ಕ್ಯಾಲಿಫೋರ್ನಿಯಾ : ಮೈಕ್ರೊಸಾಫ್ಟ್ ಮಾಲಿಕತ್ವದ ಲಿಂಕ್ಡ್ ಇನ್‌ನಲ್ಲಿ 700 ಉದ್ಯೋಗ ಕಡಿತವಾಗಿದೆ. (LinkedIn layoffs) ಜತೆಗೆ ಚೀನಾದಲ್ಲಿ ತನ್ನ ಜಾಬ್ ಆ್ಯಪ್ ಸೇವೆಯನ್ನು ರದ್ದುಪಡಿಸಿದೆ. ಲಿಂಕ್ಡ್ ಇನ್ ಒಟ್ಟು 716 ಹುದ್ದೆಗಳನ್ನು ಕಡಿತಗೊಳಿಸುತ್ತಿದೆ. ಲಿಂಕ್ಡ್ ಇನ್ ಒಟ್ಟು 20,000 ಉದ್ಯೋಗಿಗಳನ್ನು ಒಳಗೊಂಡಿದೆ. ಕಂಪನಿಯು ಕಳೆದ ವರ್ಷ ಪ್ರತಿ ತ್ರೈಮಾಸಿಕದಲ್ಲೂ ತನ್ನ ಆದಾಯವನ್ನು ಹೆಚ್ಚಿಸಿಕೊಂಡಿತ್ತು.
ಜಾಗತಿಕ ಆರ್ಥಿಕ ಮಂದಗತಿಯ ಹಿನ್ನೆಲೆಯಲ್ಲಿ ತಂತ್ರಜ್ಞಾನ ದಿಗ್ಗಜ ಕಂಪನಿಗಳು ಸಾಮೂಹಿಕ ಉದ್ಯೋಗ ಕಡಿತವನ್ನು ಕೈಗೊಂಡಿವೆ. ಲಕ್ಷಾಂತರ ಮಂದಿ ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ. ಜಾಬ್ ಕಟ್ ಮಾಡಿರುವ ಕಂಪನಿಗಳ ಸಾಲಿಗೆ ಇದೀಗ ಲಿಂಕ್ಡ್ ಇನ್ ಸೇರ್ಪಡೆಯಾದಂತಾಗಿದೆ.
ಸಾಮೂಹಿಕ ಉದ್ಯೋಗ ಕಡಿತದ ಬಗ್ಗೆ ಲಿಂಕ್ಡ್ ಇನ್‌ನ ಸಿಇಒ ರೆಯಾನ್ ರೋಸಲನ್‌ಸ್ಕೈ ಉದ್ಯೋಗಿಗಳಿಗೆ ಇ-ಮೇಲ್ ಕಳಿಸಿದ್ದಾರೆ. ನಮ್ಮ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಶನ್ (Global Business Organization) ಮತ್ತು ಚೀನಾ ಘಟಕದ ಕಾರ್ಯತಂತ್ರಗಳನ್ನು ಬದಲಿಸುತ್ತಿದ್ದೇವೆ. ಇದರ ಪರಿಣಾಮ 716 ಉದ್ಯೋಗಗಳ ಕಡಿತ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಸೇಲ್ಸ್, ಕಾರ್ಯಾಚರಣೆ, ಸಪೋರ್ಟ್ ಟೀಮ್‌ಗಳಲ್ಲಿ ಬದಲಾವಣೆ ತರಲಾಗುತ್ತಿದೆ. ಕೆಲವು ಸ್ತರಗಳನ್ನು ತೆರವುಗೊಳಿಸಲಾಗುತ್ತಿದೆ. ಇದರ ಪರಿಣಾಮ ತ್ವರಿತ ನಿರ್ಧಾರಗಳನ್ನು ಕೈಗೊಳ್ಳಬಹುದು. ಈ ಬದಲಾವಣೆಗಳ ಬಳಿಕ 250 ಹೊಸ ಉದ್ಯೋಗಗಳು ಕೂಡ ಸೃಷ್ಟಿಯಾಗಲಿದೆ ಎಂದು ವಿವರಿಸಿದ್ದಾರೆ. ಚೀನಾದಲ್ಲಿ 2023ರ ಆಗಸ್ಟ್ 9ರಿಂದ ಸ್ಥಳೀಯ ಜಾಬ್ ಆ್ಯಪ್ ಸೇವೆಯನ್ನು ಕೂಡ ರದ್ದುಪಡಿಸಲಾಗುತ್ತಿದೆ.