ನವ ದೆಹಲಿ: ಭಾರತೀಯ ಜೀವ ವಿಮಾ ನಿಗಮ (LIC) ಅದಾನಿ ಸಮೂಹದ ಕಂಪನಿಗಳಲ್ಲಿ ಹೂಡಿರುವ 30,127 ಕೋಟಿ ರೂ. ಹಣ ಇದೀಗ ನಷ್ಟದತ್ತ ಜಾರಿದೆ ಎಂದು ವರದಿಯಾಗಿದೆ. ಅದಾನಿ ಗ್ರೂಪ್‌ನ 10 ರಲ್ಲಿ 7 ಕಂಪನಿಗಳ ಷೇರುಗಳಲ್ಲಿ ಎಲ್‌ಐಸಿ 30,127 ಕೋಟಿ ರೂ. ಹೂಡಿಕೆ ಮಾಡಿದೆ. (Adani Stock) ಈ ಹೂಡಿಕೆ ನಷ್ಟದ ಕಡೆಗೆ ಜಾರಿದೆ. ಮಾರುಕಟ್ಟೆಯ ಅಂಕಿ ಅಂಶಗಳ ಪ್ರಕಾರ, ಅದಾನಿ ಕಂಪನಿಯ ಷೇರುಗಳಲ್ಲಿ ಎಲ್‌ಐಸಿಯ ಹೂಡಿಕೆಯು ಜನವರಿ 24ರಲ್ಲಿ 81,268 ಕೋಟಿ ರೂ. ಇತ್ತು. ಅದು ಈಗ 33,149 ಕೋಟಿ ರೂ.ಗೆ ಇಳಿದಿದೆ. ಹಿಂಡೆನ್ ಬರ್ಗ್ ವರದಿ ಪ್ರಕಟವಾದ ಬಳಿಕ ಷೇರು ದರ ಕುಸಿದಿತ್ತು.
ಅದಾನಿ ಷೇರುಗಳ ದರ ದಿನೇದಿನೆ ಇಳಿಯುತ್ತಿದ್ದು, ಶೀಘ್ರದಲ್ಲಿಯೇ ಎಲ್‌ಐಸಿಯ ಹೂಡಿಕೆ ನಷ್ಟಕ್ಕೆ ತಿರುಗುವ ಸಾಧ್ಯತೆ ಇದೆ. (notional loss) ಎಲ್‌ಐಸಿಯು 7 ಅದಾನಿ ಷೇರುಗಳಲ್ಲಿ ಹೂಡಿಕೆ ಮಾಡಿದೆ. ಎಸಿಸಿ, ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್‌ಮಿಶನ್ ಮತ್ತು ಅಂಬುಜಾ ಸಿಮೆಂಟ್ಸ್ ಷೇರುಗಳಲ್ಲಿ ಎಲ್‌ಐಸಿ ಹೂಡಿಕೆ ಮಾಡಿದೆ.
ಎಲ್‌ಐಸಿ 2022ರ ಸೆಪ್ಟೆಂಬರ್ 30ರ ವೇಳೆಗೆ ಒಟ್ಟು 41.66 ಲಕ್ಷ ಕೋಟಿ ರೂ. ಹಣಕಾಸು ಆಸ್ತಿಯನ್ನು ನಿರ್ವಹಿಸುತ್ತಿದೆ. ಇದನ್ನು ಪರಿಗಣಿಸಿದರೆ, ಅದಾನಿ ಷೇರುಗಳಲ್ಲಿ ಎಲ್‌ಐಸಿಯ ಹೂಡಿಕೆ 1%ಕ್ಕೂ ಕಡಿಮೆ.