ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಮಂಡಳಿಯ ೪೭ನೇ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಉನ್ನತ ಮಟ್ಟದ ಸಚಿವರುಗಳ ಸಮಿತಿಯು (GoM) ಜಿಎಸ್‌ಟಿಯ ದರಗಳನ್ನು ಸರಳಗೊಳಿಸುವ ಸಂಬಂಧ ನೀಡಿರುವ ಮಧ್ಯಂತರ ವರದಿಯನ್ನು ಅಂಗೀಕರಿಸಲಾಗಿದೆ.
ಇದರ ಪರಿಣಾಮ ದಿನ ನಿತ್ಯ ಬಳಸುವ ಹಲವು ವಸ್ತುಗಳ ದರಗಳು ಏರಿಕೆಯಾಗಲಿವೆ. ಏಕೆಂದರೆ ಸಮಿತಿಯ ಶಿಫಾರಸ್ಸಿನ ಮೇರೆಗೆ ದಿನ ಬಳಕೆಯ ಹಲವು ವಸ್ತುಗಳು ಮತ್ತು ಸೇವೆಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಹಿಂಪಡೆಯಲಾಗುವುದು. ಇದರ ಪರಿಣಾಮ ಅವುಗಳ ಬೆಲೆ ಏರಿಕೆಯಾಗಲಿದೆ. ಜುಲೈ ೧೮ರಿಂದ ಜಿಎಸ್‌ಟಿ ಪರಿಷ್ಕೃತ ದರಗಳು ಜಾರಿಯಾಗಲಿವೆ.
ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳು ೨೦೨೨ರ ಜೂನ್ ೩೦ರ ಬಳಿಕ ಜಿಎಸ್‌ಟಿ ನಷ್ಟ ಪರಿಹಾರವನ್ನು ವಿಸ್ತರಿಸಲು ಅಥವಾ ಜಿಎಸ್‌ಟಿಯಲ್ಲಿ ತಮ್ಮ ಆದಾಯದ ಪಾಲನ್ನು ಈಗಿನ ೫೦%ಕ್ಕಿಂತ ಹೆಚ್ಚಿಸಲು ಒತ್ತಾಯಿಸುತ್ತಿವೆ. ಹೀಗಾಗಿ ತೆರಿಗೆ ವಿನಾಯಿತಿ ರದ್ದುಪಡಿಸುವ ಈ ನಡೆ ಮಹತ್ವ ಪಡೆದಿದೆ. ಆದರೆ ಇದರ ಪರಿಣಾಮ ಗ್ರಾಹಕರಿಗೆ ಕೆಲ ವಸ್ತುಗಳು ಮತ್ತು ಸೇವೆಗಳ ದರ ಹೆಚ್ಚಲಿದೆ.
೧೫ ವಸ್ತುಗಳಿಗೆ ತೆರಿಗೆ ವಿನಾಯಿತಿ ರದ್ದು
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವರುಗಳ ಉನ್ನತಮಟ್ಟದ ಸಮಿತಿಯ ಶಿಫಾರಸ್ಸಿನ ಅನ್ವಯ ೧೫ ವಸ್ತುಗಳಿಗೆ ಜಿಎಸ್‌ಟಿ ವಿನಾಯಿತಿ ರದ್ದಾಗಲಿದೆ. ಆದರೆ ಅನ್ ಪ್ಯಾಕ್ಡ್ ಮತ್ತು ಅನ್‌ಲೇಬಲ್ಡ್ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ ಮುಂದುವರಿಯಲಿದೆ. ಪ್ಯಾಕೇಟ್‌ನಲ್ಲಿ ಕೊಡುವ ಸಿದ್ಧಪಡಿಸಿದ ಆಹಾರ ವಸ್ತುಗಳು ತುಟ್ಟಿಯಾಗಲಿವೆ. ಪ್ಯಾಕೇಟ್‌ಗಳಲ್ಲಿ ಇರದ ಉತ್ಪನ್ನಗಳಿಗೆ ಜಿಎಸ್‌ಟಿ ವಿನಾಯಿತಿ ಮುಂದುವರಿಯಲಿದೆ.
