ನವ ದೆಹಲಿ: ಮುಂದಿನ ಸೋಮವಾರದಿಂದ (GST rate hike) ದಿನ ನಿತ್ಯ ಬಳಕೆಯ ಹಾಲು, ಮೊಸರು, ಮಜ್ಜಿಗೆ, ಅಕ್ಕಿ, ರಾಗಿ, ಗೋಧಿಯ ದರಗಳು ಏರಿಕೆಯಾಗಲಿವೆ. ಹೋಟೆಲ್ ರೂಮ್, ಆಸ್ಪತ್ರೆ ವೆಚ್ಚ ಕೂಡ ಬಳಕೆದಾರರಿಗೆ ತುಟ್ಟಿಯಾಗಲಿದೆ. ಇತ್ತೀಚೆಗೆ ಚಂಡೀಗಢದಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ನಿತ್ಯೋಪಯೋಗಿ ವಸ್ತುಗಳ ಮೇಲೆ ನೀಡಲಾಗಿದ್ದ ಜಿಎಸ್‌ಟಿ ವಿನಾಯಿತಿಯನ್ನು ರದ್ದುಪಡಿಸಿರುವುದು ಕಾರಣ.
ಪ್ಯಾಕೇಟ್‌ಗಳಲ್ಲಿ ಮಾರಾಟ ಮಾಡುವ ಹಾಲು, ಮೊಸರು, ಮಜ್ಜಿಗೆ, ಅಕ್ಕಿ, ರಾಗಿ, ಗೋಧಿ ಮತ್ತಿತರ ಆಹಾರ ವಸ್ತುಗಳ ಮೇಲೆ ಈ ಹಿಂದೆ ನೀಡಿದ್ದ ಜಿಎಸ್‌ಟಿ ವಿನಾಯಿತಿಯನ್ನು ರದ್ದುಪಡಿಸಲಾಗಿದೆ. ಇದರ ಪರಿಣಾಮ ಪ್ಯಾಕೇಟ್‌ಗಳಲ್ಲಿ ಮಾರಾಟ ಮಾಡುವ ಹಾಲು, ಮಜ್ಜಿಗೆ, ಮೊಸರು, ಲಸ್ಸಿ ಇತ್ಯಾದಿಗಳ ಮೇಲೆ ೫% ಜಿಎಸ್‌ಟಿ ಅನ್ವಯವಾಗಲಿದೆ. ಈ ಹೊರೆಯನ್ನು ಕಂಪನಿಗಳು ಗ್ರಾಹಕರ ಮೇಲೆ ವರ್ಗಾಯಿಸಲಿವೆ. ಇದರ ಪರಿಣಾಮ ಗ್ರಾಹಕರ ಜೇಬಿಗೆ ಭಾರವಾಗಲಿದೆ.
ನಂದಿನಿ ಹಾಲು ದರ ಏರಿಕೆ ಸಂಭವ
ನಂದಿನಿ ಹಾಲು, ಮೊಸರು, ಮಜ್ಜಿಗೆಯನ್ನು ಪ್ಯಾಕೇಟ್‌ಗಳಲ್ಲಿ ವಿತರಿಸುವುದರಿಂದ ಅವುಗಳ ಮೇಲೆ ಕೂಡ 5% ಜಿಎಸ್‌ಟಿ ಅನ್ವಯವಾಗಲಿದೆ. ಹೀಗಾಗಿ ಅವುಗಳ ದರ ಏರಿಕೆಯಾಗುವ ನಿರೀಕ್ಷೆ ಇದೆ. ಕೆಎಂಎಫ್ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ನಂದಿನಿ ಹಾಲಿನ (ನೀಲಿ ಬಣ್ಣದ ಪ್ಯಾಕೇಟ್ ) ಪ್ರತಿ ಲೀಟರ್ ಪ್ಯಾಕೇಟ್ ದರ ೩೭ ರೂ.ಗಳಾಗಿದೆ. ಇದಕ್ಕೆ ೫% ಜಿಎಸ್‌ಟಿ ಸೇರಿಸಿದರೆ ದರದಲ್ಲಿ ೧.೮೦ ರೂ. ಹೆಚ್ಚಿಸಬೇಕಾಗುತ್ತದೆ. ನಂದಿನಿ ಹಾಲಿನಲ್ಲಿ ಭಿನ್ನ ದರದ ಉತ್ಪನ್ನಗಳಿದ್ದು, ದರದಲ್ಲಿ ಲೀಟರ್‌ಗೆ ೩ ರೂ. ತನಕ ಏರಿಕೆ ನಿರೀಕ್ಷಿಸಲಾಗಿದೆ.
