ಮುಂಬಯಿ: ಭಾರತೀಯ ಜೀವ ವಿಮೆ ನಿಗಮದ ಷೇರು ದರ ಸೋಮವಾರ ಮಧ್ಯಂತರ ವಹಿವಾಟಿನಲ್ಲಿ ಶೇ.23ರಷ್ಟು ಕುಸಿದಿದೆ. ದಿನದ ವಹಿವಾಟು ಮುಕ್ತಾಯದ ವೇಳೆಗೆ ಎಲ್‌ಐಸಿ ಷೇರು ದರ 776ಕ್ಕೆ ಇಳಿಯಿತು.
ಎಲ್‌ಐಸಿ ಷೇರಿನ ಐಪಿಒ ದರ 949 ರೂ. ಆಗಿತ್ತು. ಅಂದರೆ ಸೋಮವಾರ ಐಪಿಒ ದರಕ್ಕಿಂತ 173 ರೂ. ಇಳಿಕೆಯಾಯಿತು. ಇದರ ಪರಿಣಾಮ ಎಲ್ ಐಸಿಯ ಬಂಡವಾಳ ಮಾರುಕಟ್ಟೆ ಮೌಲ್ಯ 4.98 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ.
ಎಲ್‌ಐಸಿಯ ಷೇರುಗಳು ಮೇ 17ರಂದು ಷೇರು ವಿನಿಮಯ ಕೇಂದ್ರದಲ್ಲಿ ನೋಂದಣಿಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಕೇವಲ ನಾಲ್ಕು ಸಲ ಮಾತ್ರ ಷೇರು ಗಳಿಕೆ ದಾಖಲಿಸಿತ್ತು. ಎಲ್ ಐಸಿ ಕಳೆದ ತ್ರೈಮಾಸಿಕದಲ್ಲಿ 2,409 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದರೂ, 17% ಇಳಿಕೆಯಾಗಿತ್ತು. ಐಪಿಒದಲ್ಲಿ ಎಲ್ ಐಸಿ ಪಾಲಿಸಿದಾರರಿಗೆ ಪ್ರತಿ ಷೇರಿಗೆ 60 ರೂ. ಡಿಸ್ಕೌಂಟ್ ನೀಡಲಾಗಿತ್ತು.
ವಿಮೆ ವ್ಯವಹಾರವು ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಮಾರುಕಟ್ಟೆಯ ವಲನವಲನ ಇದರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎನ್ನುತ್ತಾರೆ ತಜ್ಞರು. ಎಲ್ ಐಸಿಯ ದುರ್ಬಲ ತ್ರೈಮಾಸಿಕ ಫಲಿತಾಂಶ ಕೂಡ ಷೇರು ದರ ಇಳಿಕೆಗೆ ಕಾರಣವಾಗಿರಬಹುದು ಎನ್ನಲಾಗಿದೆ.