ಪ್ಯಾಕೇಜ್ಡ್ ಆಹಾರ ವಸ್ತು ತುಟ್ಟಿ
ಪ್ಯಾಕ್‌ಗಳಲ್ಲಿ ಸಿದ್ಧಪಡಿಸಿ ಮಾರಾಟ ಮಾಡುವ ಪನೀರ್, ಮೊಸರು, ಲಸ್ಸಿ, ಮಜ್ಜಿಗೆ, ಜೇನುತುಪ್ಪ, ಮೀನು ಮತ್ತು ಮಾಂಸ, ಬಾರ್ಲಿ, ಓಟ್ಸ್, ಜೋಳದ ಹಿಟ್ಟು, ಬೆಲ್ಲ, ಮಂಡಕ್ಕಿಗೆ ನೀಡಿದ್ದ ತೆರಿಗೆ ವಿನಾಯಿತಿ ರದ್ದಾಗಲಿವೆ. ಹೀಗಾಗಿ ಇವುಗಳ ದರ ಏರಿಕೆ ಸನ್ನಿಹಿತವಾಗಿದೆ. ಪ್ರಿ-ಪ್ಯಾಕೇಜ್ಡ್ ಫುಡ್ ಇಂಡಸ್ಟ್ರಿಯ ವಹಿವಾಟಿನ ಮೇಲೆ ಇದು ಪರಿಣಾಮ ಬೀರುವ ನಿರೀಕ್ಷೆ ಇದೆ.
ಶಾಪಿಂಗ್ ಮಾಲ್, ಸೂಪರ್ ಮಾರ್ಕೆಟ್‌ಗಳಿಂದ ಸಾಮಾನ್ಯ ಸ್ಟೋರ್‌ಗಳಲ್ಲಿಯೂ ಇಂಥ ಪ್ಯಾಕೇಜ್ಡ್ ಆಹಾರ ವಸ್ತುಗಳ ಮಾರಾಟ ಸಾಮಾನ್ಯವಾಗಿದೆ. ಹೀಗಾಗಿ ಗ್ರಾಹಕರ ಜೇಬಿಗೆ ಭಾರವಾಗಲಿದೆ.
ಯಾವ ಸೇವೆಗಳು ದುಬಾರಿಯಾಗಲಿದೆ?
- ಹೋಟೆಲ್ಗಳಲ್ಲಿ ದಿನಕ್ಕೆ ೧,೦೦೦ ರೂ.ಗಿಂತ ಕಡಿಮೆ ಬಾಡಿಗೆಯ ರೂಮ್ಗಳಲ್ಲಿ ವಾಸ್ತವ್ಯಕ್ಕೆ ೧೨% ಜಿಎಸ್‌ಟಿ ಅನ್ವಯವಾಗಲಿದೆ. ಈ ಹಿಂದೆ ತೆರಿಗೆ ವಿನಾಯಿತಿ ಇತ್ತು. ಹೀಗಾಗಿ ಹೋಟೆಲ್ ಬಾಡಿಗೆ ದರ ಹೆಚ್ಚಳವಾಗಲಿದೆ.
- ಇ-ತ್ಯಾಜ್ಯಗಳಿಗೆ ಜಿಎಸ್‌ಟಿ ಈಗಿನ ೫%ರಿಂದ ೧೮%ಕ್ಕೆ ಏರಿಕೆಯಾಗಲಿದೆ.
- ಜಿಎಸ್‌ಟಿ ಕೌನ್ಸಿಲ್ ಚೆಕ್ ಬುಕ್ಗಳಿಗೆ ೧೮% ಜಿಎಸ್‌ಟಿ ವಿಧಿಸಲು ಉದ್ದೇಶಿಸಿದೆ. ಆದ್ದರಿಂದ ಇದರ ದರ ಹೆಚ್ಚಲಿದೆ.
