Site icon Vistara News

ಪೆಟ್ರೋಲ್‌ ವ್ಯಾಟ್‌ ತಾನೇ ಕಡಿತಗೊಳಿಸಿದ್ದಾಗಿ ಯಾಮಾರಿಸಿತೇ ಮಹಾರಾಷ್ಟ್ರ ಸರಕಾರ?

petrol

ಬೆಂಗಳೂರು: ಕೇಂದ್ರ ಸರಕಾರ ಕಳೆದ ಶನಿವಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತನ್ನ ಸುಂಕದಲ್ಲಿ ಪ್ರತಿ ಲೀಟರ್‌ಗೆ ಅನುಕ್ರಮವಾಗಿ 8 ರೂ. ಮತ್ತು 6 ರೂ.ಗಳ ಕಡಿತವನ್ನು ಪ್ರಕಟಿಸಿತ್ತು. ಇದರ ಪರಿಣಾಮ ರಾಜ್ಯಗಳಲ್ಲಿ ತನ್ನಿಂತಾನೆ ಇವುಗಳ ಮೇಲಿನ ವ್ಯಾಟ್‌ ತೆರಿಗೆಯ ಪ್ರಮಾಣದಲ್ಲೂ ಸ್ವಲ್ಪ ಕಡಿಮೆಯಾಗಿತ್ತು. ಆದರೆ ಸಹಜವಾಗಿ ಉಂಟಾಗುವ ಈ ಇಳಿಕೆಯನ್ನು ಮಹಾರಾಷ್ಟ್ರ ಸರಕಾರ ತಾನೇ ವ್ಯಾಟ್‌ ದರದಲ್ಲಿ ಪೆಟ್ರೋಲ್‌ ಮೇಲೆ ಲೀಟರ್‌ಗೆ 2.08 ರೂ. ಮತ್ತು ಡೀಸೆಲ್‌ ಮೇಲೆ ಲೀಟರ್‌ಗೆ 1.44 ರೂ. ಕಡಿತಗೊಳಿಸಿರುವುದಾಗಿ ಘೋಷಿಸಿ ಜನರನ್ನು ಯಾಮಾರಿಸಲು ಯತ್ನಿಸಿದೆ.

ಕೇಂದ್ರ ಸರಕಾರ ತನ್ನ ಸುಂಕ ಕಡಿತಗೊಳಿಸಿದ ಬಳಿಕ ಮಹಾರಾಷ್ಟ್ರ ಸರಕಾರ ಲೀಟರ್‌ಗೆ 2.08 ರೂ. ವ್ಯಾಟ್‌ ಅನ್ನು ಕಡಿತಗೊಳಿಸಿರುವುದಾಗಿ ಘೋಷಿಸಿತ್ತು. ಹೀಗಾಗಿ ಎಲ್ಲರೂ 111.30 ರೂ.ಗಳಿಂದ 109.22 ರೂ.ಗೆ ಪೆಟ್ರೋಲ್‌ ದರ ಇಳಿಯಬಹುದು ಎಂದು ಭಾವಿಸಿದ್ದರು. ಆದರೆ ಅದು ಸುಳ್ಳಾಯಿತು. ಜತೆಗೆ ಕೇಂದ್ರ ಸರಕಾರದ ಅಬಕಾರಿ ಸುಂಕ ಕಡಿತದಿಂದ ಸಹಜವಾಗಿ ಕಡಿಮೆಯಾಗಿದ್ದ ವ್ಯಾಟ್‌ ದರದ ಕ್ರೆಡಿಟ್‌ ಅನ್ನು ಮಹಾರಾಷ್ಟ್ರ ಸರಕಾರ ತನ್ನ ಹೆಸರಿಗೆ ಬರೆಯಲು ಯತ್ನಿಸಿ ಬೇಸ್ತು ಬೀಳಿಸಿದ್ದೂ ಸಾಬೀತಾಯಿತು.