ಹಣದುಬ್ಬರದಿಂದ ಬಳಲುತ್ತಿರುವ ಜನ ಸಾಮಾನ್ಯರಿಗೆ ಇದರಿಂದ ಮತ್ತಷ್ಟು ಹೊರೆ ಬೀಳಲಿದೆ. ಹಾಗಾದರೆ ಜಿಎಸ್‌ಟಿ ದರ ಪರಿಷ್ಕರಣೆಯಿಂದ ಯಾವುದು ದುಬಾರಿಯಾಗಲಿದೆ ಹಾಗೂ ಯಾವುದು ಅಗ್ಗವಾಗಲಿದೆ ಎಂಬುದನ್ನು ನೋಡೋಣ.
ಯಾವುದು ದುಬಾರಿಯಾಗಲಿದೆ?
ಪ್ಯಾಕೇಜ್ಡ್ ಮೊಸರು, ಮಜ್ಜಿಗೆ, ಲಸ್ಸಿ, ಜೇನುತುಪ್ಪ
ಪ್ರಿ-ಪ್ಯೇಕೇಜ್ಡ್ ಮತ್ತು ಪ್ರಿ-ಲೇಬಲ್ಡ್ ಉತ್ಪನ್ನಗಳು ದುಬಾರಿಯಾಗಲಿವೆ. ಪ್ಯಾಕ್‌ಗಳಲ್ಲಿ ಸಿದ್ಧಪಡಿಸಿ ಮಾರಾಟ ಮಾಡುವ ಪನೀರ್, ಹಾಲು, ಮೊಸರು, ಲಸ್ಸಿ, ಮಜ್ಜಿಗೆ, ಜೇನುತುಪ್ಪ, ಮೀನು ಮತ್ತು ಮಾಂಸ, ಬಾರ್ಲಿ, ಓಟ್ಸ್, ಜೋಳದ ಹಿಟ್ಟು, ಬೆಲ್ಲ, ಮಂಡಕ್ಕಿಗೆ ನೀಡಿದ್ದ ತೆರಿಗೆ ವಿನಾಯಿತಿ ರದ್ದಾಗಲಿದೆ. ಹಾಗೂ ಇವುಗಳಿಗೆ 5% ಜಿಎಸ್‌ಟಿ ಅನ್ವಯವಾಗುವುದು ಇದಕ್ಕೆ ಕಾರಣ. ಈ ಹಿಂದೆ ಈ ಎಲ್ಲ ಉತ್ಪನ್ನಗಳಿಗೆ ಜಿಎಸ್‌ಟಿ ಇರಲಿಲ್ಲ. ಶಾಪಿಂಗ್ ಮಾಲ್, ಸೂಪರ್ ಮಾರ್ಕೆಟ್‌ಗಳಿಂದ ಸಾಮಾನ್ಯ ಸ್ಟೋರ್‌ಗಳಲ್ಲಿಯೂ ಇಂಥ ಪ್ಯಾಕೇಜ್ಡ್ ಆಹಾರ ವಸ್ತುಗಳ ಮಾರಾಟ ಸಾಮಾನ್ಯವಾಗಿದೆ. ಹೀಗಾಗಿ ಗ್ರಾಹಕರ ಜೇಬಿಗೆ ಭಾರವಾಗಲಿದೆ.
ಪ್ಯಾಕೇಜ್ಡ್ ಹಿಟ್ಟು, ಅಕ್ಕಿ
ಬ್ರ್ಯಾಂಡ್ ಅಲ್ಲದಿದ್ದರೂ ಪ್ರಿ-ಪ್ಯಾಕೇಜ್ಡ್ ಮತ್ತು ಲೇಬಲ್ಡ್ ಆಗಿರುವ ಅಕ್ಕಿ, ಹಿಟ್ಟುಗಳ ಮೇಲೆ ೫% ಜಿಎಸ್‌ಟಿ ಅನ್ವಯವಾಗಲಿದ್ದು, ಅವುಗಳ ದರ ಏರಿಕೆಯಾಗಲಿದೆ. ಪ್ರಸ್ತುತ ಬ್ರ್ಯಾಂಡೆಡ್ ಉತ್ಪನ್ನಗಳಿಗೆ ಮಾತ್ರ ೫% ಜಿಎಸ್‌ಟಿ ಇದೆ.