- ಪೋಸ್ಟ್ ಕಾರ್ಡ್, ೧೦ ಗ್ರಾಮ್ಗಿಂತ ಕೆಳಗಿನ ಎನ್ವಲಪ್ ಹೊರತುಪಡಿಸಿ ಉಳಿದ ಅಂಚೆ ಇಲಾಖೆ ಸೇವೆಗೆ ತೆರಿಗೆ ವಿನಾಯಿತಿಯನ್ನು ರದ್ದುಪಡಿಸಲಾಗಿದ್ದು, ಅವುಗಳು ತುಟ್ಟಿಯಾಗಲಿದೆ.
- ಸಕ್ಕರೆ, ನೇಚ್ಯುರಲ್ ಫೈಬರ್ ದಾಸ್ತಾನು, ವೇರ್ಹೌಸ್ (ಗೋದಾಮು) ಸೇವೆಗೆ ತೆರಿಗೆ ವಿನಾಯಿತಿ ರದ್ದಾಗಲಿದೆ.
- ಎಲ್ಇಡಿ ಬಲ್ಬ್, ಮುದ್ರಣಕ್ಕೆ ಬಳಸುವ ಶಾಯಿ, ಚೂರಿ, ಬ್ಲೇಡ್, ವಿದ್ಯುತ್ ಚಾಲಿತ ಪಂಪ್, ಡೇರಿ ಯಂತ್ರೋಪಕರಣಗಳ ಮೇಲಿನ ಜಿಎಸ್ಟಿಯನ್ನು ೧೨%ರಿಂದ ೧೮%ಕ್ಕೆ ಏರಿಸಲಾಗುವುದು.
- ಧಾನ್ಯಗಳ ಮಿಲ್ಗಳಲ್ಲಿ ಬಳಸುವ ಯಂತ್ರೋಪಕರಣಗಳ ಮೇಲಿನ ಜಿಎಸ್‌ಟಿ ೫%ರಿಂದ ೧೮%ಕ್ಕೆ ಏರಿಕೆಯಾಗಲಿದೆ.
- ಸೋಲಾರ್ ವಾಟರ್ ಹೀಟರ್, ಸಂಸ್ಕರಿತ ಲೆದರ್ ಮೇಲೆ ಜಿಎಸ್‌ಟಿ ೧೨%ಕ್ಕೆ ಏರಿಕೆಯಾಗಲಿದೆ.
- ಪೆಟ್ರೋಲಿಯಂ ಮೂಲದ ನಿರ್ದಿಷ್ಟ ಉತ್ಪನ್ನಗಳ ಮೇಲೆ ಜಿಎಸ್‌ಟಿ ೫%ಯಿಂದ ೧೮%ಕ್ಕೆ ವೃದ್ಧಿಸಲಿದೆ.
- ಈಶಾನ್ಯ ರಾಜ್ಯಗಳಿಗೆ ಬಿಸಿನೆಸ್ ಕ್ಲಾಸ್ ವಿಮಾನಯಾನಕ್ಕೆ ತೆರಿಗೆ ವಿನಾಯಿತಿ ರದ್ದಾಗಲಿದೆ.
- ಕಸಾಯಿಖಾನೆ ಸೇವೆಗೆ ನೀಡಿದ್ದ ತೆರಿಗೆ ವಿನಾಯಿತಿ ರದ್ದಾಗಲಿದೆ.
- ಪ್ಯಾಕ್‌ಗಳಲ್ಲಿ ಸಿದ್ಧಪಡಿಸಿ ಮಾರಾಟ ಮಾಡುವ ಪನೀರ್, ಮೊಸರು, ಲಸ್ಸಿ, ಮಜ್ಜಿಗೆ, ಜೇನುತುಪ್ಪ, ಮೀನು ಮತ್ತು ಮಾಂಸ, ಬಾರ್ಲಿ, ಓಟ್ಸ್, ಜೋಳದ ಹಿಟ್ಟು, ಬೆಲ್ಲ, ಮಂಡಕ್ಕಿಗೆ ನೀಡಿದ್ದ ತೆರಿಗೆ ವಿನಾಯಿತಿ ರದ್ದಾಗಲಿವೆ. ಹೀಗಾಗಿ ಇವುಗಳ ದರ ಏರಿಕೆ ಸನ್ನಿಹಿತವಾಗಿದೆ. ಪ್ರಿ-ಪ್ಯಾಕೇಜ್ಡ್ ಫುಡ್ ಇಂಡಸ್ಟ್ರಿಯ ವಹಿವಾಟಿನ ಮೇಲೆ ಇದು ಪರಿಣಾಮ ಬೀರುವ ನಿರೀಕ್ಷೆ ಇದೆ.