ಫಡ್ನವೀಸ್‌ ತರಾಟೆ
ಮಹಾರಾಷ್ಟ್ರ ಸರಕಾರ ಹೀಗೆ ಜನರನ್ನು ಬೇಸ್ತು ಬೀಳಿಸಿರುವ ಬಗ್ಗೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರ ಸರಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ ಅನ್ನೂ ಕಡಿತಗೊಳಿಸಿರುವುದರಿಂದ ತಾನಾಗಿಯೇ ರಾಜ್ಯದ ವ್ಯಾಟ್‌ನಲ್ಲೂ ಇಳಿಕೆಯಾಗಿತ್ತು. ಆದರೆ ಕೇಂದ್ರ ಸರಕಾರದ ನಿರ್ಧಾರದ ಲಾಭವನ್ನು ತನ್ನ ಹೆಸರಿಗೆ ವರ್ಗಾಯಿಸಲು ಮಹಾರಾಷ್ಟ್ರ ಸರಕಾರ ತಾನೇ ವ್ಯಾಟ್‌ ಕಡಿತಗೊಳಿಸಿರುವುದಾಗಿ ಘೋಷಿಸಿ ಜನರನ್ನು ವಂಚಿಸಿದೆ ಎಂದು ಫಡ್ನವೀಸ್‌ ಹೇಳಿದ್ದಾರೆ.
ಮಹಾರಾಷ್ಟ್ರದಂತೆ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರಕಾರ ಮತ್ತು ಕೇರಳದಲ್ಲಿ ಸಿಪಿಐ ನೇತೃತ್ವದ ಯುಡಿಎಫ್‌ ಸರಕಾರ ತಾವೇ ವ್ಯಾಟ್‌ ದರದಲ್ಲಿ ಕಡಿತಗೊಳಿಸಿರುವುದಾಗಿ ಜನತೆಯನ್ನು ಬೇಸ್ತು ಬೀಳಿಸುವ ಯತ್ನ ನಡೆಸಿವೆ.

ಸಿಎಗಳು ಹೇಳುವುದೇನು?
ಕೇಂದ್ರ ಸರಕಾರದ ಅಬಕಾರಿ ಮತ್ತು ಸೆಸ್‌ ಕಡಿತದ ಬಳಿಕ ನಿಗದಿಯಾಗುವ ದರದ ಮೇಲೆ ರಾಜ್ಯಗಳಲ್ಲಿ ವ್ಯಾಟ್‌ನ ಪ್ರಮಾಣ ನಿಗದಿಯಾಗುತ್ತವೆ. ಕೇಂದ್ರ ಸರಕಾರ ತನ್ನ ಸುಂಕದಲ್ಲಿ 8 ರೂ. ಕಡಿತಗೊಳಿಸಿರುವುದರಿಂದ ಎಲ್ಲ ರಾಜ್ಯಗಳಂತೆ ಮಹಾರಾಷ್ಟ್ರದಲ್ಲೂ ವ್ಯಾಟ್‌ ಇಳಿಕೆಯಾಗಿದೆಯೇ ಹೊರತು, ರಾಜ್ಯ ಸರಕಾರ ಪ್ರತ್ಯೇಕವಾಗಿ ಕಡಿತಗೊಳಿಸಿದ್ದಲ್ಲ ಎನ್ನುತ್ತಾರೆ ಚಾರ್ಟರ್ಡ್‌ ಅಕೌಂಟೆಂಟ್‌ ಆಗಿರುವ ಸಿಎ ರಚನಾ ಫಡ್ಕೆ ರಾನಡೆ ಅವರು.

ಇದನ್ನೂ ಓದಿ: ಕೇಂದ್ರ ಸರಕಾರ 2.2 ಲಕ್ಷ ಕೋಟಿ ರೂ. ತೈಲ ತೆರಿಗೆ ನಷ್ಟ ಭರಿಸಲಿದೆ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Exit mobile version