ಮುಂಬಯಿ: ಮಹಾರಾಷ್ಟ್ರ ಸರ್ಕಾರ ಮುಂಬಯಿನ ನಾರಿಮನ್ ಪಾಯಿಂಟ್‌ನಲ್ಲಿರುವ ಹೆಸರಾಂತ ಏರ್ ಇಂಡಿಯಾ ಬಿಲ್ಡಿಂಗ್ (Air India) ಅನ್ನು (Air India building) ಖರೀದಿಸಲು ನಿರ್ಧರಿಸಿದೆ. ತನ್ನ ಆಡಳಿತ ಕಚೇರಿಗಳ ವಿಸ್ತರಣೆಯ ಭಾಗವಾಗಿ ಏರ್ ಇಂಡಿಯಾ ಬಿಲ್ಡಿಂಗ್ ಅನ್ನು 1,600 ಕೋಟಿ ರೂ.ಗೆ ಖರೀದಿಸಲು ಒಪ್ಪಿದೆ.
ಕೇಂದ್ರ ಸರ್ಕಾರ ಎಲ್ಲ ಕಚೇರಿಗಳನ್ನು ತೆರವುಗೊಳಿಸಿ 100% ಹಸ್ತಾಂತರ ಮಾಡಿದರೆ ಮಾತ್ರ ಡೀಲ್ ಅನ್ನು ಪೂರ್ಣಗೊಳಿಸುವುದಾಗಿ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಈ ದಿಗ್ಗಜ ಕಟ್ಟಡವನ್ನು ಖರೀದಿಸುವುದರಿಂದ ಮಹಾರಾಷ್ಟ್ರ ಸರ್ಕಾರಕ್ಕೆ ಕಚೇರಿ ಕಟ್ಟಡಗಳಿಗೆ ನೀಡುವ ಬಾಡಿಗೆಯಲ್ಲಿ ಉಳಿತಾಯವಾಗಲಿದೆ. ಈಗ ರಾಜ್ಯ ಸರ್ಕಾರದ ಹಲವಾರು ಕಚೇರಿಗಳು ಖಾಸಗಿ ಕಟ್ಟಡದಲ್ಲಿ ಇದ್ದು, ಪ್ರತಿ ತಿಂಗಳು ಬಾಡಿಗೆ ಸಲುವಾಗಿ ದೊಡ್ಡ ಮೊತ್ತ ಹೋಗುತ್ತಿದೆ.
ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕಳೆದ ವರ್ಷ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಭೇಟಿಯಾಗಿ, ಏರ್ ಇಂಡಿಯಾ ಬಿಲ್ಡಿಂಗ್ ಖರೀದಿಸುವ ಮಹಾರಾಷ್ಟ್ರ ಸರ್ಕಾರದ ಯತ್ನಕ್ಕೆ ಬೆಂಬಲಿಸಬೇಕು ಎಂದು ಕೋರಿದ್ದರು. ಎಐ ಅಸೆಟ್ಸ್ ಹೋಲ್ಡಿಂಗ್ (AI Assets Holding LTD) ಏರ್ ಇಂಡಿಯಾ ಬಿಲ್ಡಿಂಗ್‌ನ ಮಾಲಿಕತ್ವವನ್ನು ಹೊಂದಿದೆ. ಮಾಲಿಕತ್ವವನ್ನು ವರ್ಗಾಯಿಸಲು ತಾತ್ವಿಕವಾಗಿ ಒಪ್ಪಿದೆ.