ಚೆಕ್ ಪುಸ್ತಕ
ಬ್ಯಾಂಕ್‌ಗಳು ನೀಡುವ ಚೆಕ್ ಪುಸ್ತಕಗಳ ಮೇಲೆ ೧೮% ಜಿಎಸ್‌ಟಿ ಅನ್ವಯವಾಗಲಿದೆ. ಹೀಗಾಗಿ ಚೆಕ್ ಬುಕ್ ವೆಚ್ಚ ಏರಿಕೆಯಾಗಲಿದೆ.
ಆಸ್ಪತ್ರೆಯಲ್ಲಿ ಕೊಠಡಿ ಬಾಡಿಗೆ
ಆಸ್ಪತ್ರೆಗಳಲ್ಲಿ ದಿನಕ್ಕೆ ೫,೦೦೦ ರೂ.ಗೂ ಹೆಚ್ಚಿನ ಕೊಠಡಿ ಬಾಡಿಗೆಗೆ ( ಐಸಿಯು ಹೊರತುಪಡಿಸಿ) ೫% ಜಿಎಸ್‌ಟಿ ಅನ್ವಯಿಸಲಿದೆ.
ಹೋಟೆಲ್ ರೂಮ್ ಬಾಡಿಗೆ
ಹೋಟೆಲ್‌ಗಳಲ್ಲಿ ದಿನಕ್ಕೆ ೧,೦೦೦ ರೂ.ಗಿಂತ ಕಡಿಮೆ ಬಾಡಿಗೆಯ ರೂಮ್‌ಗಳಲ್ಲಿ ವಾಸ್ತವ್ಯಕ್ಕೆ ೧೨% ಜಿಎಸ್‌ಟಿ ಅನ್ವಯವಾಗಲಿದೆ. ಈ ಹಿಂದೆ ತೆರಿಗೆ ವಿನಾಯಿತಿ ಇತ್ತು. ಹೀಗಾಗಿ ಹೋಟೆಲ್ ಬಾಡಿಗೆ ದರ ಹೆಚ್ಚಳವಾಗಲಿದೆ.
ಇ-ತ್ಯಾಜ್ಯಗಳಿಗೆ ಜಿಎಸ್‌ಟಿ ಈಗಿನ ೫%ರಿಂದ ೧೮%ಕ್ಕೆ ಏರಿಕೆಯಾಗಲಿದೆ.
ಅಂಚೆ ಸೇವೆ
ಪೋಸ್ಟ್ ಕಾರ್ಡ್, ೧೦ ಗ್ರಾಮ್‌ಗಿಂತ ಕೆಳಗಿನ ಎನ್ವಲಪ್ ಹೊರತುಪಡಿಸಿ ಉಳಿದ ಅಂಚೆ ಇಲಾಖೆ ಸೇವೆಗೆ ತೆರಿಗೆ ವಿನಾಯಿತಿಯನ್ನು ರದ್ದುಪಡಿಸಲಾಗಿದ್ದು, ಅವುಗಳು ತುಟ್ಟಿಯಾಗಲಿದೆ.
ಸಕ್ಕರೆ, ನೇಚ್ಯುರಲ್ ಫೈಬರ್ ದಾಸ್ತಾನು, ವೇರ್‌ಹೌಸ್ (ಗೋದಾಮು) ಸೇವೆಗೆ ತೆರಿಗೆ ವಿನಾಯಿತಿ ರದ್ದಾಗಲಿದೆ.
ಎಲ್‌ಇಡಿ ಬಲ್ಬ್
ಎಲ್‌ಇಡಿ ಬಲ್ಬ್, ಮುದ್ರಣಕ್ಕೆ ಬಳಸುವ ಶಾಯಿ, ಚೂರಿ, ಬ್ಲೇಡ್, ವಿದ್ಯುತ್ ಚಾಲಿತ ಪಂಪ್, ಡೇರಿ ಯಂತ್ರೋಪಕರಣಗಳ ಮೇಲಿನ ಜಿಎಸ್‌ಟಿಯನ್ನು ೧೨%ರಿಂದ ೧೮%ಕ್ಕೆ ಏರಿಸಲಾಗುವುದು.
