ಹೊಸದಿಲ್ಲಿ: ಹೋಲ್ ಸೇಲ್ ಮಾರಾಟ ವಲಯದ, ಜರ್ಮನಿ ಮೂಲದ ಮೆಟ್ರೊ ಕ್ಯಾಶ್ ಆಂಡ್ ಕ್ಯಾರಿ, ಭಾರತದಲ್ಲಿನ ತನ್ನ ಘಟಕಗಳನ್ನು ಮಾರಾಟ ಮಾಡಲು ಚಿಂತನೆ ನಡೆಸಿದೆ.
ಅಮೆಜಾನ್, ರಿಲಯನ್ಸ್ ರಿಟೇಲ್, ಡಿಮಾರ್ಟ್ ಅನ್ನು ನಡೆಸುತ್ತಿರುವ ಅವೆನ್ಯೂ ಸೂಪರ್ ಮಾರ್ಟ್ಸ್, ಟಾಟಾ ಗ್ರೂಪ್, ಲುಲು ಗ್ರೂಪ್ ಇದನ್ನು ಖರೀದಿಸುವ ಬಗ್ಗೆ ಮಾತುಕತೆ ನಡೆಸುತ್ತಿವೆ ಎಂದು ವರದಿಯಾಗಿದೆ.
ಸುಮಾರು ಶ1.75 ತಕೋಟಿ ಡಾಲರ್ (ಅಂದಾಜು 13,125 ಕೋಟಿ ರೂ.) ಮೊತ್ತಕ್ಕೆ ಕ್ಯಾಶ್ ಆಂಡ್ ಕ್ಯಾರಿಯ ಭಾರತೀಯ ಘಟಕ ಮಾರಾಟವಾಗುವ ನಿರೀಕ್ಷೆ ಇದೆ.
ಮೆಟ್ರೊ ಕಳೆದ 19 ವರ್ಷಗಳಲ್ಲಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 31 ಮಳಿಗೆಗಳನ್ನು ಹೊಂದಿದೆ. ಸಗಟು ವಲಯಕ್ಕೆ ಶೇ.100 ವಿದೇಶಿ ಬಂಡವಾಳಕ್ಕೆ ಅನುಮತಿ ಲಭಿಸಿದ ಬಳಿಕ 2003 ರಲ್ಲಿ ಮೆಟ್ರೊ ಭಾರತವನ್ನು ಪ್ರವೇಶಿಸಿತ್ತು. ಕರ್ನಾಟಕದಲ್ಲಿ 2, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಕಲೆಕ್ಷನ್ ಸೆಂಟರ್‌ಗಳನ್ನು ಒಳಗೊಂಡಿದೆ. 6,503 ಕೋಟಿ ರೂ. ಆದಾಯವನ್ನು ಹೊಂದಿದೆ.
ಜೆಪಿ ಮೋರ್ಗಾನ್ ಮತ್ತು ಗೋಲ್ಡ್‌ಮನ್ ಸ್ಯಾಕ್ಸ್ ಅನ್ನು ಮೆಟ್ರೊದ ಖರೀದಿದಾರರ ಅನ್ವೇಷಣೆಗೆ ನೇಮಿಸಲಾಗಿದೆ.
ಉತ್ಪನ್ನಗಳನ್ನು ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡುವುದು ಮತ್ತು ಉಚಿತ ಡೆಲಿವರಿ ಕಷ್ಟಕರ. ಮೆಟ್ರೊದ ಬಹುತೇಕ ಪ್ರತಿಸ್ಪರ್ಧಿ ಕಂಪನಿಗಳು ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟದಲ್ಲಿವೆ. ಮೆಟ್ರೊ ಲಾಭದಾಯಕ ಕಂಪನಿಯಾಗಿರಲು ಬಯಸುತ್ತದೆ. ಆದರೆ ಸದ್ಯಕ್ಕೆ ಅದು ಕಷ್ಟ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.