Site icon Vistara News

LIC: ಎಲ್‌ಐಸಿಗೆ ಬಿಗ್‌ ರಿಲೀಫ್‌; ಸಾರ್ವಜನಿಕರ ಷೇರು ಪಾಲು ಶೇ. 10ಕ್ಕೆ ಹೆಚ್ಚಿಸಲು 3 ವರ್ಷ ಹೆಚ್ಚುವರಿ ಕಾಲಾವಕಾಶ

LIC

LIC

ಮುಂಬೈ: ದೇಶದ ಅತಿದೊಡ್ಡ ಇನ್ಷೂರೆನ್ಸ್ ಸಂಸ್ಥೆ ಭಾರತೀಯ ಜೀವ ವಿಮಾನ ನಿಗಮ (LIC)ಕ್ಕೆ ಬಿಗ್‌ ರಿಲೀಫ್‌ ಸಿಕ್ಕಿದೆ. ಸಾರ್ವಜನಿಕರ ಷೇರು ಪಾಲನ್ನು ಶೇ. 10ಕ್ಕೆ ಹೆಚ್ಚಿಸಲು ಎಲ್​ಐಸಿಗೆ ಸೆಬಿ (Securities and Exchange Board of India) 3 ವರ್ಷ ಹೆಚ್ಚುವರಿ ಕಾಲಾವಕಾಶ ಕೊಟ್ಟಿದೆ. ಈ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಎಲ್ಐಸಿ ಷೇರುಗಳ ದರ ಎನ್ಎಸ್ಇಯಲ್ಲಿ ಏರಿಕೆ ಕಂಡಿವೆ. ಮಂಗಳವಾರದ 931 ರೂ.ಗೆ ಹೋಲಿಸಿದರೆ ಶೇಕಡಾ 5ರಷ್ಟು ಏರಿಕೆಯಾಗಿ ಪ್ರತಿ ಷೇರಿಗೆ 962 ರೂ.ಗೆ ತಲುಪಿದೆ.

ಸದ್ಯ ಎಲ್​ಐಸಿಯಲ್ಲಿ ಸರ್ಕಾರದ ಪಾಲು ಶೆ. 96.5ರಷ್ಟಿದ್ದರೆ, ಸಾರ್ವಜನಿಕರ ಷೇರುಪಾಲು ಶೇ. 3.5ರಷ್ಟಿದೆ. 1957ರ ಸೆಕ್ಯೂರಿಟೀಸ್ ಕಾಂಟ್ರಾಕ್ಟ್ಸ್ ನಿಯಮಗಳ ಪ್ರಕಾರ ಪಬ್ಲಿಕ್ ಷೇರ್‌ ​ಹೋಲ್ಡಿಂಗ್ ಅನ್ನು ಶೇ. 10ಕ್ಕೆ ಹೆಚ್ಚಿಸಬೇಕಿದೆ. ಲಿಸ್ಟ್ ಆದ ಎರಡು ವರ್ಷದೊಳಗೆ ಈ ಕ್ರಮ ಕೈಗೊಳ್ಳಬೇಕು. ಎಲ್​ಐಸಿ 2022ರ ಮೇ 17ರಂದು ಬಿಎಸ್​ಇ ಮತ್ತು ಎನ್​ಎಸ್​ಇಇಲ್ಲಿ ಲಿಸ್ಟ್ ಆಗಿತ್ತು. ಅದರಂತೆ 2024ರ ಮೇ 16ರೊಳಗೆ ಪಬ್ಲಿಕ್ ಷೇರ್‌ ​ಹೋಲ್ಡಿಂಗ್ ಶೇ. 10 ಆಗಬೇಕಿತ್ತು. ಆದರೆ ಕಾಲಾವಧಿ ಸಮೀಪ ಬಂದಿದ್ದೂ ಈ ಕೆಲಸ ಆಗಿರಲಿಲ್ಲ. ಇದೀಗ 2027ರ ಮೇ 16ರವರೆಗೂ ಎಲ್​ಐಸಿಗೆ ಕಾಲಾವಕಾಶ ಕೊಡಲಾಗಿದೆ.

