Site icon Vistara News

Pilot strike | ಲುಫ್ತಾನ್ಸಾ ಏರ್‌ಲೈನ್‌ ಪೈಲಟ್‌ಗಳ ಸೆ.7, 8ರ ಮುಷ್ಕರ ರದ್ದು

lufthansa

ಸ್ಯಾನ್‌ ಫ್ರಾನ್ಸಿಸ್ಕೊ: ಅನೇಕ ಮಂದಿ ವಿಮಾನ ಪ್ರಯಾಣಿಕರಿಗೆ ಇದು ನಿರಾಳ ಮೂಡಿಸುವ ಸುದ್ದಿ. ಜರ್ಮನಿ ಮೂಲದ ಲುಫ್ತಾನ್ಸಾ ಏರ್‌ಲೈನ್‌ನ ಪೈಲಟ್‌ಗಳು ಸೆಪ್ಟೆಂಬರ್‌ 7 ಮತ್ತು 8ರಂದು (ಬುಧವಾರ ಮತ್ತು ಗುರುವಾರ) ನಡೆಸಲು (Pilot strike) ಉದ್ದೇಶಿಸಿದ್ದ ಎರಡು ದಿನಗಳ ಮುಷ್ಕರ ರದ್ದಾಗಿದೆ.

ಲುಫ್ತಾನ್ಸಾ ಏರ್‌ಲೈನ್‌ನ ವಕ್ತಾರರರು ಇದನ್ನು ದೃಢಪಡಿಸಿದ್ದಾರೆ. ಈ ಹಿಂದೆ ಏರ್‌ಲೈನ್‌ ಮುಷ್ಕರದ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವನ್ನು ರದ್ದುಪಡಿಸಲು ನಿರ್ಧರಿಸುತ್ತಿರುವುದಾಗಿ ತಿಳಿಸಿತ್ತು. ಏರ್‌ಲೈನ್‌ ಆಡಳಿತ ಮಂಡಳಿ ಮತ್ತು ಪೈಲೆಟ್‌ಗಳ ಜತೆಗೆ ಮಾತುಕತೆ ನಡೆದ ಬಳಿಕ ಮುಷ್ಕರ ರದ್ದಾಗಿದೆ.

ಒಂದು ವೇಳೆ ಮುಷ್ಕರ ನಡೆದಿರುತ್ತಿದ್ದರೆ ಲುಫ್ತಾನ್ಸಾ ಏರ್‌ಲೈನ್‌ ಹಾರಾಟದಲ್ಲಿ ಭಾರಿ ವ್ಯತ್ಯಯ ಉಂಟಾಗುತ್ತಿತ್ತು. ಪ್ರಯಾಣಿಕರಿಗೂ ಸಮಸ್ಯೆಯಾಗುತ್ತಿತ್ತು. ಸುಮಾರು 800 ವಿಮಾನಗಳ ಹಾರಾಟ ರದ್ದಾಗುತ್ತಿತ್ತು. ಸುಮಾರು 13 ಲಕ್ಷ ಪ್ರಯಾಣಿಕರಿಗೆ ತೊಂದರೆ ಸಂಭವಿಸುತ್ತಿತ್ತು.

ಭಾರತದ ದಿಲ್ಲಿ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಂದ ಲುಫ್ತಾನ್ಸಾ ವಿಮಾನಗಳ ಹಾರಾಟ ನಡೆಯುತ್ತಿದೆ. ಕಳೆದ ಕೆಲ ತಿಂಗಳುಗಳಿಂದ ಲುಫ್ತಾನ್ಸಾ ಏರ್‌ಲೈನ್‌ನಲ್ಲಿ ಯೂನಿಯನ್‌ಗಳು ಮುಷ್ಕರದ ಬೆದರಿಕೆ ಒಡ್ಡುತ್ತಿವೆ. ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಪೈಲಟ್‌ಗಳು ಮುಂದಿಟ್ಟಿದ್ದರು. ಲುಫ್ತಾನ್ಸಾ ಇದೀಗ ಸುಧಾರಿತ ವೇತನದ ಆಫರ್‌ ಪ್ರಕಟಿಸಿರುವುದಾಗಿ ತಿಳಿಸಿದೆ.

Exit mobile version