ಮುಂಬಯಿ: ಮುಂಬಯಿ ಷೇರು ವಿನಿಮಯ ಕೇಂದ್ರದಲ್ಲಿ ಎಲ್‌ಐಸಿ ಷೇರು ದರ ಶುಕ್ರವಾರ ಮತ್ತಷ್ಟು ಕುಸಿಯಿತು. ಮಧ್ಯಂತರದಲ್ಲಿ 710 ರೂ.ಗಳ ದಾಖಲೆಯ ಮಟ್ಟಕ್ಕೆ ಇಳಿಯಿತು. ಇದರ ಪರಿಣಾಮ ಸಂಸ್ಥೆಯ ಮಾರುಕಟ್ಟೆ ಬಂಡವಾಳ ಮೌಲ್ಯ 4.52 ಲಕ್ಷ ಕೋಟಿ ರೂ.ಗೆ ಇಳಿಕೆಯಾಯಿತು.
ಎಲ್‌ಐಸಿಯ ಐಪಿಒದಲ್ಲಿ ಪಾಲಿಸಿದಾರರು, ಉದ್ಯೋಗಿಗಳು ಮತ್ತು ರಿಟೇಲ್ ಹೂಡಿಕೆದಾರರು ಭಾರಿ ಉತ್ಸಾಹದಿಂದ ಭಾಗವಹಿಸಿದ್ದರು. ಆದರೆ ನಿರೀಕ್ಷೆಗೂ ಮೀರಿ ಈಗ ಎಲ್‌ಐಸಿಯ ಷೇರುಗಳು ಕುಸಿದಿವೆ. ಹೀಗಿದ್ದರೂ, ದೀರ್ಘಕಾಲೀನ ದೃಷ್ಟಿಯಿಂದ ಮೌಲ್ಯ ನೀಡಬಹುದು ಎಂಬ ಭರವಸೆ ರಿಟೇಲ್ ಹೂಡಿಕೆದಾರರಲ್ಲಿದೆ ಎನ್ನುತ್ತಾರೆ ತಜ್ಞರು.
ಸತತ 9 ದಿನಗಳಿಂದ ಎಲ್‌ಐಸಿ ಷೇರು ದರ ಕುಸಿಯುತ್ತಲೇ ಇದ್ದು, ಹೂಡಿಕೆದಾರರಲ್ಲಿ ನಿರಾಸೆ ಮೂಡಿಸಿದೆ. ಎಲ್‌ಐಸಿಯ ಐಪಿಒ ದರ ಪ್ರತಿ ಷೇರಿಗೆ 949 ರೂ. ಆಗಿತ್ತು. ಅದಕ್ಕೆ ಹೋಲಿಸಿದರೆ ಈಗ 239 ರೂ. ಕುಸಿದಿದೆ. ಆಗ ಸಂಸ್ಥೆಯ ಮಾರುಕಟ್ಟೆ ಬಂಡವಾಳ ಮೌಲ್ಯ 6 ಲಕ್ಷ ಕೋಟಿ ರೂ. ಇತ್ತು. ಅಂದರೆ ಸುಮಾರು ನಾಲ್ಕನೇ ಒಂದರಷ್ಟು ಮೌಲ್ಯ ಕುಸಿತಕ್ಕೀಡಾಗಿದೆ. ಶೇ.22 ಇಳಿದಿದೆ.
ಕಳೆದ ಮೇ 17ರಂದು ಎಲ್‌ಐಸಿ ಷೇರು ನೋಂದಣಿಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಕೇವಲ 4 ಸಲ ಮಾತ್ರ ಷೇರು ಗಳಿಕೆ ದಾಖಲಿಸಿತ್ತು.
ಇದನ್ನೂ ಓದಿ:ಹೂಡಿಕೆದಾರರಿಗೆ ಎಲ್‌ಐಸಿ ಷೇರು ಕಲಿಸಿದ ಹೊಸ ಪಾಠ!