Site icon Vistara News

ದಾವೋಸ್‌ನಲ್ಲಿ ಸಿಎಂ, ರಾಜ್ಯದಲ್ಲಿ 2,000 ಕೋಟಿ ರೂ. ಹೂಡಿಕೆಗೆ ಲುಲು ಗ್ರೂಪ್‌ ಒಪ್ಪಂದ

cm bommai and sadguru

ದಾವೋಸ್‌: ದಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್‌ ಎಕನಾಮಿಕ್‌ ಫೋರಮ್‌ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಯಮಿಗಳು ಹಾಗೂ ಹೂಡಿಕೆದಾರರ ಜತೆಗೆ ಸಮಾಲೋಚನೆ ನಡೆಸಿದರು. ರಾಜ್ಯದಲ್ಲಿ ಹೂಡಿಕೆಗೆ ಆಹ್ವಾನಿಸಿದರು. ಸರಕಾರದಿಂದ ಎಲ್ಲ ರೀತಿಯ ಬೆಂಬಲ, ಮೂಲಸೌಕರ್ಯ ಒದಗಿಸುವ ಭರವಸೆ ನೀಡಿದರು.

ಕರ್ನಾಟಕದಲ್ಲಿ ಸುಮಾರು 2 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಗೆ ಲುಲು ಗ್ರೂಪ್‌ ಇಂಟರ್‌ನ್ಯಾಶನಲ್‌ ಮುಂದಾಗಿದ್ದು, ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಮತ್ತಿರರು ಉಪಸ್ಥಿತರಿದ್ದರು. ಕಂಪನಿಯ ನಿರ್ದೇಶಕ ಎ.ವಿ ಅನಂತ ರಾಮನ್‌ ಪಾಲ್ಗೊಂಡಿದ್ದರು.

ರಾಜ್ಯದಲ್ಲಿ 4 ಶಾಪಿಂಗ್‌ ಮಾಲ್‌, ಹೈಪರ್‌ ಮಾರ್ಕೆಟ್‌, ರಫ್ತು ಆಧಾರಿತ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. 10,000 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಸಮಾವೇಶದಲ್ಲಿ ಹೀರಿ ಮೊಟೊಕಾರ್ಪ್‌ ಅಧ್ಯಕ್ಷ ಮತ್ತು ಸಿಇಒ ಆದ ಪವನ್‌ ಮುಂಜಲ್‌ ಅವರು ಸಿಎಂ ಬೊಮ್ಮಾಯಿ ಜತೆಗೆ ಮಾತುಕತೆ ನಡೆಸಿದರು. ಜ್ಯೂಬಿಲಿಯೆಂಟ್‌ ಗ್ರೂಪ್‌, ಹಿಟಾಚಿ, ಸೀಮನ್ಸ್‌ ಸಂಸ್ಥೆಯ ಮುಖ್ಯಸ್ಥರೊಡನೆ ಮಾತುಕತೆ ನಡೆಸಿದರು.

ಜ್ಯೂಬಿಲಿಯೆಂಟ್‌ ಬಯೊಸಿಸ್‌, ದೇವನಹಳ್ಳಿಯಲ್ಲಿ 10 ಎಕರೆ ಪ್ರದೇಶದಲ್ಲಿ ನೂತನವಾಗಿ ಆರ್‌ ಆಂಡ್‌ ಡಿ ಸೆಂಟರ್‌ ತೆರೆಯಲು ಉದ್ದೇಶಿಸಿದೆ. ಹಿಟಾಚಿ ಎನರ್ಜಿ ರಾಜ್ಯದಲ್ಲಿ ಇವಿ ಚಾರ್ಜಿಂಗ್‌ ಸ್ಟೇಷನ್‌ಗಳ ಮೂಲ ಸೌಕರ್ಯಕ್ಕಾಗಿ ಹೂಡಿಕೆ ಮಾಡಲು ಉದ್ದೇಶಿಸಿದೆ.

ಹವಾಮಾನ ಬದಲಾವಣೆ ಮತ್ತು ಪರಿಸರ ಮಾಲಿನ್ಯ ಕುರಿತ ವಿಚಾರಗೋಷ್ಠಿಗೂ ಮುನ್ನ ಸದ್ಗುರು ಜಗ್ಗಿ ವಾಸುದೇವ್‌ ಅವರನ್ನು ಸಿಎಂ ಭೇಟಿಯಾದರು. ಕೈಗಾರಿಕೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಇ.ವಿ ರಮಣ ರೆಡ್ಡಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಉಪಸ್ಥಿತರಿದ್ದರು.
ಕಳದ ಜನವರಿ-ಮಾರ್ಚ್‌ ತ್ರೈಮಾಸಿಕದಲ್ಲಿ ಕರ್ನಾಟಕ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದರಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ವರದಿಗಳು ರಾಜ್ಯಕ್ಕೆ ಸಕಾರಾತ್ಮಕವಾಗಿದೆ. ಸಿಎಂ ಬೊಮ್ಮಾಯಿ ಅವರೂ ಈ ಅಂಶವನ್ನು ಪ್ರತಿಪಾದಿಸಿ ಟ್ವೀಟ್‌ ಮಾಡಿದ್ದಾರೆ.

ಆಂಧ್ರ ಸಿಎಂ ಜಗನ್‌ ಮೋಹನ್‌ ರೆಡ್ಡಿ ಭಾಗಿ
ದಾವೋಸ್‌ ಸಮಾವೇಶದಲ್ಲಿ ಭಾಗವಹಿಸಿರುವ ಆಂಧ್ರಪ್ರದೇಶದ ಸಿಎಂ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರು ವರ್ಲ್ಡ್‌ ಎಕನಾಮಿಕ್‌ ಫೋರಮ್‌ನ ಸ್ಥಾಪಕ ಕ್ಲೌಸ್‌ ಶ್ವಾಬ್‌ ಅವರನ್ನು ಭೇಟಿಯಾದರು. ಆಂದ್ರಪ್ರದೇಶದಲ್ಲಿ ಹೂಡಕೆ ಮಾಡುವ ಬಗ್ಗೆ ಚರ್ಚಿಸಿದರು. ಅದಾನಿ ಗ್ರೂಪ್‌ ಮುಖ್ಯಸ್ಥ ಗೌತಮ್‌ ಅದಾನಿಯವರನ್ನೂ ಜಗನ್‌ ಭೇಟಿಯಾದರು.

ಇದನ್ನೂ ಓದಿ: ದಾವೋಸ್ ವಿಶ್ವ ಆರ್ಥಿಕ ಸಮಾವೇಶಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ

Exit mobile version