Site icon Vistara News

LIC Result : ಎಲ್‌ಐಸಿಗೆ 6,334 ಕೋಟಿ ರೂ. ತ್ರೈಮಾಸಿಕ ಲಾಭ, ಬಜೆಟ್‌ ತೆರಿಗೆ ಪ್ರಸ್ತಾಪ ಪ್ರಭಾವ ಬೀರಲ್ಲ ಎಂದ ಅಧ್ಯಕ್ಷ

LIC

ನವ ದೆಹಲಿ: ಭಾರತೀಯ ಜೀವ ವಿಮಾ ನಿಗಮ (Life Insurance Corporation) ಕಳೆದ ಅಕ್ಟೋಬರ್-ಡಿಸೆಂಬರ್‌ ಅವಧಿಯ ಹಣಕಾಸು ಫಲಿತಾಂಶವನ್ನು ಪ್ರಕಟಿಸಿದ್ದು, 6,334 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 2021-22ರ ಇದೇ ಅವಧಿಗೆ ಹೋಲಿಸಿದರೆ ಹಲವಾರು ಪಟ್ಟು ಹೆಚ್ಚಳವಾಗಿದೆ. ಆಗ 234 ಕೋಟಿ ರೂ. ಲಾಭವಾಗಿತ್ತು. (LIC Result ) ಹೀಗಿದ್ದರೂ, ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಗೆ ಹೋಲಿಸಿದರೆ ಗಣನೀಯ ಇಳಿಕೆಯಾಗಿದೆ. ಆಗ 15,952 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು.

ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕದಲ್ಲಿ ಭಾರತೀಯ ಜೀವ ವಿಮೆ ಸಂಸ್ಥೆಯ ಪ್ರೀಮಿಯಂ ಆದಾಯದಲ್ಲಿ 14.5% ಏರಿಕೆಯಾಗಿತ್ತು. 1.11 ಲಕ್ಷ ಕೋಟಿ ರೂ.ಗೆ ಏರಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 97,620 ಕೋಟಿ ರೂ. ಪ್ರೀಮಿಯಂ ಸಂಗ್ರಹವಾಗಿತ್ತು. ಡಿಸೆಂಬರ್‌ ಅಂತ್ಯಕ್ಕೆ ಹೊಸ ಪ್ರೀಮಿಯಂ ಬಿಸಿನೆಸ್‌ 5,478 ಕೋಟಿ ರೂ.ಗೆ ವೃದ್ಧಿಸಿತ್ತು. ಈ ತ್ರೈಮಾಸಿಕದಲ್ಲಿ ಸಂಸ್ಥೆಯ ಆಡಳಿತಾತ್ಮಕ ವೆಚ್ಚ 13,799 ಕೋಟಿ ರೂ.ಗೆ ಹೆಚ್ಚಳವಾಗಿತ್ತು.

ಬಜೆಟ್‌ ನಕಾರಾತ್ಮಕ ಪ್ರಭಾವ ಬೀರಲ್ಲ: ಎಲ್‌ಐಸಿ ಅಧ್ಯಕ್ಷ ಎಂಆರ್‌ ಕುಮಾರ್:

ಈ ಸಲದ ಬಜೆಟ್‌ ಪ್ರಸ್ತಾಪವು ಎಲ್‌ಐಸಿಯ ಬಿಸಿನೆಸ್‌ ಮೇಲೆ ನಕಾರಾತ್ಮಕ ಪ್ರಭಾವ ಬೀರಲಾರದು ಎಂದು ಅಧ್ಯಕ್ಷ ಎಂ.ಆರ್.ಕುಮಾರ್‌ ತಿಳಿಸಿದ್ದಾರೆ. ಕೇಂದ್ರ ಬಜೆಟ್‌ ಪ್ರಸ್ತಾಪದ ಪ್ರಕಾರ 5 ಲಕ್ಷ ರೂ.ಗಿಂತ ಹೆಚ್ಚಿನ ಪ್ರೀಮಿಯಂ ಹೊಂದಿರುವ ಪಾಲಿಸಿಗಳ ಮೇಲೆ ತೆರಿಗೆ ಅನ್ವಯವಾಗಲಿದೆ. ಆದರೆ ಎಲ್‌ಐಸಿಯು ಸಣ್ಣ ಮತ್ತು ಮಧ್ಯಮ ಗಾತ್ರದ ಪಾಲಿಸಿಗಳನ್ನು ಮಾರಾಟ ಮಾಡುತ್ತಿರುವುದರಿಂದ ಹಾಗೂ ದೊಡ್ಡ ಪಾಲಿಸಿಗಳು ಶೇ.1ಕ್ಕಿಂತ ಕಡಿಮೆ ಇರುವುದರಿಂದ ಬಜೆಟ್‌ ಪ್ರಸ್ತಾಪ ಪ್ರತಿಕೂಲ ಪ್ರಭಾವ ಬೀರದು ಎಂದು ಎಲ್‌ಐಸಿ ಅಧ್ಯಕ್ಷ ಎಂಆರ್‌ ಕುಮಾರ್‌ ತಿಳಿಸಿದ್ದಾರೆ.

Exit mobile version