ಸೆಬಿ ತನ್ನ ಪತ್ರದ ಮೂಲಕ ಶೇ. 10ರಷ್ಟು ಸಾರ್ವಜನಿಕ ಷೇರುಗಳನ್ನು ಸಾಧಿಸಲು 3 ವರ್ಷಗಳ ಹೆಚ್ಚುವರಿ ಸಮಯವನ್ನು ನೀಡುವ ನಿರ್ಧಾರವನ್ನು ಪ್ರಕಟಿಸಿದೆ ಎಂದು ಎಲ್‌ಐಸಿ ತಿಳಿಸಿದೆ. ಅಂದರೆ ಬಿಎಸ್​ಇ ಮತ್ತು ಎನ್​ಎಸ್​ಇಯಲ್ಲಿ ಲಿಸ್ಟ್ ಆದ ಬಳಿಕ 5 ವರ್ಷಗಳವರೆಗೆ ಕಾಲಾವಕಾಶ ಲಭಿಸಿದಂತಾಗಿದೆ. 2023ರ ನವೆಂಬರ್‌ನಿಂದ ಎಲ್‌ಐಸಿ ಷೇರಿಗೆ ಬೇಡಿಕೆ ಬಂದಿದೆ. 614 ರೂ. ಇದ್ದ ಅದರ ಬೆಲೆ ಇದೀಗ 977 ರೂ. ದಾಟಿದೆ. ಅಂದರೆ ಎರಡು ವರ್ಷದಲ್ಲಿ ಎಲ್​ಐಸಿ ಷೇರು ಬೆಲೆ ಶೇ 18ರಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಅದರ ಷೇರು ಬೆಲೆ ಗಣನೀಯವಾಗಿ ಹೆಚ್ಚಬಹುದು ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಗರಿಷ್ಠ ಪ್ರೀಮಿಯಂ ಸಂಗ್ರಹ

ಈ ಮಧ್ಯೆ ಸರ್ಕಾರಿ ಸ್ವಾಮ್ಯದ ಎಲ್‌ಐಸಿ ಏಪ್ರಿಲ್‌ನಲ್ಲಿ ಒಟ್ಟು 12,384 ಕೋಟಿ ರೂ. ಪ್ರೀಮಿಯಂ ಸಂಗ್ರಹಿಸಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಎಲ್‌ಐಸಿ 5,810 ಕೋಟಿ ರೂ. ಪ್ರೀಮಿಯಂ ಸಂಗ್ರಹಿಸಿತ್ತು. ಇದಕ್ಕೆ ಹೋಲಿಸಿದರೆ ಶೇ. 113ರಷ್ಟು ಏರಿಕೆ ದಾಖಲಿಸಿದೆ. ಈ ಪೈಕಿ ವೈಯಕ್ತಿಕ ವಿಭಾಗದಲ್ಲಿ 3,175 ಕೋಟಿ ರೂ. ಸಂಗ್ರಹವಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ. 25.17ರಷ್ಟು ಹೆಚ್ಚಳವಾಗಿದೆ. ಗ್ರೂಪ್‌ ಪ್ರೀಮಿಯಂ ವಿಭಾಗದಲ್ಲಿ ಶೇ. 182.16ರಷ್ಟು ಏರಿಕೆಯಾಗಿ ಒಟ್ಟು 9,141 ಕೋಟಿ ರೂ. ಸಂಗ್ರಹವಾಗಿದೆ. ವಾರ್ಷಿಕ ಗುಂಪು ಪ್ರೀಮಿಯಂ ವಿಭಾಗದಲ್ಲಿಯೂ ಶೇ. 100ರಷ್ಟು ವೃದ್ಧಿಸಿ 66 ಕೋಟಿ ರೂ. ಸಂಗ್ರಹವಾಗಿದೆ ಎಂದು ಕಂಪನಿಯ ಅಂಕಿ-ಅಂಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Oldest Billionaire: ಎಲ್‌ಐಸಿಯಲ್ಲಿ ಏಜೆಂಟ್ ಈಗ ಭಾರತದ ಹಿರಿಯ ಬಿಲಿಯನೇರ್

Exit mobile version