ನವ ದೆಹಲಿ: ಕೇಂದ್ರ ಗೃಹ ಸಚಿವಾಲಯವು ವಿದೇಶಿ ದೇಣಿಗೆ ಕಾಯಿದೆ (FCRA) ಕುರಿತ ನಿಯಮಾವಳಿಗಳನ್ನು ಸಡಿಲಗೊಳಿಸಿದ್ದು, ಹೊರ ರಾಷ್ಟ್ರಗಳಲ್ಲಿರುವ ಭಾರತೀಯರು ತಮ್ಮ ಸಂಬಂಧಿಕರಿಗೆ ವರ್ಷಕ್ಕೆ ೧೦ ಲಕ್ಷ ರೂ. ತನಕ ಯಾವುದೇ ಅಧಿಕಾರಿಗಳಿಗೆ ತಿಳಿಸದೆ ರವಾನಿಸಲು ಅನುಮತಿ ಕಲ್ಪಿಸಿದೆ. ಈ ಹಿಂದೆ ಈ ಮಿತಿ ೧ ಲಕ್ಷ ರೂ. ಆಗಿತ್ತು.
ಒಂದು ವೇಳೆ ವಾರ್ಷಿಕ ೧೦ ಲಕ್ಷ ರೂ.ಗಿಂತ ಹೆಚ್ಚು ಮೊತ್ತವನ್ನು ಕಳಿಸಿದರೆ ಸರ್ಕಾರಕ್ಕೆ ಮಾಹಿತಿ ನೀಡಲು ಕಾಲಾವಕಾಶವನ್ನು ಈಗಿನ ೩೦ ದಿನಗಳಿಂದ ೯೦ ದಿನಗಳಿಗೆ ಹೆಚ್ಚಿಸಲಾಗಿದೆ.
ಎನ್‌ಜಿಒಗಳು ದೇಶದಲ್ಲಿ ಬಂದ್, ಮುಷ್ಕರ, ರಸ್ತೆ ತಡೆ ಇತ್ಯಾದಿಗಳಿಗೆ ಕುಮ್ಮಕ್ಕು ನೀಡುವುದನ್ನು ತಡೆಯಲು ಗೃಹ ಸಚಿವಾಲಯ ೨೦೨೦ರ ನವೆಂಬರ್‌ನಲ್ಲಿ ಎಫ್‌ಸಿಆರ್‌ಎ ನಿಯಮಗಳನ್ನು ಬಿಗಿಗೊಳಿಸಿತ್ತು.
ಎಫ್‌ಸಿಆರ್‌ಎಗೆ ತಂದಿರುವ ತಿದ್ದುಪಡಿ ಪ್ರಕಾರ, ಸರ್ಕಾರಿ ಹುದ್ದೆಯಲ್ಲಿ ಇರುವವರು ವಿದೇಶಿ ಫಂಡ್‌ಗಳನ್ನು ಸ್ವೀಕರಿಸುವಂತಿಲ್ಲ. ಹಾಗೂ ಎನ್‌ಜಿಒ ಪದಾಧಿಕಾರಿಗಳು ಆಧಾರ್ ಕಾರ್ಡ್ ಅನ್ನು ಹೊಂದಿರಲೇಬೇಕು. ಎನ್‌ಜಿಒಗಳು ಪಡೆಯುವ ವಿದೇಶಿ ನಿಧಿಯಲ್ಲಿ ೨೦%ಕ್ಕಿಂತ ಹೆಚ್ಚು ಮೊತ್ತವನ್ನು ಆಡಳಿತಾತ್ಮಕ ವೆಚ್ಚಗಳಿಗೆ (Administrative) ಬಳಸುವಂತಿಲ್ಲ. ಈ ಮಿತಿ ೨೦೨೦ಕ್ಕೆ ಮೊದಲು ೫೦% ಆಗಿತ್ತು.