ನವ ದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24 ಸಾಲಿನ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಕೇಂದ್ರ ಬಜೆಟ್‌ಗಳ ಇತಿಹಾಸದ ಪುಟಗಳನ್ನು ತಿರುವಿದರೆ, ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವ ಮುಂಗಡಪತ್ರಗಳಿವೆ. (Budget 2023) ಅವುಗಳ ಬಗ್ಗೆ ತಿಳಿಯೋಣ.
ನಿರ್ಮಲಾ ಸೀತಾರಾಮನ್ ಸುದೀರ್ಘ ಭಾಷಣ
ಇದುವರೆಗೆ ನಾಲ್ಕು ಸಲ ಕೇಂದ್ರ ಆಯವ್ಯಯ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020ರ ಫೆಬ್ರವರಿ 1ರಂದು 2020-21ರ ಬಜೆಟ್ ಮಂಡಿಸಿದ ಸಂದರ್ಭ 2 ಗಂಟೆ 42 ನಿಮಿಷಗಳ ಕಾಲ ಬಜೆಟ್ ಭಾಷಣ ಮಾಡಿದ್ದರು. ಇದು ಸುದೀರ್ಘ ಆಯವ್ಯಯ ಭಾಷಣ ಎನ್ನಿಸಿದೆ. ಮಾಜಿ ಹಣಕಾಸು ಸಚಿವ ಹಿರುಭಾಯ್ ಮುಲ್ಲಿಜಿಭಾಯ್ ಪಟೇಲ್ ಅವರು 1977ರಲ್ಲಿ ಸಂಕ್ಷಿಪ್ತ ಭಾಷಣ ಮಾಡಿದ್ದರು.
ಸ್ವತಂತ್ರ ಭಾರತದ ಮೊದಲ ಬಜೆಟ್
ಸ್ವತಂತ್ರ ಭಾರತದ ಮೊದಲ ಮಧ್ಯಂತರ ಬಜೆಟ್ ಅನ್ನು 1947ರ ನವೆಂಬರ್ 26ರಂದು ದೇಶದ ಮೊದಲ ಹಣಕಾಸು ಸಚಿವ ಆರ್.ಕೆ ಶಣ್ಮುಖಂ ಚೆಟ್ಟಿ ಮಂಡಿಸಿದ್ದರು. 1948-49ರ ಬಜೆಟ್ ಕೇವಲ 95 ದಿನಗಳ ಹತ್ತಿರದಲ್ಲಿ ಇದ್ದುದರಿಂದ ಈ ಮಧ್ಯಂತರ ಬಜೆಟ್‌ನಲ್ಲಿ ಹೊಸ ತೆರಿಗೆ ಇರಲಿಲ್ಲ.
ಸ್ವತಂತ್ರ ಭಾರತದ ಮೊದಲ ಹಾಗೂ ಪೂರ್ಣಪ್ರಮಾಣದ ಬಜೆಟ್ ಅನ್ನು 1948-49ರ ಸಾಲಿಗೆ ಮಂಡಿಸಿದವರು ಜಾನ್ ಮಥಾಯ್. 1949-50 ಮತ್ತು 1950-51ರ ಬಜೆಟ್ ಅನ್ನು ಅವರೇ ಮಂಡಿಸಿದ್ದರು. ಮೊದಲ ಬಜೆಟ್ ಯೋಜನಾ ಆಯೋಗದ ಸೃಷ್ಟಿಗೆ ನೀಲನಕ್ಷೆ ರೂಪಿಸಿತ್ತು. ಜವಹರಲಾಲ್ ನೆಹರೂ ಯೋಜನಾ ಆಯೋಗದ ಮೊದಲ ಅಧ್ಯಕ್ಷರಾಗಿದ್ದರು.
2002-2003ರ ರೋಲ್ ಬ್ಯಾಕ್ ಬಜೆಟ್:
ಎನ್‌ಡಿಎ ಅವಧಿಯಲ್ಲಿ ಅಂದಿನ ಹಣಕಾಸು ಸಚಿವ ಯಶ್ವಂತ್ ಸಿನ್ಹಾ ಮಂಡಿಸಿದ್ದ 2002-03ರ ಮುಂಗಡಪತ್ರ ರೋಲ್ ಬ್ಯಾಕ್ ಬಜೆಟ್ ಎಂದೇ ಕುಖ್ಯಾತಿ ಗಳಿಸಿತ್ತು. ಇದರಲ್ಲಿ ಘೋಷಿಸಿದ್ದ ಹಲವಾರು ಪ್ರಸ್ತಾಪಗಳನ್ನು ಬಳಿಕ ಹಿಂತೆಗೆದುಕೊಳ್ಳಲಾಗಿತ್ತು. ಪ್ರತಿಪಕ್ಷಗಳು ಹಾಗೂ ಎನ್‌ಡಿಎ ಮಿತ್ರಪಕ್ಷಗಳ ಒತ್ತಡಕ್ಕೆ ಸಿಲುಕಿ ಹಲವು ಪ್ರಸ್ತಾಪಗಳನ್ನು ಹಿಂತೆಗೆದುಕೊಳ್ಳುವಂತಾಗಿತ್ತು. ಸಿನ್ಹಾ ಅವರು ಪಡಿತರ ವಸ್ತುಗಳ ದರಗಳನ್ನು ಏರಿಸಿದ್ದರು. ಸಣ್ಣ ಉಳಿತಾಯ ಬಡ್ಡಿ ದರ ಕಡಿತಗೊಳಿಸಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಹಲವನ್ನು ಹಿಂತೆಗೆದುಕೊಂಡರು.
