ಲಿಕ್ವಿಡ್ ಮ್ಯೂಚುವಲ್ ಫಂಡ್ ಎಂದರೆ, ಒಂದು ಡೆಟ್ ಫಂಡ್ ಆಗಿದ್ದು, ಕಮರ್ಶಿಯಲ್ ಪೇಪರ್, ಸರ್ಕಾರಿ ಸಾಲಪತ್ರ, ಟ್ರೆಶರಿ ಬಿಲ್ಸ್ ಇತ್ಯಾದಿಗಳಲ್ಲಿ ಹೂಡಿಕೆ ಮಾಡುತ್ತದೆ. ಇದರ ವಿಶೇಷತೆ ಏನೆಂದರೆ ಮೆಚ್ಯೂರಿಟಿ ಅವಧಿ ಗರಿಷ್ಠ 91 ದಿನಗಳಾಗಿವೆ. ಈ ಲಿಕ್ವಿಡ್ ಫಂಡ್‌ನ ನೆಟ್ ಅಸೆಟ್ ವಾಲ್ಯೂ ಅಥವಾ ಎನ್‌ಎವಿ ಲೆಕ್ಕಾಚಾರವನ್ನು 365 ದಿನಗಳಿಗೆ ಹಾಕಲಾಗುತ್ತದೆ. ಹೂಡಿಕೆದಾರರು ವಿತ್ ಡ್ರಾವಲ್ಸ್ ಪ್ರಕ್ರಿಯೆಯನ್ನು 24 ಗಂಟೆಗಳೊಳಗೆ ಮಾಡಬಹುದು. ಡೆಟ್ ಫಂಡ್ ಕೆಟಗರಿಯಲ್ಲಿ ಅತಿ ಕಡಿಮೆ ಬಡ್ಡಿ ದರದ ರಿಸ್ಕ್ ಇರುವ ಮ್ಯೂಚುವಲ್ ಫಂಡ್ ಇದಾಗಿದೆ.
ಲಿಕ್ವಿಡ್ ಮ್ಯೂಚುವಲ್ ಫಂಡ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಲಿಕ್ವಿಡ್ ಫಂಡ್‌ನ ಪ್ರಮುಖ ಉದ್ದೇಶ ಏನೆಂದರೆ ಹೂಡಿಕೆದಾರರಿಗೆ ಬಂಡವಾಳದ ರಕ್ಷಣೆ ಮತ್ತು ಲಿಕ್ವಿಡಿಟಿ. ಆದ್ದರಿಂದ ಫಂಡ್ ಮ್ಯಾನೇಜರ್‌ಗಳು ಹೈ ಕ್ವಾಲಿಟಿ ಡೆಟ್ ಸೆಕ್ಯುರಿಟಿಗಳನ್ನು ಆಯ್ಕೆ ಮಾಡುತ್ತಾರೆ. ಪೋರ್ಟ್ ಫೋಲಿಯೊದ ಸರಾಸರಿ ಮೆಚ್ಯೂರಿಟಿ ಅವಧಿ 91 ದಿನಗಳನ್ನು ಮೀರುವಂತಿಲ್ಲ. ಸಾಮಾನ್ಯ ಉಳಿತಾಯ ಖಾತೆಯ ಬಡ್ಡಿ ದರಕ್ಕೆ ಹೋಲಿಸಿದರೆ ಲಿಕ್ವಿಡ್ ಮ್ಯೂಚುವಲ್ ಫಂಡ್ ಹೆಚ್ಚಿನ ಆದಾಯ ನೀಡುತ್ತದೆ.