ಧಾನ್ಯಗಳ ಮಿಲ್‌ಗಳಲ್ಲಿ ಬಳಸುವ ಯಂತ್ರೋಪಕರಣಗಳ ಮೇಲಿನ ಜಿಎಸ್‌ಟಿ ೫%ರಿಂದ ೧೮%ಕ್ಕೆ ಏರಿಕೆಯಾಗಲಿದೆ.
ಸೋಲಾರ್ ವಾಟರ್ ಹೀಟರ್, ಸಂಸ್ಕರಿತ ಲೆದರ್ ಮೇಲೆ ಜಿಎಸ್‌ಟಿ ೧೨%ಕ್ಕೆ ಏರಿಕೆಯಾಗಲಿದೆ.
ಪೆಟ್ರೋಲಿಯಂ ಮೂಲದ ನಿರ್ದಿಷ್ಟ ಉತ್ಪನ್ನಗಳ ಮೇಲೆ ಜಿಎಸ್‌ಟಿ ೫%ಯಿಂದ ೧೮%ಕ್ಕೆ ವೃದ್ಧಿಸಲಿದೆ.
ಈಶಾನ್ಯ ರಾಜ್ಯಗಳಿಗೆ ಬಿಸಿನೆಸ್ ಕ್ಲಾಸ್ ವಿಮಾನಯಾನಕ್ಕೆ ತೆರಿಗೆ ವಿನಾಯಿತಿ ರದ್ದಾಗಲಿದೆ.
ಕಸಾಯಿಖಾನೆ ಸೇವೆಗೆ ನೀಡಿದ್ದ ತೆರಿಗೆ ವಿನಾಯಿತಿ ರದ್ದಾಗಲಿದೆ.
ಯಾವುದು ಅಗ್ಗ?
ರೋಪ್‌ವೇ ಪ್ರಯಾಣ, ಲಾಜಿಸ್ಟಿಕ್ಸ್
ರೋಪ್‌ವೇ ಪ್ರಯಾಣ ದರ ಕಡಿಮೆಯಾಗಲಿದೆ. ರೋಪ್‌ವೇಯ ಪ್ರಯಾಣ ದರ ಮತ್ತು ಸರಕು ಸಾಗಣೆ ದರದ ಜಿಎಸ್‌ಟಿಯನ್ನು ಶೇ.೧೮ರಿಂದ ಶೇ.೫ಕ್ಕೆ ಇಳಿಸಲಾಗಿದೆ.
ರಸ್ತೆ ಮೂಲಕ ಸರಕು ಸಾಗಣೆ ದರವೂ ಕಡಿಮೆಯಾಗಲಿದೆ. ಇದಕ್ಕೆ ವಿಧಿಸಲಾಗುತ್ತಿದ್ದ ಜಿಎಸ್‌ಟಿಯನ್ನು ಶೇ. ೧೮ರಿಂದ ಶೇ.೧೨ ಕ್ಕೆ ಇಳಿಸಲಾಗಿದೆ.
ಆರ್ಥೋಪೆಡಿಕ್ ಉಪಕರಣ
ಆರ್ಥೋಪೆಡಿಕ್ ಉಪಕರಣಗಳ ದರ ಇಳಿಕೆಯಾಗಲಿದೆ. ಸ್ಪ್ಲಿಂಟ್‌ಗಳು ಮತ್ತು ಮೂಳೆ ಮುರಿದಾಗ ಬಳಸುವ ಸಲಕರಣೆಗಳು, ದೇಹದ ಕೃತಕ ಭಾಗಗಳು, ದೇಹಕ್ಕೆ ಅಳವಡಿಸಿದ ಸಲಕರೆಣೆಗಳು ಮತ್ತು ದೇಹಕ್ಕೆ ಸಂಬಂಧಿಸಿದಂತೆ ಹೊರಗೆ ಬಳಸುವ ಸಲಕರಣೆಗಳ ಜಿಎಸ್‌ಟಿಯನ್ನು ಶೇ. ೧೨ ರಿಂದ ಶೇ.೫ಕ್ಕೆ ಇಳಿಸಲಾಗಿದೆ.
ರಕ್ಷಣಾ ಪಡೆಗಳು ಬಳಸುವ ಸಲಕರಣೆಗಳ ಜಿಎಸ್‌ಟಿಯನ್ನು ಇಳಿಸಲಾಗಿದ್ದು, ಇವುಗಳ ದರ ಕಡಿಮೆಯಾಗಲಿದೆ.