ಮಿಲೇನಿಯಂ ಬಜೆಟ್: ಹೊಸ ಸಹಸ್ರಮಾನದ ಬಜೆಟ್ ಅನ್ನು 2000ರಲ್ಲಿ ಅಂದಿನ ಹಣಕಸು ಸಚಿವ ಯಶ್ವಂತ್ ಸಿನ್ಹಾ ಮಂಡಿಸಿದ್ದರು. ಇದು ಭಾರತದ ಮಾಹಿತಿ ತಂತ್ರಜ್ಞಾನ ವಲಯದ ಬೆಳವಣಿಗೆಗೆ ಮಾರ್ಗಸೂಚಿಯನ್ನು ಪ್ರಕಟಿಸಿತ್ತು. ಕಂಪ್ಯೂಟರ್ ಮತ್ತು ಬಿಡಿಭಾಗಗಳ ಆಮದು ಮೇಲಿನ ಸುಂಕವನ್ನು ಇಳಿಸಲಾಯಿತು.
ಡ್ರೀಮ್ ಬಜೆಟ್: ತೆರಿಗೆಗಳನ್ನು ಕಡಿತಗೊಳಿಸಿ ಅದರ ಸಂಗ್ರಹ ಹೆಚ್ಚಿಸುವ ಉದ್ದೇಶದೊಂದಿಗೆ 1997-98ರಲ್ಲಿ ಅಂದಿನ ಹಣಕಾಸು ಸಚಿವ ಪಿ.ಚಿದಂಬರಂ ಬಜೆಟ್ ಮಂಡಿಸಿದ್ದರು. ಇದನ್ನು ಡ್ರೀಮ್ ಬಜೆಟ್ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ವೈಯಕ್ತಿಕ ಆದಾಯ ತೆರಿಗೆಯನ್ನು 40%ರಿಂದ 30%ಕ್ಕೆ ತಗ್ಗಿಸಿದರು. ಕಾರ್ಪೊರೇಟ್ ತೆರಿಗೆಯನ್ನೂ ಇಳಿಸಿದರು. ವಿದೇಶಿ ಹೂಡಿಕೆಯ ಒಳ ಹರಿವು ಹೆಚ್ಚಿಸಲು ಇದು ಸಹಕರಿಸಿತು.
ಉದಾರೀಕರಣ ಯುಗದ ಬಜೆಟ್
1991ರಲ್ಲಿ ಅಂದಿನ ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರು ಆರ್ಥಿಕ ಉದಾರೀಕರಣದ ಯುಗವನ್ನು ದೇಶದಲ್ಲಿ ಆರಂಭಿಸಿದ ಐತಿಹಾಸಿಕ ಬಜೆಟ್ ಅನ್ನು ಮಂಡಿಸಿದರು. ಆಗ ದೇಶ ತೀವ್ರ ಆರ್ಥಿಕ ಸಂಕಷ್ಟದಲ್ಲಿತ್ತು. ಹೀಗಾಗಿ ರಫ್ತನ್ನು ಹೆಚ್ಚಿಸುವ, ಉದಾರೀಕರಣದ ಸುಧಾರಣಾ ಕ್ರಮಗಳನ್ನು ಒಳಗೊಂಡಿರುವ ಬಜೆಟ್ ಮಂಡಿಸಿದರು.
