ತೆಗೆಯುವುದು ಇಸ್ರೊದ ವೀಶೇಷತೆ ಎಂದು ಅವರು ಹೇಳಿದ್ದರು. ಪ್ರತಿಯೊಂದು ರಾಕೆಟ್‌ ಅಥವಾ ಬಾಹ್ಯಾಕಾಶ ನೌಕೆ ಸಿದ್ಧಪಡಿಸುವ ಎಲ್ಲ ಹಂತಗಳಲ್ಲೂ ಹೇಗೆ ಅನಗತ್ಯ ಖರ್ಚುಗಳನ್ನು ಮಾಡದೆ ಇರಬಹುದು ಎಂದು ವಿಜ್ಞಾನಿಗಳು, ತಂತ್ರಜ್ಞರು ಆಲೋಚಿಸುತ್ತಾರೆ. ಅಮೆರಿಕದ ನಾಸಾ ಇರಬಹುದು, ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ಇರಬಹುದು, ಅಲ್ಲಿನ ಬಾಹ್ಯಾಕಾಶ ಯೋಜನೆಗಳು ಅಂದಾಜಿಗಿಂತ ಎಷ್ಟೋ ಪಟ್ಟು ಹೆಚ್ಚು ದಾಟುತ್ತಿವೆ. ಆದರೆ ಇಸ್ರೊದ ಕಥೆಯೇ ಬೇರೆ. ಭಾರತ ಕಡಿಮೆ ವೆಚ್ಚದಲ್ಲಿಯೇ ಬಾಹ್ಯಾಕಾಶ ರಂಗದಲ್ಲಿ ಮುಂಚೂಣಿಯಲ್ಲಿದೆ. ಹಾಗೂ ತನ್ನ ಪ್ರಾಬಲ್ಯ ಹೆಚ್ಚಿಸುವ ತಯಾರಿಯಲ್ಲಿದೆ.

ಅಮೆರಿಕ ತನ್ನ ಜಿಡಿಪಿಯಲ್ಲಿ 0.28% ಅನ್ನು ಬಾಹ್ಯಾಕಾಶ ಯಾತ್ರೆಗೆ ಮೀಸಲಿಟ್ಟರೆ, ರಷ್ಯಾ 0.15% ಖರ್ಚು ಮಾಡುತ್ತದೆ. ಆದರೆ ಭಾರತ 0.04% ಮಾತ್ರ ಖರ್ಚು ಮಾಡುತ್ತದೆ. ಅಮೆರಿಕ ಕೆಲವು ಸ್ಪೇಸ್‌ ಪ್ರೋಗ್ರಾಮ್‌ಗಳಲ್ಲಿ ಐದಾರು ಸಲ ಪರೀಕ್ಷೆ ಮಾಡುತ್ತಿದ್ದರೆ, ಇಸ್ರೊ ವಿಜ್ಞಾನಿಗಳು ಮೊದಲೇ ಚೆನ್ನಾಗಿ ಸಿದ್ಧತೆ ನಡೆಸಿ ಒಂದೇ ಸಲ ಪರೀಕ್ಷೆ ಕೈಗೊಂಡು ಯಶಸ್ವಿಯಾಗುತ್ತಿದ್ದರು.

1. ಮೊದಲನೆಯದಾಗಿ ನಾವು ಇಸ್ರೋದ ಚಂದ್ರಯಾನ ಯೋಜನೆಯಿಂದ ನಾವು ಕಲಿಯಬೇಕಾದ್ದೇನೆಂದರೆ, ಹಣಕಾಸು ವಿಚಾರದಲ್ಲೂ ಅನಗತ್ಯ ಖರ್ಚು ವೆಚ್ಚಗಳನ್ನು ಮಾಡದಿರುವ ಮೂಲಕ ಸಾಕಷ್ಟು ಹಣ ಉಳಿಸಬಹುದು ಎಂಬುದಾಗಿದೆ.

