ಮುಂಬಯಿ: ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದಕ್ಕಿಂತಲೂ ದೊಡ್ಡ ಲಿಥಿಯಂ ನಿಕ್ಷೇಪವು ರಾಜಸ್ಥಾನದಲ್ಲಿ ಪತ್ತೆಯಾಗಿದೆ. (Lithium reserves) ಇದು ಭಾರತದ ಆಟೊಮೊಬೈಲ್ ಸೇರಿದಂತೆ ಇಂಡಸ್ಟ್ರಿಗಳಿಗೆ ಬೇಕಾಗುವ ಲಿಥಿಯಂ ಬೇಡಿಕೆಯ 80% ಪಾಲನ್ನು ತಾನೇ ಭರಿಸುವ ಸಾಮರ್ಥ್ಯವನ್ನು ಹೊಂದಿದೆ. ರಾಜಸ್ಥಾನದ ನಾಗ್ಪುರ ಬಳಿಯ ಡೆಗಾನಾ ಎಂಬಲ್ಲಿ ಈ ನಿಕ್ಷೇಪ ಪತ್ತೆಯಾಗಿದ್ದು, ಎಲೆಕ್ಟ್ರಿಕ್ ವಾಹನ ತಯಾರಿ, ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಚಾರ್ಜೆಬಲ್ ಬ್ಯಾಟರಿ ಉತ್ಪಾದನೆ ಸೇರಿದಂತೆ ಹಲವು ಇಂಡಸ್ಟ್ರಿಗಳಿಗೆ ನಿರ್ಣಾಯಕವಾಗಿರುವ ಲೋಹ ಇದಾಗಿದೆ.
ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ (Geological survey of India) ನಡೆಸಿರುವ ಸಮೀಕ್ಷೆ ಪ್ರಕಾರ, ರಾಜಸ್ಥಾನದಲ್ಲಿ ಈಗ ಪತ್ತೆಯಾಗಿರುವ ಲಿಥಿಯಂ ನಿಕ್ಷೇಪವು ದೇಶದ ಒಟ್ಟು ಲಿಥಿಯಂ ಬೇಡಿಕೆಯಲ್ಲಿ 80% ಪಾಲನ್ನು ಭರಿಸಲಿದೆ. ಲಿಥಿಯಂ ಸಲುವಾಗಿ ಚೀನಾವನ್ನು ಅವಲಂಬಿಸಬೇಕಾದ ಸ್ಥಿತಿಯಿಂದ ಪಾರಾಗಲೂ ಇದು ನೆರವಾಗಲಿದೆ.
ಚೀನಾ ಮೇಲಿನ ಅವಲಂಬನೆ ಬೇಕಿಲ್ಲ:
ಭಾರತ ಇದುವರೆಗೆ ಲಿಥಿಯಂ ಲೋಹಕ್ಕೆ ಚೀನಾವನ್ನು ಅವಲಂಬಿಸಿದೆ. ಹೋಗಿದ್ದರೂ, ರಾಜಸ್ಥಾನದಲ್ಲಿ ಅತಿ ದೊಡ್ಡ ನಿಕ್ಷೇಪ ಪತ್ತೆಯಾಗಿರುವುದರಿಂದ ಚೀನಾದ ಪಾರಮ್ಯ ಅಂತ್ಯವಾಗಲಿದೆ. ಆ ದೇಶದ ಅವಲಂಬನೆಯನ್ನು ತಪ್ಪಿಸಬಹುದು ಎಂದು ವರದಿಯಾಗಿದೆ.
ಲಿಥಿಯಂ ಲೋಹಕ್ಕಾಗಿ ಭಾರತ ವಿದೇಶಗಳನ್ನು ಅವಲಂಬಿಸಿರುವುದರಿಂದ ದುಬಾರಿಯಾಗಿದೆ. ಆದ್ದರಿಂದ ಅಗ್ಗದ ದರದಲ್ಲಿ ಸ್ಥಳೀಯವಾಗಿಯೇ ಲೋಹವನ್ನು ಪಡೆಯಬಹುದು. ರಾಜಸ್ಥಾನಕ್ಕೂ ಇದರಿಂದ ಅನುಕೂಲವಾಗಲಿದೆ.
ಕೇಂದ್ರ ಸರ್ಕಾರ 2027ರ ವೇಳೆಗೆ ಡೀಸೆಲ್ ಬಳಸುವ 4 ಚಕ್ರಗಳ ವಾಹನಗಳ ಬಳಕೆಯನ್ನು ನಿಷೇಧಿಸಬೇಕು ಎಂದು ಪೆಟ್ರೋಲಿಯಂ ಸಚಿವಾಲಯ ನೇಮಿಸಿದ್ದ ತಜ್ಞರ ಸಮಿತಿ ವರದಿ ಶಿಫಾರಸು ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.