- ಆಸ್ಪತ್ರೆಗಳಲ್ಲಿ ಐಸಿಯು ಹೊರತುಪಡಿಸಿ ಉಳಿದ ಕೊಠಡಿಗಳಿಗೆ ದಿನಕ್ಕೆ ೫,೦೦೦ ರೂ. ಬಾಡಿಗೆಯ ಮೇಲೆ ೫% ಜಿಎಸ್‌ಟಿ
ಯಾವ ಸೇವೆಗಳ ದರ ಇಳಿಕೆ ?
- ರೋಪ್ವೇ ಪ್ರಯಾಣ ದರ ಕಡಿಮೆಯಾಗಲಿದೆ. ರೋಪ್ವೇಯ ಪ್ರಯಾಣ ದರ ಮತ್ತು ಸರಕು ಸಾಗಾಣೆ ದರದ ಜಿಎಸ್ಟಿಯನ್ನು ಶೇ.೧೮ರಿಂದ ಶೇ.೫ಕ್ಕೆ ಇಳಿಸಲಾಗಿದೆ.
- ರಸ್ತೆ ಮೂಲಕ ಸರಕು ಸಾಗಣೆ ದರವೂ ಕಡಿಮೆಯಾಗಲಿದೆ. ಇದಕ್ಕೆ ವಿಧಿಸಲಾಗುತ್ತಿದ್ದ ಜಿಎಸ್ಟಿಯನ್ನು ಶೇ. ೧೮ರಿಂದ ಶೇ.೧೨ ಕ್ಕೆ ಇಳಿಸಲಾಗಿದೆ.
- ಆರ್ಥೋಪೆಡಿಕ್ ಉಪಕರಣಗಳ ದರ ಇಳಿಕೆಯಾಗಲಿದೆ. ಸ್ಪ್ಲಿಂಟ್ಗಳು ಮತ್ತು ಮೂಳೆ ಮುರಿದಾಗ ಬಳಸುವ ಸಲಕರಣೆಗಳು, ದೇಹದ ಕೃತಕ ಭಾಗಗಳು, ದೇಹಕ್ಕೆ ಅಳವಡಿಸಿದ ಸಲಕರೆಣೆಗಳು ಮತ್ತು ದೇಹಕ್ಕೆ ಸಂಬಂಧಿಸಿದಂತೆ ಹೊರಗೆ ಬಳಸುವ ಸಲಕರಣೆಗಳ ಜಿಎಸ್ಟಿಯನ್ನು ಶೇ. ೧೨ ರಿಂದ ಶೇ.೫ಕ್ಕೆ ಇಳಿಸಲಾಗಿದೆ.
- ರಕ್ಷಣಾ ಪಡೆಗಳು ಬಳಸುವ ಸಲಕರಣೆಗಳ ಜಿಎಸ್ಟಿಯನ್ನು ಇಳಿಸಲಾಗಿದ್ದು, ಇವುಗಳ ದರ ಕಡಿಮೆಯಾಗಲಿದೆ.
ಇದನ್ನೂ ಓದಿ: GST rate hike| ಆನ್‌ಲೈನ್ ಗೇಮಿಂಗ್, ಕ್ಯಾಸಿನೊ, ಕುದುರೆ ರೇಸ್‌ಗೆ 28% ತೆರಿಗೆ ಸದ್ಯಕ್ಕಿಲ್ಲ