2. ಎರಡನೆಯದಾಗಿ ರಿಸ್ಕ್‌ ತೆಗೆದುಕೊಳ್ಳುವ ಇಸ್ರೊ ಸಾಮರ್ಥ್ಯದ ಬಗ್ಗೆ ಹೇಳಬೇಕು. ಭಾರತದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ರಕ್ಷಣೆ, ಕೃಷಿ ಇತ್ಯಾದಿ ವಲಯಗಳಿಗೆ ಹೆಚ್ಚು ಹಣ ಖರ್ಚು ಮಾಡಬೇಕಾಗುವುದರಿಂದ ಬಾಹ್ಯಾಕಾಶ ಯೋಜನೆಯಲ್ಲಿ ನೂರಾರು ಕೋಟಿ ರೂ. ಹೂಡುವುದು ಎಂದರೆ ಅತ್ಯಂತ ದೊಡ್ಡ ರಿಸ್ಕ್.‌ ಆದರೆ ಅಂಥ ರಿಸ್ಕ್‌ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದರೆ ಇವತ್ತು ಜಗತ್ತೇ ಆಶ್ಚರ್ಯಪಡುವಷ್ಟು ದೊಡ್ಡ ಸಾಧನೆ ಇಸ್ರೊಗೆ ಸಾಧ್ಯವಾಗುತ್ತಿರಲಿಲ್ಲ. ಹಣಕಾಸು ಹೂಡಿಕೆಯ ವಿಷಯದಲ್ಲೂ, ನಾವೀಗ ಬ್ಯಾಂಕ್‌ ಉಳಿತಾಯ ಖಾತೆ, ಆರ್‌ಡಿ, ಫಿಕ್ಸೆಡ್‌ ಡೆಪಾಸಿಟ್‌ನಂಥ ಸುರಕ್ಷಿತ ಸಾಧನಗಳಲ್ಲಿ ಮಾತ್ರ ಇನ್ವೆಸ್ಟ್‌ ಮಾಡಿದರೆ, ಹಣದುಬ್ಬರದ ಎದುರು ಸಂಪತ್ತು ಹೆಚ್ಚುವುದಿಲ್ಲ. ಬದಲಿಗೆ ಮ್ಯೂಚುವಲ್‌ ಫಂಡ್‌, ಷೇರು ಇತ್ಯಾದಿ ಸ್ವಲ್ಪ ಮಾರುಕಟ್ಟೆ ರಿಸ್ಕ್‌ ಇರುವ ಕಡೆಗಳಲ್ಲೂ ಹೂಡಿಕೆ ಮಾಡುವ ರಿಸ್ಕ್‌ ಅನ್ನು ತೆಗೆದುಕೊಳ್ಳಬೇಕಾಗುತ್ತದೆ.

3. ಮೂರನೆಯದಾಗಿ ಇಸ್ರೊದಲ್ಲಿ ಹಗಲಿರುಳೆನ್ನದೆ ದುಡಿಯುತ್ತಿರುವ ವಿಜ್ಞಾನಿಗಳು, ಎಂಜಿನಿಯರ್‌ಗಳು ಎಷ್ಟೊಂದು ಸಿಂಪಲ್ಲಾಗಿ ಇದ್ದಾರೆ ಎಂಬುದನ್ನು ನೀವು ಟಿವಿಗಳಲ್ಲಿ ನೋಡಿರಬಹುದು. ಇದು ಕೂಡ ಇಸ್ರೊದ ಯಶಸ್ಸಿನ ಸೀಕ್ರೇಟ್ಸ್‌ಗಳಲ್ಲೊಂದು. ಶ್ರೀಹರಿಕೋಟಾದ ಸತೀಶ್‌ ಧವನ್‌ ಸ್ಪೇಸ್‌ ಸೆಂಟರ್‌ನಲ್ಲಿ ಇಸ್ರೊ ವಿಜ್ಞಾನಿಗಳನ್ನು ಕಂಡವರು ಅವರ ಸರಳ ನಡೆ-ನುಡಿಗಳನ್ನು ಕಾಣಬಹುದು. ವಿಕ್ರಮ್‌ ಸಾರಾಭಾಯ್‌ ಅವರು ಅಂಥ ಸಂಸ್ಕೃತಿಯನ್ನು ಬೆಳೆಸಿದ್ದರು. ಪ್ರತಿಯೊಬ್ಬ ವಿಜ್ಞಾನಿಯ ಅಂತಿಮ ಗುರಿ ಪ್ರಾಜೆಕ್ಟ್‌ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು.

4. ನಾಲ್ಕನೆಯದಾಗಿ ಹಣವೇ ಮುಖ್ಯವಲ್ಲ, ನೀವು ಶ್ರದ್ಧೆ, ಬುದ್ಧಿವಂತಿಕೆ ಮೈಗೂಡಿಸಿಕೊಂಡಿದ್ದರೆ, ಪ್ರಾಮಾಣಿಕವಾಗಿ ದುಡಿದರೆ ಬದುಕಿಗೆ ಅವಶ್ಯವಿರುವಷ್ಟು ಹಣ ತಾನಾಗಿಯೇ ಬರುತ್ತದೆ. ಇಸ್ರೋದಲ್ಲಿ ಸೇವೆ ಸಲ್ಲಿಸುವ ವಿಜ್ಞಾನಿಗಳು ಅಪಾರ ಪ್ರತಿಭಾವಂತರಾಗಿದ್ದರೂ, ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಇವರಿಗೆ ಸಿಗುತ್ತಿದ್ದ ವೇತನ ಕಡಿಮೆ. ಐದರಲ್ಲಿ ಒಂದರಷ್ಟು ಮಾತ್ರ. ಹೀಗಿದ್ದರೂ, ಅವರು ಯಾರೂ ಸಂಬಳದ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ಇಸ್ರೋ ಮೂಲಕ ಉಪಗ್ರಹಗಳ ಉಡಾವಣೆಗೆ 50-60% ಕಡಿಮೆ ಖರ್ಚು ಸಾಕು. ಈ ಎಲ್ಲ ಕಾರ್ಯತಂತ್ರಗಳ ಪರಿಣಾಮ ಇಸ್ರೋ ಕಳೆದ 9 ವರ್ಷಗಳಲ್ಲಿ 389 ವಿದೇಶಿ ಕೃತಕ ಉಪಗ್ರಹಗಳನ್ನು ಉಡಾವಣೆಗೊಳಿಸಿದೆ. 3,300 ಕೋಟಿ ರೂ. ಆದಾಯ ಗಳಿಸಿದೆ. ಇಡೀ ಚಂದ್ರಯಾನ-3 ಪ್ರಾಜೆಕ್ಟ್‌ಗೆ 615 ಕೋಟಿ ರೂ. ವೆಚ್ಚವಾಗಿದೆ. ಕಳೆದ ಕೆಲ ದಿನಗಳಲ್ಲಿ ಸ್ಪೇಸ್‌ ಸಂಬಂಧಿತ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 31,೦೦೦ ಕೋಟಿ ರೂ. ಏರಿಕೆಯಾಗಿದೆ. ಸೆಂಟುಮ್‌ ಎಲೆಕ್ಟ್ರಾನಿಕ್ಸ್‌, ಬಿಇಎಲ್‌, ಎಚ್‌ಎಎಲ್‌, ಎಲ್‌ &ಟಿ ಷೇರುಗಳು ಲಾಭ ಗಳಿಸಿವೆ.