ಕ್ಯಾರೆಟ್ ಮತ್ತು ಕಡ್ಡಿ ಬಜೆಟ್ (Carrot & Stick Budget) : ವಿಪಿ ಸಿಂಗ್ ಅವರು 1986ರಲ್ಲಿ ಮಂಡಿಸಿದ ಬಜೆಟ್ ಕ್ಯಾರೆಟ್ & ಸ್ಟಿಕ್ ಬಜೆಟ್ ಎಂದು ಹೆಸರು ಗಳಿಸಿದೆ. 1991ರ ಆರ್ಥಿಕ ಉದಾರೀಕರಣಕ್ಕೆ ಪೀಠಿಕೆಯಂತಿತ್ತು ಈ ಬಜೆಟ್. ಲೈಸೆನ್ಸ್ ರಾಜ್ ವ್ಯವಸ್ಥೆಯನ್ನು ಸಡಿಲಗೊಳಿಸುವುದು ಮತ್ತು ಪರೋಕ್ಷ ತೆರಿಗೆಯ ಸುಧಾರಣೆಯ ಅಂಶಗಳು ಇದರಲ್ಲಿತ್ತು. ಪುರಸ್ಕಾರ ಮತ್ತು ದಂಡನೆಯನ್ನು ಅನುಕ್ರಮವಾಗಿ ಕ್ಯಾರೆಟ್ ಮತ್ತು ಕಡ್ಡಿ ಬಿಂಬಿಸಿತ್ತು.
ಬ್ಲ್ಯಾಕ್ ಬಜೆಟ್: ಯಶ್ವಂತರಾಬ್ ಬಿ ಚೌಹಾಣ್ ಮಂಡಿಸಿದ್ದ 1973-74ರ ಬಜೆಟ್ ಅನ್ನು ಬ್ಲ್ಯಾಕ್ ಬಜೆಟ್ ಎಂದು ಪರಿಗಣಿಸಲಾಗುತ್ತದೆ. ಆಗ ವಿತ್ತೀಯ ಕೊರತೆ 550 ಕೋಟಿ ರೂ.ಗೆ ಏರಿತ್ತು. ದೇಶ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿತ್ತು.
ಪ್ರಣಬ್ ಮುಖರ್ಜಿಯವರ 2012ರ ಬಜೆಟ್
ಪ್ರಣಬ್ ಮುಖರ್ಜಿ ಅವರು 2012ರಲ್ಲಿ ಮಂಡಿಸಿದ ಬಜೆಟ್‌ನಲ್ಲಿ ತೆರಿಗೆ ಸೋರಿಕೆ ಅಥವಾ ತೆರಿಗೆ ವಂಚನೆಯನ್ನು ತಡೆಯುವ ನಿಟ್ಟಿನಲ್ಲಿ ಜನರಲ್ ಆ್ಯಂಟಿ ಅವಾಯ್‌ಡೆನ್ಸ್ ರೂಲ್ ಅಥವಾ ಗಾರ್ (General anti avoidance rule) ಅನ್ನು ಪರಿಚಯಿಸಿದರು. ಆದಾಯ ತೆರಿಗೆ ಪದ್ಧತಿಯಲ್ಲಿ ಪೂರ್ವಾನ್ವಯವಾಗುವಂತೆ ಘೋಷಿಸಿದ್ದ ಬದಲಾವಣೆಗಳು ವಿವಾದಕ್ಕೀಡಾಗಿತ್ತು. ಇದರಿಂದ ಸರ್ಕಾರಕ್ಕೆ ವೊಡಾಫೋನ್-ಹಚ್ ಡೀಲ್‌ನಲ್ಲಿ ತೆರಿಗೆ ವಸೂಲು ಮಾಡಲು ಅವಕಾಶ ಸೃಷ್ಟಿಯಾಗಿತ್ತು.
ಹಲವು ಪ್ರಥಮಗಳ ಅರುಣ್ ಜೇಟ್ಲಿ ಬಜೆಟ್
2017ರಲ್ಲಿ ಅರುಣ್ ಜೇಟಿ ಮಂಡಿಸಿದ್ದ ಬಜೆಟ್‌ನಲ್ಲಿ 92 ವರ್ಷಗಳ ಪ್ರತ್ಯೇಕ ರೈಲ್ವೆ ಬಜೆಟ್ ಅನ್ನು ಅಂತ್ಯಗೊಳಿಸಲಾಯಿತು. ರೈಲ್ವೆ ಬಜೆಟ್ ಅನ್ನು ಬ್ರಿಟಿಷರ ಕಾಲದಲ್ಲಿ 1924ರಲ್ಲಿ ಶುರು ಮಾಡಲಾಗಿತ್ತು. ಜಿಎಸ್‌ಟಿ ಜಾರಿ ಮತ್ತು ನೋಟು ಅಮಾನ್ಯತೆಯ ಬಳಿಕ ಮೊದಲ ಬಜೆಟ್ ಇದಾಗಿತ್ತು. 2.5 ಲಕ್ಷ ರೂ. ಮತ್ತು 5 ಲಕ್ಷ ರೂ. ಆದಾಯ ಇರುವವರಿಗೆ ಆದಾಯ ತೆರಿಗೆಯನ್ನು 10%ರಿಂದ 5%ಕ್ಕೆ ಇಳಿಸಲಾಯಿತು.