ವಾಷಿಂಗ್ಟನ್: ಮೈಕ್ರೊಸಾಫ್ಟ್‌ನಲ್ಲಿ ಬಹುಪಾಲು ಉದ್ಯೋಗಿಗಳು ಮನೆಯಿಂದಲೇ ಕಚೇರಿ ಕೆಲಸ (Microsoft) ಮಾಡುವುದನ್ನು ಮುಂದುವರಿಸಲು ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ ಮ್ಯಾನೇಜರ್‌ಗಳು ಮತ್ತು ಹಿರಿಯ ಉದ್ಯೋಗಿಗಳು ಕಚೇರಿಯಿಂದಲೇ ಹೆಚ್ಚು ಕೆಲಸ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಕ್ರೊಸಾಫ್ಟ್ ಇತ್ತೀಚೆಗೆ ವರ್ಕ್ ಫ್ರಮ್ ಹೋಮ್ ಬಗ್ಗೆ ನಡೆಸಿರುವ ಸಮೀಕ್ಷೆ ಪ್ರಕಾರ, ಕಂಪನಿಯ ಮ್ಯಾನೇಜರ್‌ಗಳು ಮತ್ತು ಉದ್ಯೋಗಿಗಳ ನಡುವೆ ಈ ವಿಚಾರದಲ್ಲಿ ಮೂಲಭೂತ ಭಿನ್ನಾಭಿಪ್ರಾಯಗಳಿವೆ. ಸಮೀಕ್ಷೆಯಲ್ಲಿ 87% ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವುದರಿಂದ ಉತ್ಪಾದಕತೆ ( productivity) ಹೆಚ್ಚುತ್ತದೆ ಎಂದು ಹೇಳಿದ್ದರೆ, ಸೂಪರ್‌ವೈಸರ್ ಅಥವಾ ಮ್ಯಾನೇಜರ್ ಹಂತದ ಹಿರಿಯ ಉದ್ಯೋಗಿಗಳು ಇದನ್ನು ಒಪ್ಪುತ್ತಿಲ್ಲ. ಸಮೀಕ್ಷೆಯಲ್ಲಿ ಮೈಕ್ರೊಸಾಫ್ಟ್ 11 ಭಿನ್ನ ರಾಷ್ಟ್ರಗಳಲ್ಲಿ 20,000 ಉದ್ಯೋಗಿಗಳನ್ನು ಸಂದರ್ಶಿಸಿತ್ತು.
” ಈ ಸಮಸ್ಯೆಯನ್ನು ಬಗೆಹರಿಸಬೇಕಾದ ಅಗತ್ಯತೆ ಇದೆ. ಏಕೆಂದರೆ ಇದು ಉತ್ಪಾದಕತೆಗೆ ಸಂಬಂಧಿಸಿದ ವಿಷಯ. ಮಾತ್ರವಲ್ಲದೆ ಕಂಪನಿಗಳಲ್ಲಿ ಕೋವಿಡ್ ಪೂರ್ವ ಸ್ಥಿತಿಯ ಕೆಲಸದ ಪದ್ಧತಿ, ಅದೇ ಸ್ವರೂಪದಲ್ಲಿ ಮರಳುವ ಸಾಧ್ಯತೆ ಇಲ್ಲʼʼ ಎಂದು ಮೈಕ್ರೊಸಾಫ್ಟ್ ಸಿಇಒ ಸತ್ಯ ನಾಡೆಳ್ಳಾ ತಿಳಿಸಿದ್ದಾರೆ.
ಕಂಪನಿಯ ಸಮೀಕ್ಷೆ ಪ್ರಕಾರ 80% ಮಂದಿ ತಮ್ಮ ಉತ್ಪಾದಕತೆ ಚೆನ್ನಾಗಿದೆ ಎಂದು ಭಾವಿಸಿದ್ದಾರೆ. ಆದರೆ ಮ್ಯಾನೇಜ್‌ಮೆಂಟ್ ಅದೇ ರೀತಿ ಚಿಂತಿಸುತ್ತಿಲ್ಲ. ಬದಲಿಗೆ ಉತ್ಪಾದಕತೆ ಕಡಿಮೆಯಾಗಿದೆ ಎಂದು ಭಾವಿಸಿದೆ. ಇದು ನಿರೀಕ್ಷೆ ಮತ್ತು ಭಾವನೆಗಳ ನಡುವೆ ವ್ಯತ್ಯಾಸವನ್ನು ಬಿಂಬಿಸಿದೆ ಎಂದು ಸತ್ಯ ನಾಡೆಳ್ಳಾ ತಿಳಿಸಿದರು.
ಕಾರ್ಪೊರೇಟ್ ವಲಯದ ಕಂಪನಿಗಳು ಬದಲಾಗುತ್ತಿರುವ ಕೆಲಸದ ಅಭ್ಯಾಸಗಳನ್ನು ನಿರ್ವಹಿಸುವ ಬಗ್ಗೆ ಪರಿಶೀಲಿಸುತ್ತಿವೆ ಎಂದು ಲಿಂಕ್ಡ್‌ಇನ್ ಸಿಇಒ ರಿಯಾನ್ ರೋಸಲಾನ್‌ಸ್ಕಿ ಹೇಳಿದ್ದಾರೆ.