ನೀವು ಲಿಕ್ವಿಡ್ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬೇಕೆ? ನಿಮ್ಮಲ್ಲಿ ಒಳ್ಳೆಯ ಮೊತ್ತದ ಹಣವಿದ್ದು, ಅಲ್ಪ ಅವಧಿಗೆ ಕಡಿಮೆ ರಿಸ್ಕ್ ಇರುವ ಕಡೆ ಹೂಡಿಕೆ ಮಾಡಲು ಬಯಸುವುದಿದ್ದರೆ ಲಿಕ್ವಿಡ್ ಮ್ಯೂಚುವಲ್ ಫಂಡ್ ಸೂಕ್ತ. ಕೇವಲ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಸಿಗುವ ಅತ್ಯಲ್ಪ ಬಡ್ಡಿ ದರ ಪ್ರಯೋಜನಕ್ಕೆ ಬರುವುದಿಲ್ಲ. ಏಕೆಂದರೆ ಹಣದುಬ್ಬರದ ಎದುರು ನಿಮ್ಮ ಹೂಡಿಕೆಯ ಮೌಲ್ಯ ಕಡಿಮೆಯಾಗುತ್ತದೆ. ಹಲವಾರು ಹೂಡಿಕೆದಾರರು ಈಕ್ವಿಟಿ ಫಂಡ್‌ಗಳಲ್ಲಿ ಹೂಡುವ ಮುನ್ನ ಮೆಟ್ಟಿಲಾಗಿ ಲಿಕ್ವಿಡ್ ಮ್ಯೂಚುವಲ್ ಪಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಬಳಿಕ ಸಿಪ್ (ಎಸ್‌ಐಪಿ) ಮೂಲಕ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಇನ್ವೆಸ್ಟ್ ಮುಂದುವರಿಸುತ್ತಾರೆ. ಇದರಿಂದ ಹಂತ ಹಂತಗಳಲ್ಲಿ ಹೂಡಿಕೆ ಮಾಡಲು ಮತ್ತು ರುಪೀ ಕಾಸ್ಟ್ ಅವರೇಜಿಂಗ್‌ನ ಅನುಕೂಲ ಪಡೆಯಲು ಹಾದಿ ಸುಗಮವಾಗುತ್ತದೆ.
ಲಿಕ್ವಿಡ್ ಫಂಡ್‌ಗಳಲ್ಲಿ ಹೂಡಿಕೆ ಮುನ್ನ ಮರೆಯದಿರಿ: ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದಕ್ಕೆ ಮುನ್ನ ರಿಸ್ಕ್, ರಿಟರ್ನ್, ಎಕ್ಸ್‌ಪೆನ್ಸ್ ರೇಶಿಯೊ ಗಮನಿಸಿ.
ಲಿಕ್ವಿಡ್ ಫಂಡ್‌ಗಳಲ್ಲಿ ಮೆಚ್ಯೂರಿಟಿ ಅವಧಿ 91 ದಿನಗಳ ತನಕ ಇರುತ್ತದೆ. ಆದ್ದರಿಂದ ಮಾರುಕಟ್ಟೆಯ ತೀವ್ರ ಏರಿಳಿತದ ತಾಪ ಅಷ್ಟಾಗಿ ತಟ್ಟುವುದಿಲ್ಲ. ಎನ್‌ಎವಿ ಬಹುತೇಕ ಸ್ಥಿರವಾಗಿರುತ್ತದೆ. ಇದರಿಂದಾಗಿ ಲಿಕ್ವಿಡ್ ಫಂಡ್‌ಗಳು ಕಡಿಮೆ ರಿಸ್ಕ್ ಇರುವ ಫಂಡ್‌ಗಳಾಗಿರುತ್ತದೆ. ಲಿಕ್ವಿಡ್ ಫಂಡ್‌ಗಳು ಸರಾಸರಿ 7-9% ಆದಾಯವನ್ನು ನೀಡುತ್ತವೆ. ಬ್ಯಾಂಕ್ ಉಳಿತಾಯ ಖಾತೆಗೆ ಸಿಗುವ 4% ಬಡ್ಡಿಗಿಂತ ಉತ್ತಮ ರಿಟರ್ನ್ ಎನ್ನಿಸಿದೆ. ಎಲ್ಲ ಇತರ ಮ್ಯೂಚುವಲ್ ಫಂಡ್ ಸ್ಕೀಮ್‌ಗಳಂತೆ ಲಿಕ್ವಿಡ್ ಫಂಡ್‌ಗಳೂ ವಾರ್ಷಿಕ ಶುಲ್ಕವನ್ನು ಹೊಂದಿರುತ್ತದೆ. ಡೆಟ್ ಮ್ಯೂಚುವಲ್ ಪಂಡ್‌ಗಳಲ್ಲಿಯೇ ಕಡಿಮೆ ಎಕ್ಸ್‌ಪೆನ್ಸ್ ರೇಶಿಯೊ ಇರುವಂಥದ್ದು ಇದಾಗಿದೆ. ಹಲವಾರು ಹೂಡಿಕೆದಾರರು ಎಮರ್ಜೆನ್ಸಿ ಫಂಡ್ ಅನ್ನು ಸೃಷ್ಟಿಸಲು ಲಿಕ್ವಿಡ್ ಫಂಡ್‌ಗಳನ್ನು ಬಳಸುತ್ತಾರೆ. ಸೇವಿಂಗ್ಸ್ ಅಕೌಂಟ್ ಠೇವಣಿಗೆ ಹೋಲಿಸಿದರೆ ಉತ್ತಮ ರಿಟರ್ನ್ ನೀಡುತ್ತದೆ.