ಹೊಸದಿಲ್ಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಷೇರುಗಳನ್ನು ಹೂಡಿಕೆದಾರರಿಗೆ ಮೇ 12ರಂದು ಮಂಜೂರು ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಬಿಡ್ಡಿಂಗ್ನ ಕೊನೆಯ ದಿನವಾದ ಸೋಮವಾರ ಸುಮಾರು ಮೂರು ಪಟ್ಟು ಬಿಡ್ ಸಲ್ಲಿಕೆಯಾಗಿತ್ತು.
ಸರಕಾರ ಎಲ್ಐಸಿಯಲ್ಲಿನ ಶೇ.3.5 ಷೇರುಗಳನ್ನು ಮಾರಾಟ ಮಾಡುತ್ತಿದ್ದು, 20,557 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿ ಹೊಂದಿದೆ. ಬಿಡ್ ದರ ಶ್ರೇಣಿ 902-949 ರೂ.ಗಳಾಗಿತ್ತು. ಮೇ 17ರಂದು ಎಲ್ ಐಸಿ ಷೇರು ಬಿಎಸ್ಇ ಮತ್ತು ಎನ್ಎಸ್ಇನಲ್ಲಿ ನೋಂದಣಿಯಾಗಲಿದೆ ಎಂದು ಬಂಡವಾಳ ಹಿಂತೆಗೆತ ಖಾತೆಯ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ತಿಳಿಸಿದ್ದಾರೆ.
ಎಲ್ಐಸಿ ಐಪಿಒದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿರೀಕ್ಷಿತ ಮಟ್ಟದಲ್ಲಿ ಭಾಗವಹಿಸದಿರುವುದು ಏಕೆ ಎಂಬ ಪ್ರಶ್ನೆಗೆ ಅವರು, ಎಲ್ಐಸಿ ಐಪಿಒ ಆತ್ಮನಿರ್ಭರ ಭಾರತದ ಬಲವನ್ನು ಬಿಂಬಿಸಿದೆ ಎಂದರು.
ಎಲ್ಲ ಹೂಡಿಕೆದಾರರಂತೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೂ ಐಪಿಒದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿತ್ತು. ಅವರಲ್ಲಿ ಕೆಲವರು ಪಾಲ್ಗೊಂಡಿದ್ದರು ಎಂದರು.
ಅರ್ಹ ಸಾಂಸ್ಥಿಕ ಹೂಡಿಕೆದಾರರು (ಕ್ಯೂ ಐಬಿ) 2.83 ಪಟ್ಟು ಷೇರುಗಳಿಗೆ ಬಿಡ್ ಸಲ್ಲಿಸಿದ್ದರು. ರಿಟೇಲ್ ಹೂಡಿಕೆದಾರರಿಗೆ 6.9 ಕೋಟಿ ಷೇರುಗಳನ್ನು ಮೀಸಲಿಡಲಾಗಿತ್ತು. 13.77 ಕೋಟಿ ಷೇರುಗಳಿಗೆ ಬಿಡ್ ಸಲ್ಲಿಕೆಯಾಗಿತ್ತು.