5. ಐದನೆಯದಾಗಿ ಹೂಡಿಕೆದಾರರು ದೀರ್ಘಕಾಲೀನ ಅಥವಾ ಲಾಂಗ್‌ ಟರ್ಮ್‌ ಹೂಡಿಕೆ ಮಾಡಬೇಕು ಎಂಬುದನ್ನು ಚಂದ್ರಯಾನ ಕಲಿಸಿದೆ. ಇದು ಇಸ್ರೋದ ಮೂರನೇ ಚಂದ್ರಯಾನ. ಎರಡನೆಯ ಚಂದ್ರಯಾನ ಭಾಗಶಃ ವಿಫಲವಾಗಿತ್ತು. ಆದರೆ ಇಸ್ರೊ ಅಳುಕದೆ ಸಂಶೋಧನೆ ಮತ್ತು ಯೋಜನೆಯನ್ನು ಮುಂದುವರಿಸಿ ಯಶಸ್ವಿಯಾಗಿದೆ. ಹೂಡಿಕೆದಾರರು ಮಾರುಕಟ್ಟೆಯ ಏರಿಳಿತಗಳಿಗೆ ವಿಚಲಿತರಾಗದೆ ಹೂಡಿಕೆ ಮಾಡಬೇಕಾಗುತ್ತದೆ.

6. ಆರನೆಯದಾಗಿ ಸೋಲಿನಿಂದ ಹೆದರಬೇಕಿಲ್ಲ, ಅದರಿಂದಲೂ ಕಲಿಯಬಹುದು ಎಂಬುದನ್ನು ಇಸ್ರೊ ಸಂದ್ರಯಾನ ಹೂಡಿಕೆದಾರರಿಕೆ ಕಲಿಸಿದೆ. ಎರಡನೇ ಚಂದ್ರಯಾನದ ಆರ್ಬಿಟ್‌ ಡೇಟಾ ಮೂರನೇ ಚಂದ್ರಯಾನಕ್ಕೆ ಸಹಕಾರಿಯಾಗಿತ್ತು.

7. ಏಳನೆಯದಾಗಿ ನಿವೃತ್ತಿಯ ವೇಳೆಗೆ ಸಾಫ್ಟ್‌ ಲ್ಯಾಂಡಿಂಗ್‌ ಅಗತ್ಯ ಎಂಬುದನ್ನು ಚಂದ್ರಯಾನ ಕಲಿಸಿದೆ. ಯಾವುದೇ ಚಂದ್ರಯಾನದಲ್ಲಿ ಇಳಿಯುವ ವೇಳೆಗೆ ಅತ್ಯಂತ ಮುಂಜಾಗರೂಕತೆ ಮತ್ತು ತಾಳ್ಮೆ ಮುಖ್ಯ. ಇಲ್ಲದಿದ್ದರೆ ಅವಘಡ ಕಟ್ಟಿಟ್ಟ ಬುತ್ತಿ. ಹೂಡಿಕೆದಾರರು ಕೂಡ ನಿವೃತ್ತಿಯ ವೇಳೆಗೆ ಸುರಕ್ಷಿತ ಸಾಧನಗಳಲ್ಲಿ ಹೂಡಿಕೆ ಮಾಡುವುದು ಮುಖ್ಯ. ಆಗ ಈಕ್ವಿಟಿಗಳಲ್ಲಿ ರಿಸ್ಕಿ ಎನ್ನಿಸುವ ಹೂಡಿಕೆ ಮಾಡದಿರುವುದು ಉತ್ತಮ.

Exit mobile version