ನವ ದೆಹಲಿ: ಅದಾನಿ ಸಮೂಹದ (Adani Group) ಕಂಪನಿಗಳಲ್ಲಿ ಹೂಡಿಕೆ ಮಾಡಿರುವುದರಿಂದ ತನಗೆ ಯಾವುದೇ ಅಪಾಯ ಇಲ್ಲ ಎಂದು ಸಾರ್ವಜನಿಕ ವಲಯದ ವಿಮೆ ಸಂಸ್ಥೆ ಎಲ್‌ಐಸಿ (LIC) ಸೋಮವಾರ ಸ್ಪಷ್ಟಪಡಿಸಿದೆ. ತನ್ನೆಲ್ಲ ಹೂಡಿಕೆಗಳ ಪೈಕಿ ಅದಾನಿ ಕಂಪನಿಗಳಲ್ಲಿ ಇರುವುದು ೧%ಕ್ಕಿಂತಲೂ ಕಡಿಮೆ (0.976%) ಎಂದು ಎಲ್‌ಐಸಿ ತಿಳಿಸಿದೆ.
ಅದಾನಿ ಸಮೂಹದ ಷೇರು ಮತ್ತು ಬಾಂಡ್‌ಗಳಲ್ಲಿ ಎಲ್‌ಐಸಿ ಇದುವರೆಗೆ 28,000 ಕೋಟಿ ರೂ. ಹೂಡಿಕೆ ಮಾಡಿದೆ. ಅದು ಈಗ 56,000 ಕೋಟಿ ರೂ.ಗೆ ಬೆಳೆದಿದೆ. ಹೀಗಾಗಿ ಕಳೆದ ವಾರದಿಂದ ಅದಾನಿ ಷೇರುಗಳ (Adani stocks) ಪತನದಿಂದ ಎಲ್‌ಐಸಿಯ ಲಾಭ ಕಡಿಮೆಯಾಗಿರಬಹುದು, ಆದರೆ ಹೂಡಿಕೆಯಿಂದ ನಷ್ಟವಾಗಿಲ್ಲ ಎಂದು ಸಂಸ್ಥೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್‌ಐಸಿಗೆ ಅದಾನಿ ಷೇರುಗಳಲ್ಲಿ ಹೂಡಿಕೆಯಿಂದ ನಷ್ಟ ಆಗಿಲ್ಲ:
ಕಳೆದ ಕೆಲ ವರ್ಷಗಳಿಂದೀಚೆಗೆ ಅದಾನಿ ಸಮೂಹದಲ್ಲಿ 28,000 ಕೋಟಿ ರೂ.ಗಳ ಷೇರು ಹೂಡಿಕೆಯನ್ನು ಎಲ್‌ಐಸಿ ಮಾಡಿದೆ. ಮಾರುಕಟ್ಟೆ ಸೂಚ್ಯಂಕಗಳು ಉತ್ತುಂಗದಲ್ಲಿದ್ದಾಗ ಇದರ ಮೌಲ್ಯ 88,000 ಕೋಟಿ ರೂ.ಗೆ ಏರಿತ್ತು. ಅದು ಈಗ 56,000 ಕೋಟಿ ರೂ.ಗೆ ತಗ್ಗಿದೆ. ಹೀಗಾಗಿ ಈಗಲೂ ಎಲ್‌ಐಸಿ ತನ್ನ ಬುಕ್ ವಾಲ್ಯೂ ಅಥವಾ ಹೂಡಿಕೆಯ ಮೊತ್ತಕ್ಕೆ ಹೋಲಿಸಿದರೆ ಲಾಭದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೂಡಿಕೆಗೆ ಸಂಬಂಧಿಸಿ ಕಟ್ಟುನಿಟ್ಟಾಗಿರುವ ನಿಯಮಗಳನ್ನು ಪಾಲಿಸುತ್ತಿರುವುದಾಗಿಯೂ ಎಲ್‌ಐಸಿ ತಿಳಿಸಿದೆ. ಅದಾನಿ ಗ್ರೂಪ್‌ನ ಬಾಂಡ್‌ಗಳಲ್ಲಿ ಎಲ್‌ಐಸಿ ಹೂಡಿದ್ದರೂ, ಅವುಗಳೆಲ್ಲವೂ AA ದರ್ಜೆಯದ್ದಾಗಿವೆ ಎಂದು ತಿಳಿಸಿದೆ.
ಅಮೆರಿಕದ ಹಿಂಡೆನ್‌ಬರ್ಗ್ ಕಂಪನಿಯು ಅದಾನಿ ಸಮೂಹದ ಸಂಸ್ಥೆಗಳಲ್ಲಿ ಅವ್ಯವಹಾರಗಳು ನಡೆದಿರುವ ಬಗ್ಗೆ ಸ್ಫೋಟಕ ವರದಿಯನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಎಲ್‌ಐಸಿ ಈ ಸ್ಪಷ್ಟೀಕರಣ ನೀಡಿದೆ. ಕಳೆದ 3 ದಿನಗಳಲ್ಲಿ ಅದಾನಿ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 5.2 ಲಕ್ಷ ಕೋಟಿ ರೂ. ಕರಗಿದೆ.